ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡದಲ್ಲಿ ಓದುಗರು ಇದ್ದಾರೆ. ಆದರೆ ನಾವು ಅವರಿಗೆ ಪುಸ್ತಕಗಳನ್ನು ಸರಿಯಾಗಿ ತಲುಪಿಸಿಲ್ಲ. ಎಲ್ಲದಕ್ಕೂ ಮಾರುಕಟ್ಟೆಇದೆ. ಆದರೆ ಪುಸ್ತಕಗಳಿಗೆ ನಾವು ಸೂಕ್ತ ಮಾರುಕಟ್ಟೆ ರೂಪಿಸಿಲ್ಲ. ಇನ್ನು ಮುಂದೆ ಪುಸ್ತಕಗಳ ವಿಚಾರದಲ್ಲಿ ಅಂತಹದ್ದೊಂದು ಶ್ರದ್ಧೆ ತೋರಿಸಬೇಕಿದೆ. ನಾವೆಲ್ಲರೂ ಜೊತೆಯಾಗಿ ಸಾಗಿ ಕನ್ನಡ ಕಟ್ಟುವ ಕೆಲಸ ಮಾಡೋಣ ಎಂದು ವೀರಲೋಕ ಪುಸ್ತಕ ಪ್ರಕಾಶನದ ವೀರಕಪುತ್ರ ಎಂ.ಶ್ರೀನಿವಾಸ್ ಮನವಿ ಮಾಡಿದರು.ಜೂನ್ 26, 27 ಮತ್ತು 28ರಂದು ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಆಯೋಜನೆಗೊಳ್ಳುತ್ತಿರುವ ವೀರಲೋಕ ಪುಸ್ತಕ ಸಂತೆಯ 5 ನೇ ಆವೃತ್ತಿಯ ಹಿನ್ನೆಲೆಯಲ್ಲಿ, ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ನಾವು ಕನ್ನಡ ಪುಸ್ತಕಗಳನ್ನು ಅಪರೂಪದ ವಸ್ತುಗಳನ್ನಾಗಿಸಿ ಕೇವಲ ಕಪಾಟಿಗೆ ಸೀಮಿತಗೊಳಿಸಿ ಬಿಟ್ಟಿದ್ದೇವೆ, ಅದು ತಪ್ಪು. ಕನ್ನಡ ಪುಸ್ತಕ ಲೋಕಕ್ಕೆ ಮತ್ತೆ ವೈಭವತರಲು ಮತ್ತು ಪುಸ್ತಕಗಳನ್ನು ಕಟ್ಟಕಡೆಯ ಓದುಗನಿಗೂ ತಲುಪಿಸಬೇಕೆಂಬ ಆಶಯದೊಂದಿಗೆ ಈ ಬಾರಿಯ ಪುಸ್ತಕ ಸಂತೆಯ ಪ್ರಮುಖ ಆಕರ್ಷಣೆಯಾಗಿ "ಓಲೆ " ಎಂಬ ವಿಶಿಷ್ಟ ವೇದಿಕೆಯನ್ನುರೂಪಿಸಲಾಗುತ್ತಿದೆ. ಇದು ಓದುಗ ಮತ್ತು ಲೇಖಕರ ಸಮಾಗಮದ ವೇದಿಕೆಯಾಗಿದ್ದು, ಇಬ್ಬರ ನಡುವೆ ಮುಖಾಮುಖಿ ಸಂವಾದಕ್ಕೆ ನೆರವಾಗಲಿದೆ. ಸಂತೆಯ ಮೂರೂ ದಿನಗಳ ಕಾಲ ಸುಮಾರು 50 ರಿಂದ 60 ಜನ ಪ್ರಮುಖ ಲೇಖಕರು ಸದಾಓದುಗರೊಂದಿಗೆ ನೇರ ಮಾತುಕತೆಗೆ ಲಭ್ಯವಿರುತ್ತಾರೆಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಎಲ್ಲರೂ ಸೇರಿ ಪುಸ್ತಕ ಸಂತೆಯನ್ನು ಯಶಸ್ವಿಗೊಳಿಸೋಣ. ಪ್ರತಿಯೊಬ್ಬರ ಮನೆಯಲ್ಲೂ ಪುಸ್ತಕಗಳು ಇರಬೇಕು. ಮಕ್ಕಳು ಮೊದಲು ಪುಸ್ತಕಗಳನ್ನು ನೋಡುತ್ತಾರೆ, ಆ ನಂತರವೇ ಓದಲು ಪ್ರೇರೇಪಿತರಾಗುತ್ತಾರೆ. ಹಾಗಾಗಿ, ಇಂದಿನ ದಿನಗಳಲ್ಲಿ ಮೊಬೈಲ್‌ ಅನ್ನು ಬದಿಗಿಟ್ಟು ಮಕ್ಕಳ ಕೈಗೆ ಪುಸ್ತಕಗಳನ್ನು ನೀಡುವ ಹವ್ಯಾಸ ಬೆಳೆಸಬೇಕು ಎಂದು ತಿಳಿಸಿದರು.ಹಿರಿಯ ಸಾಹಿತಿ ಪದ್ಮಪ್ರಸಾದ್, ಗಾಯಕ ಮಲ್ಲಿಕಾರ್ಜುನ ಕೆಂಕೆರೆ, ಕನ್ನಡಪರ ಹೋರಾಟಗಾರ ಧನಿಯಾಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಪುಸ್ತಕ ಸಂತೆಯ ಒಡನಾಡಿ ಗುರನಾಥ್‌ ರಾಜಗಿರಾ,ಅನಂತ್‌ ಕುಣಿಗಲ್, ಸೌಮ್ಯ, ಆಶ್ರಯ ಫೌಂಡೇಶನ್‌ನ ನರೇಂದ್ರಬಾಬು, ತುಮಕೂರುಕೃಷ್ಣ, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್, ರಾಜೇಶ್‌ಕಂಬೇಗೌಡ, ಶ್ರೀಶೈಲ ಫೌಂಡೇಶನ್ ಶೈಲಜಾ,ರೇವಣ್ಣ ಸಿದ್ದಪ್ಪ, ಪರಿಸರವಾದಿ ಬೇವಿನ ಮರದ ಸಿದ್ದಪ್ಪ, ಅನಿಲ್ ಕುಮಾರ್,ಉಮಾ ಮಹೇಶ್, ಅಜಯ್‌ಕುಮಾರ್, ಜಯಪ್ರಕಾಶ್, ರಾಣಿಚಂದ್ರಶೇಖರ್, ಕಿರಣ, ನವೀನ್‌ಕುಮಾರ್ ಸೇರಿದಂತೆಹಲವರು ಸಭೆಯಲ್ಲಿ ಭಾಗವಹಿಸಿ ಪುಸ್ತಕ ಸಂತೆ ಯಶಸ್ಸಿಗೆ ಪೂರಕ ಸಲಹೆ ನೀಡಿದರು.