ಸ್ಟಾರ್‌ಚಂದ್ರು, ಸುಮಲತಾಗೆ ಬೆಂಬಲವಿಲ್ಲ: ಡಾ.ರವೀಂದ್ರ

| Published : Mar 06 2024, 02:16 AM IST

ಸಾರಾಂಶ

ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರಪಕ್ಷದ ರಾಜ್ಯ ನಾಯಕರು, ಜಿಲ್ಲಾ ನಾಯಕರ ನಡವಳಿಕೆಯಿಂದ ತೀವ್ರ ಬೇಸರಗೊಂಡು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪತ್ರಕರ್ತರೊಂದಿಗೆ ದುಃಖ-ದುಮ್ಮಾನ ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಚಂದ್ರು, ಸುಮಲತಾ ಅಖಾಡಕ್ಕಿಳಿದರೆ ನನ್ನ ಬೆಂಬಲವಿರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ತಿಳಿಸಿದರು.

ಪಕ್ಷದ ರಾಜ್ಯ ನಾಯಕರು, ಜಿಲ್ಲಾ ನಾಯಕರ ನಡವಳಿಕೆಯಿಂದ ತೀವ್ರ ಬೇಸರಗೊಂಡು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪತ್ರಕರ್ತರೊಂದಿಗೆ ದುಃಖ-ದುಮ್ಮಾನ ಹಂಚಿಕೊಂಡರು.

ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ. ನಾಯಕರ ನಿರ್ಧಾರದ ಬಗ್ಗೆ ನನಗೆ ಅಸಹನೆ ಇದೆ. ಅದಕ್ಕಾಗಿ ಅವರನ್ನು ಬೆಂಬಲಿಸುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಸುಮಲತಾ ಪರ ಕಳೆದ ಚುನಾವಣೆಯಲ್ಲಿ ಸಾಕಷ್ಟು ಶ್ರಮಿಸಿದೆ. ಆದರೆ, ಗೆದ್ದ ಮೇಲೆ ನಮಗೆ ಯಾವ ಬೆಲೆಯೂ ಸಿಗದಿದ್ದರಿಂದ ದೂರವಾಗಿದ್ದೇವೆ. ಮತ್ತೆ ಅವರೊಂದಿಗೆ ಹೋಗುವ ಪ್ರಶ್ನೆಯೇ ಇಲ್ಲ. ಇವರಿಬ್ಬರೂ ಅಖಾಡದಲ್ಲಿ ಉಳಿದಿದ್ದೇ ಆದಲ್ಲಿ ನಾನು ಯಾರನ್ನೂ ಬೆಂಬಲಿಸದೆ ನನ್ನೂರಿನ ಜಮೀನಿನಲ್ಲಿರುತ್ತೇನೆ ಎಂದು ಖಡಕ್ಕಾಗಿ ಹೇಳಿದರು.

ನನಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಮೇಲುಕೋಟೆ ಕ್ಷೇತ್ರದ ಟಿಕೆಟ್ ಸಿಗಬೇಕಿತ್ತು. ಟಿಕೆಟ್ ಸಿಗುವ ಭರವಸೆಯೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಹೋರಾಟ, ಭಾರತ್‌ ಜೋಡೋ ಯಾತ್ರೆ ಸೇರಿದಂತೆ ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಕೊನೆಗೆ ನನಗೆ ಟಿಕೆಟ್ ತಪ್ಪಿಸಿ ರೈತಸಂಘವನ್ನು ಬೆಂಬಲಿಸಲಾಯಿತು. ಲೋಕಸಭೆ ಚುನಾವಣೆಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಆರಂಭದಲ್ಲಿ ನನ್ನ ಹೆಸರನ್ನು ಪ್ರಸ್ತಾಪ ಮಾಡುತ್ತಾ ಬಂದಿದ್ದರು. ಆದರೆ, ಕೊನೆಯಲ್ಲಿ ಸೌಜನ್ಯಕ್ಕೂ ನನ್ನೊಂದಿಗೆ ಮಾತುಕತೆ ನಡೆಸದೆ ಅಭ್ಯರ್ಥಿಯನ್ನು ಕರೆತಂದಿದ್ದಾರೆ. ಹಣವಿರುವವರಿಗೆ ಪ್ರಾಶಸ್ತ್ಯ ನೀಡುವುದಾದರೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇವರಿಗೆ ಗುಲಾಮರಾಗೇ ಇರಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.

ಹಣಬಲವಿದ್ದವರೆಗೆ ಚುನಾವಣಾ ಟಿಕೆಟ್ ನೀಡುತ್ತಿರುವುದು ಅಸಹ್ಯಕರ ಬೆಳವಣಿಗೆ. ವ್ಯಕ್ತಿತ್ವವಿರುವವರಿಗೆ, ಜನಪರ ಕಾಳಜಿ ಇರುವವರಿಗೆ, ಜನರ ಸಂಪರ್ಕದಲ್ಲಿರುವವರಿಗೆ, ಪಕ್ಷದಲ್ಲಿ ದುಡಿದವರಿಗೆ ಬೆಲೆಯೇ ಇಲ್ಲದಂತಾಗಿದೆ. ಹಣಬಲವೊಂದೇ ಮುಖ್ಯವಾಗಿದ್ದರೆ ೨೦೧೯ರ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಬೇಕಿತ್ತು. ಐದು ವರ್ಷಗಳ ಹಿಂದೆ ನಡೆದ ಇತಿಹಾಸದಿಂದ ಕಾಂಗ್ರೆಸ್ ನಾಯಕರು ಪಾಠ ಕಲಿಯದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರ ಸಿಗುವ ಮುನ್ನ ನಾಯಕರಿಗೆ ಒಂದು ಮುಖವಿರುತ್ತದೆ. ಅಧಿಕಾರ ಬಂದ ನಂತರದಲ್ಲಿ ಮತ್ತೊಂದು ಮುಖವನ್ನು ತೋರಿಸುತ್ತಾರೆ. ಅಧಿಕಾರವಿಲ್ಲದಿದ್ದಾಗ ನಮ್ಮನ್ನು ಹೆಸರಿಡಿದು ಕರೆದು ಮಾತನಾಡಿಸುವವರು ಅಧಿಕಾರ ಬಂದ ನಂತರ ಎದುರಿಗೆ ಸಿಕ್ಕರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಈ ಅನುಭವ ನನಗೆ ಸಾಕಷ್ಟು ಬಾರಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಚಿತ ಆರೋಗ್ಯದ ಒಂದು ಪ್ರೆಸೆಂಟೇಷನ್ ಕೊಡುವುದಕ್ಕೆ ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಭೇಟಿ ಮಾಡಲು ಸಾಧ್ಯವಾಗದೆ ದೆಹಲಿಗೆ ಹೋಗಿದ್ದೆ. ಅಲ್ಲಿಯೂ ಅವರ ಭೇಟಿ ಸಾಧ್ಯವಾಗಲೇ ಇಲ್ಲ ಎಂದು ಅಸಮಾಧಾನದಿಂದ ನುಡಿದರು.

ಈಗ ಎಲ್ಲವೂ ಮುಗಿದುಹೋಗಿದೆ. ಮಾತುಕತೆಯ ಹಂತವನ್ನು ಮೀರಿ ಹೊರಬಂದಿದ್ದೇನೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ನಾನು, ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ಇರುತ್ತೇನೆ. ಸದ್ಯಕ್ಕೆ ಯಾವುದೇ ಪಕ್ಷವನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಲಿ

ಲೋಕಸಭಾ ಚುನಾವಣೆಯಲ್ಲಿ ಸಿನಿಮಾದವರು, ಹೊರಗಿನವರಿಗೆ ಟಿಕೆಟ್ ನೀಡುವುದು ಬೇಡ, ಕಾಂಗ್ರೆಸ್ ಪಕ್ಷದಿಂದ ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಬೇಕೆನ್ನುವುದು ಎಲ್ಲಾ ಕಾರ್ಯಕರ್ತರ ಅಭಿಪ್ರಾಯವಾಗಿದ್ದರೂ ಹೊರಗಿನವರನ್ನೇ ನಾಯಕರು ಕರೆತರುತ್ತಿದ್ದಾರೆ ಎಂದು ಡಾ. ಎಚ್.ಎನ್.ರವೀಂದ್ರ ಆರೋಪಿಸಿದರು.

ಟಿಕೆಟ್‌ ಕೊಡುವಾಗ ಹಣಕ್ಕೆ ಆದ್ಯತೆ ಕೊಟ್ಟರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶವೇ ಈ ಬಾರಿ ನಮಗೆ ಪುನರಾವರ್ತನೆಯಾಗಲಿದೆ. ಇದು ಗಂಭೀರ ವಿಚಾರ. ಹಾಗೇನಾದರೂ ಆದರೆ ಅದು ನಮ್ಮ ಪಕ್ಷದ ಅಧ್ಯಕ್ಷರಿಗೆ ಎಲ್ಲಾ ರೀತಿಯಲ್ಲೂ ಹಿನ್ನಡೆಯಾಗಲಿದೆ ಎಂದು ಚುನಾವಣಾ ಉಸ್ತುವಾರಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದಾಗಿ ಹೇಳಿದರು.

ಕಾರ್ಯಕರ್ತರಾಗಿ, ಸ್ಥಳೀಯ ನಾಯಕರಾಗಿ ದುಡಿದವರು ಯಾರೂ ಈಗ ನಾಯಕರ ಬಳಿ ಇಲ್ಲ. ಈಗ ಅವರ ಬಳಿ ಇರುವ ವರ್ಗವೇ ಬೇರೆಯಾಗಿದೆ. ಇಲ್ಲೂ ಕೂಡ ಒಂದು ಬಿರುಕಿದೆ. ಅದು ಕಂದಕವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಅಭಿಪ್ರಾಯ ಸಂಗ್ರಹವೆನ್ನುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ತಿಳಿಸಿದರು.