ಧರ್ಮಸ್ಥಳ ವಿರುದ್ಧ ಅಪಪ್ರಚಾರ ಸಹಿಸಲ್ಲ

| Published : Aug 23 2025, 02:00 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ನಿರಂತರ ಅಪಪ್ರಚಾರ ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ನಿರಂತರ ಅಪಪ್ರಚಾರ ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಭದ್ರಮ್ಮ ವೃತ್ತದ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿಬಂದ ಬಿಜೆಪಿ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀಕ್ಷೇತ್ರ ಧರ್ಮಸ್ಥಳ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ. ಇಲ್ಲಿನ ಮಂಜುನಾಥ ಸ್ವಾಮಿಗೆ ದೇಶಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ. ದಿನನಿತ್ಯ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಹೋಗಿ ಬರುತ್ತಾರೆ. ಈ ಕ್ಷೇತ್ರವನ್ನುಅವಮಾನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆ ಅಪಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ಹಾಗೂ ಹಿಂದೂಗಳ ಶ್ರದ್ಧಾಭಕ್ತಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಹುನ್ನಾರದ ಕಿಡಿಗೇಡಿಗಳು ಹಾಗೂ ಇವರಿಗೆ ಕುಮ್ಮಕ್ಕು ನೀಡುವ ಷಡ್ಯಂತ್ರ ನಡೆದಿದೆ. ಭಾರತ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೆ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರ ಜನರ ಲಕ್ಷಾಂತರ ರುಪಾಯಿ ವ್ಯಯಿಸಿ, ಆತ ಹೇಳಿದ ಕಡೆಯೆಲ್ಲಾ ಗುಂಡಿಗಳನ್ನು ತೋಡಿದೆ. ಆದರೆ ಈ ಅನಾಮಿಕ ವ್ಯಕ್ತಿಯ ಹಿಂದಿರುವ ದುಷ್ಟ ವ್ಯಕ್ತಿಗಳು ಯಾರು, ಅವರು ಮಾಡುತ್ತಿರುವ ಸಂಚುಗಳೇನು ಎಂಬುದನ್ನು ರಾಜ್ಯ ಸರ್ಕಾರ ಇದುವರೆಗೂ ರಾಜ್ಯದ ಜನರಿಗೆ ತಿಳಿಸಿಲ್ಲ. ಅಂತಹ ದುಷ್ಟರನ್ನುತಕ್ಷಣ ಬಂಧಿಸಿ, ಧರ್ಮಸ್ಥಳ ವಿರುದ್ಧ ನಡೆದಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು ಎಂದು ರವಿಶಂಕರ್ ಹೆಬ್ಬಾಕ ಒತ್ತಾಯಿಸಿದರು.ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಹಿಂದೂಗಳ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ಪಾವಿತ್ರತೆಗೆ ಧಕ್ಕೆ ತರುವ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ತೇಜೋವಧೆ ಮಾಡುವ ಹುನ್ನಾರಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಇದರ ಹಿಂದೆ ಪಿತೂರಿ ನಡೆಸಿರುವವರನ್ನು ಸರ್ಕಾರ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು.ಧರ್ಮಸ್ಥಳ ದೇವಾಲಯ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.ಇದು ಹಿಂದೂಗಳ ಭಾವನೆ ಕೆರಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ಕುತಂತ್ರಿಗಳ ಕೃತ್ಯವಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ಸತ್ಯಮಂಗಲ ಜಗದೀಶ್, ಜ್ಯೋತಿ ತಿಪ್ಪೇಸ್ವಾಮಿ, ನಗರ ಅಧ್ಯಕ್ಷ ಕೆ.ಸಂದೀಪ್, ಮಾಜಿ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎ.ಆಂಜನಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಮುಖಂಡರಾದ ಸಿ.ಎನ್.ರಮೇಶ್, ವಿಷ್ಣುವರ್ಧನ್, ಮಲ್ಲಿಕಾರ್ಜುನ್, ಪುಟ್ಟರಾಜು, ಕೊಪ್ಪಲ್ ನಾಗರಾಜ್, ರಾಜಶೇಖರ್, ಆಂಜನಮೂರ್ತಿ, ಹನುಮಂತರಾಜು, ಹನುಮಂತರಾಯಪ್ಪ, ಗಂಗೇಶ್ ಹದ್ದಿನಕಲ್ಲು, ಇಂದ್ರಕುಮಾರ್, ಅಕ್ಷಯ್‌ಚೌಧರಿ, ನಿಸರ್ಗರಮೇಶ್, ವಿಜಯ ಭಾಸ್ಕರ್, ಆದ್ಯ, ಲತಾಬಾಬು, ರವಿ, ನಾಗರಾಜರಾವ್ ಮೊದಲಾದವರು ಭಾಗವಹಿಸಿದ್ದರು.