ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಟ್ರ್ಯಾಕ್ಟರ್, ಕ್ರ್ಯೂಸರ್ ನಗರಕ್ಕೆ ಬರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ನಿರಾಸೆ ಉಂಟು ಮಾಡಿತ್ತು. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಾವು ಯೋಜನೆ ರೂಪಿಸಿದ್ದೇವೆ. ನಮ್ಮ ಹೋರಾಟಕ್ಕೆ ಮಣಿದು ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್, ಎಸ್ಪಿ ಮೂವರು ಬಂದು ನಮ್ಮ ಜೊತೆ ಚರ್ಚೆ ಮಾಡಿ, ನಮ್ಮ ಹೋರಾಟಕ್ಕೆ ಅನುಮತಿ ನೀಡಿದ್ದಾರೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಜತೆಗೆ ಸೋಮವಾರ ಗಾಂಧಿಭವನದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಶಾಂತರೀತಿಯಿಂದ ಹೋರಾಟ ಮಾಡಲು ಅವಕಾಶ ನೀಡಿದೆ. ಯಾರೂ ಭಾವೋದ್ರೇಕಕ್ಕೆ ಒಳಗಾಗದೇ ಪ್ರತಿಭಟನೆ ಮಾಡಬೇಕು. ನಮ್ಮ ಹೋರಾಟಕ್ಕೆ ಸುವರ್ಣ ವಿಧಾನಸೌಧದ ಎದುರು ಕೊಂಡಸಕೊಪ್ಪ ಗ್ರಾಮದ ಬಳಿ ಸ್ಥಳವನ್ನು ನಿಗದಿಗೊಳಿಸಲಾಗಿದೆ. ಯಾವುದೇ ಭಯ ಇಲ್ಲದೆ ಜನರು ಪ್ರತಿಭಟನೆಗೆ ಆಗಮಿಸಬೇಕು ಎಂದು ಕರೆ ನೀಡಿದರು.ಹೋರಾಟಕ್ಕೆ ಆಗಮಿಸುವ ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ತರಬಾರದು. ಟ್ರ್ಯಾಕ್ಟರ್‌ಗಳನ್ನು ಪ್ರತಿಭಟನೆಗೆ ತರುವುದರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಯಾರೂ ಟ್ರ್ಯಾಕ್ಟರ್‌ಗಳನ್ನು ತರಬಾರದು. ಇತರೆ ವಾಹನಗಳನ್ನು ತರುವಂತೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ. ನಾವು ಮೊದಲು ಸಮಾವೇಶ ಮಾಡುತ್ತೇವೆ. 2ಎ ಮೀಸಲಾತಿ ಮತ್ತು ಕೇಂದ್ರದ ಓಬಿಸಿ ಪಟ್ಟಿಗೆ ಕೇಂದ್ರಕ್ಕೆ ಶಿಫಾರಸ್ ಮಾಡುವ ಆದೇಶ ಪತ್ರ ಕೊಡದೇ ಇದ್ದಲ್ಲಿ ನಾವೆಲ್ಲರೂ ಶಾಂತಿಯುತವಾಗಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಯತ್ನ ಮಾಡುತ್ತೇವೆ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮುತ್ತಿಗೆ ಹಾಕುವುದು ಅಷ್ಟೇ ಸತ್ಯ. ಈಗಿನ ಸರ್ಕಾರದ ಸ್ಥಿತಿ ಹೀಗಿದೆ. ಇದರ ನಡುವೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.ಸ್ಥಳ ಪರಿಶೀಲನೆ:
ಬಳಿಕ ಸುವರ್ಣ ವಿಧಾನಸೌಧದ ಬಳಿಯ ಕೊಂಡಸಕೊಪ್ಪ ಗ್ರಾಮದ ಬಳಿ ಪಂಚಮಸಾಲಿ ಸಮಾಜದ ಹೋರಾಟಕ್ಕೆ ನಿಗದಿಪಡಿಸಲಾದ ಸ್ಥಳವನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಮ್ಮ ಹೋರಾಟಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಅವರಿಗೆಲ್ಲ ಇಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ವಕೀಲರು, ರೈತರು ಸೇರಿದಂತೆ ಲಕ್ಷಾಂತರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.ಸರ್ಕಾರ ಏನೇ ಒತ್ತಡ ತಂದರೂ ಅದನ್ನು ಮೀರಿ ಜನರು ಬರಬೇಕು. ಸಚಿವರು, ಶಾಸಕರು ಮುಖ್ಯವಲ್ಲ. ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಸಮಾಜದ ಋಣದ ಹಿನ್ನೆಲೆಯಲ್ಲಿ ಎಲ್ಲರೂ ಬರಬೇಕು.-ಬಸವಜಯ ಮೃತ್ಯುಂಜಯ ಸ್ವಾಮೀಜಿ,
ಕೂಡಲಸಂಗಮ.ಪಂಚಮಸಾಲಿ ಹೋರಾಟದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಜಿಲ್ಲಾಡಳಿತಕ್ಕೆ ಎಷ್ಟು ಜನ ಬರುತ್ತಾರೆ, ಎಲ್ಲಿ ಅವರನ್ನು ಕೂಡಿಸಬೇಕು ಎನ್ನುವುದು ಸ್ಪಷ್ಟ ಮಾಹಿತಿ ಇರಲಿಲ್ಲ. ಜನಸಾಗರ ಸೇರುವಾಗ ಯಾವುದೇ ತೊಂದರೆ ಆಗಬಾರದೆಂದು ಶಾಂತ ರೀತಿ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಟ್ರ್ಯಾಕ್ಟರ್ ಬೇಡ ಅಂದಿದ್ದಕ್ಕೆ ಸ್ವಾಮೀಜಿ ಅವರು ಒಪ್ಪಿಕೊಂಡಿದ್ದಾರೆ. ಇನ್ನುಳಿದಂತೆ ಕ್ರೂಸರ್ ಸೇರಿ ಬೇರೆ ವಾಹನದಲ್ಲಿ ಬರಬಹುದು. ನಾವು ಅನುಮತಿ ಕೊಟ್ಟಿದ್ದೇವೆ. ಜಾಗ ಕೂಡ ಅಂತಿಮವಾಗಿದೆ.- ಮೊಹಮ್ಮದ್ ರೋಷನ್,
ಜಿಲ್ಲಾಧಿಕಾರಿ.ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಶಾಂತರೀತಿಯಿಂದ ಹೋರಾಟ ಮಾಡುವಂತೆ ಅನುಮತಿ ನೀಡಿ, ಕೊಂಡಸಕೊಪ್ಪ ಬಳಿ ಜಾಗವನ್ನು ನಿಗದಿ ಮಾಡಲಾಗಿದೆ. ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಾವು ಅವಕಾಶ ಕೊಡುವುದಿಲ್ಲ.
- ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪೊಲೀಸ್ ಆಯುಕ್ತ, ಬೆಳಗಾವಿ