ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ನಡೆದಿಲ್ಲ: ತಿಮ್ಮಾಪುರ

| Published : Nov 06 2024, 12:34 AM IST

ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ನಡೆದಿಲ್ಲ: ತಿಮ್ಮಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದಾಗಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಸರ್ಕಾರ ಯೋಚಿಸಿದೆ. ಈ ಕುರಿತು ಮುಖ್ಯಮಂತ್ರಿಗೆ ತಿಳಿಸಿಲ್ಲ. ಮುಂದಿನ ದಿನಗಳಲ್ಲಿ ಅವರಿಂದ ಅನುಮತಿ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ತಿಮ್ಮಾಪುರ ಹೇಳಿದರು.

ಹುಬ್ಬಳ್ಳಿ:

ಅಬಕಾರಿ ಇಲಾಖೆಯಲ್ಲಿ ಯಾವುದೇ ರೀತಿಯ ವರ್ಗಾವಣೆ ನಡೆದಿಲ್ಲ. ಸಹಜವಾಗಿ ಅಧಿಕಾರಿಗಳಿಗೆ ವರ್ಗಾವಣೆ ಮಾತ್ರ ನೀಡಲಾಗಿದೆ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು.

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಕೋಟ್ಯಂತರ ರುಪಾಯಿ ಹಣ ಪಡೆಯಲಾಗಿದೆ ಎಂಬ ಆರೋಪ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದರು.

ವರ್ಗಾವಣೆ ವಿಷಯದಲ್ಲಿ ಯಾವುದೇ ರೀತಿಯ ಚರ್ಚೆಯೇ ನಡೆದಿಲ್ಲ. ವರ್ಗಾವಣೆಗೆ ಕೋಟ್ಯಂತರ ಹಣ ಪಡೆಯಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ನಾನು ಈ ವರೆಗೂ ಅಷ್ಟು ಹಣವನ್ನೇ ನೋಡಿಲ್ಲ. ಯಾರ ಬಳಿಯಾದರೂ ಇದ್ದರೆ ತೋರಿಸಿ ಎಂದರು.

ಹೊಸದಾಗಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಸರ್ಕಾರ ಯೋಚಿಸಿದೆ. ಈ ಕುರಿತು ಮುಖ್ಯಮಂತ್ರಿಗೆ ತಿಳಿಸಿಲ್ಲ. ಮುಂದಿನ ದಿನಗಳಲ್ಲಿ ಅವರಿಂದ ಅನುಮತಿ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸಿಎಂ ಶಕ್ತಿ ಕುಗ್ಗಿಸುವ ಯತ್ನ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತು ಶಕ್ತಿ ಕುಂದಿಸಲು ಬಿಜೆಪಿಗರು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಅದು ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ. ಲೋಕಾಯಕ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ಕೇಂದ್ರದಲ್ಲಿ ಇದ್ದು ಬಿದ್ದ ನಾಯಕರು ಸಿದ್ದರಾಮಯ್ಯ ಅವರ ಶಕ್ತಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇದ್ಯಾವುದು ಸಿದ್ದರಾಮಯ್ಯ ಅವರ ಮುಂದೆ ನಡೆಯಲ್ಲ ಎಂದು ಸಚಿವ ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭೇಟಿಗೆ ಬಂದಿದ್ದೇನೆ. ಸಭೆ ಮಾಡಿ ಚರ್ಚಿಸಲಾಗುತ್ತಿದೆ. ಶಿಗ್ಗಾಂವಿಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂದು ಭವಿಷ್ಯ ನುಡಿದರು.