ವೈದ್ಯರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಸಮರ್ಪಕ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು. ಇಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಆಸ್ತಿ-ಪಾಸ್ತಿ ಮಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಅಂತಹದಕ್ಕೆಲ್ಲ ಆಸ್ಪದ ನೀಡಬೇಡಿ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಿಳಿಸುವಂತೆ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಅವರಿಗೆ ಆದೇಶಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಳೆ ಅಭಾವ, ಬೆಳೆ ನಷ್ಟ ಹಾಗೂ ವಿವಿಧ ಕಾರಣಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ರೈತರ ಮೇಲೆ ಯಾವುದೇ ರೀತಿಯ ಅನಗತ್ಯ ಒತ್ತಡ ಹೇರಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ವಾಡಿಕೆಯಷ್ಟು ಮಳೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬೆಳೆಗಳು ಒಣಗಿವೆ. ಅಲ್ಲದೆ, ಪ್ರಸ್ತುತ ಬೆಳೆಯನ್ನೂ ಬೆಳೆದಿಲ್ಲ. ಹಾಗಾಗಿ ರೈತರನ್ನು ಸಾಲ ಕಟ್ಟಿ ಎಂದು ಯಾವ ಬ್ಯಾಂಕ್‌ನವರು ಒತ್ತಡ ಹೇರಬಾರದು. ಒಂದು ವೇಳೆ ಒತ್ತಡ ಹೇರಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡದರು.
ಸಂಸದರ ನಿಧಿ ಸಮರ್ಪಕವಾಗಿ ಬಳಸಿ:ಜಿಲ್ಲೆಯ ಅಭಿವೃದ್ಧಿಗೆ ಲಭ್ಯವಾಗುವ ಸಂಸದರ ನಿಧಿಯನ್ನು ಸಮರ್ಪಕ ಹಾಗೂ ಆದ್ಯತೆಯ ಮೇರೆಗೆ ಬಳಸಿಕೊಳ್ಳಬೇಕು ಎಂದು ಸೂಚಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.
ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ:ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳನ್ನು ವೈದ್ಯರು ಹಾಗೂ ಸಿಬ್ಬಂದಿ ಸಮರ್ಪಕವಾಗಿ ನೋಡಿಕೊಳ್ಳುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಹಾಜರಾತಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ದಾಖಲಿಸುವಂತೆ ಸೂಚಿಸಿದರು.
ವೈದ್ಯರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಸಮರ್ಪಕ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು. ಇಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಆಸ್ತಿ-ಪಾಸ್ತಿ ಮಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಅಂತಹದಕ್ಕೆಲ್ಲ ಆಸ್ಪದ ನೀಡಬೇಡಿ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಿಳಿಸುವಂತೆ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಅವರಿಗೆ ಆದೇಶಿಸಿದರು.ಕುಡಿಯುವ ನೀರಿಗೆ ಕ್ರಮವಹಿಸಿ:
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಸಭೆಗೆ ತಿಳಿಸಿದರು.ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಕೆ.ಆರ್.ಎಸ್. ವ್ಯಾಪ್ತಿಯ ಪ್ರದೇಶಗಳಿಗೆ ಮಾಸಿಕ ಕುಡಿಯಲು 2.5 ಟಿಎಂಸಿ ನೀರು ಬೇಕು. 2027ರ ಜೂನ್ ವರೆಗೆ ಜನ-ಜಾನುವಾರು ಹಾಗೂ ಕೆರೆ-ಕಟ್ಟೆಗಳನ್ನು ತುಂಬಿಸಲು 49 ಟಿಎಂಸಿ ನೀರು ಬೇಕಾಗಿದೆ. 2026ರ ಡಿಸೆಂಬರ್ ವರೆಗೆ 16 ಟಿಎಂಸಿ ನೀರು ಬರಬಹುದಾಗಿ ಅಂದಾಜಿಸಲಾಗಿದೆ ಎಂದು ಹೇಳಿದರು.
ಕಳೆದ 20 ವರ್ಷಗಳ ಮಳೆ ಪ್ರಮಾಣವನ್ನು ಪರಿಶೀಲಿಸಿದಾಗ ಹಲವು ವರ್ಷಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಕಂಡು ಬಂದಿದೆ. ಪ್ರಸಕ್ತ ವರ್ಷವೂ ಮಳೆ ಕೊರತೆಯಾಗಿದೆ. ಜಲಾಶಯಗಳು, ಕೆರೆ-ಕಟ್ಟೆಗಳು ಹಾಗೂ ಇತರೆ ಜಲಮೂಲಗಳಲ್ಲಿ ನೀರಿನ ಸಂಗ್ರಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರು ನೀರಿನ ಮಿತ ಬಳಕೆಗೆ ಮುಂದಾಗಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯವಿರುವ ಬೆಳೆಗಳ ವಿಸ್ತೀರ್ಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳಿಗೆ ಆದ್ಯತೆ ನೀಡುವಂತೆ ರೈತರಿಗೆ ಜಾಗೃತಿ ಮೂಡಿಸಲಾಗಿದೆ ಎಂದರು.ವಿಶೇಷವಾಗಿ ರಾಗಿ, ಜೋಳ, ಅಲಸಂಧೆ, ಎಳ್ಳು, ಉದ್ದು ಸೇರಿದಂತೆ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿದೆ. ನೀರಿನ ಲಭ್ಯತೆ ಮತ್ತು ಮಳೆ ಪರಿಸ್ಥಿತಿಯನ್ನು ಆಧರಿಸಿ ಬೆಳೆ ಆಯ್ಕೆ ಮಾಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಜನ- ಜಾನುವಾರುಗಳು ಕುಡಿಯಲು ಕೆರೆ- ಕಟ್ಟೆಗಳನ್ನು ತುಂಬಿಸಲು ಕಳೆದ ಆ.೨೮ರಿಂದ ಕೆ.ಆರ್.ಎಸ್.ನಿಂದ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದಲೂ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದು, ಕೆ.ಆರ್.ಪೇಟೆ ಮತ್ತು ನಾಗಮಂಗಲದ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಹೆದ್ದಾರಿ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ:
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಗಳನ್ನು ಗುಣಮಟ್ಟ ಹಾಗೂ ಮಾನದಂಡಗಳಿಗೆ ಅನುಗುಣವಾಗಿ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆ, ಸರ್ವೀಸ್ ರಸ್ತೆ, ಚರಂಡಿ, ರಸ್ತೆ ಬದಿಯ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗೆ ಸಚಿವರು ಸೂಚಿಸಿದರು.ಸಭೆಯಲ್ಲಿ ಶಾಸಕರಾದ ಎಚ್.ಟಿ ಮಂಜು, ಕೆ.ವಿವೇಕಾನಂದ, ದಿಶಾ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಕೆ.ಅನ್ನದಾನಿ, ಜಿಪಂ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಸೇರಿದಂತೆ ದಿಶಾ ಸಮಿತಿ ಸದಸ್ಯರು ಭಾಗವಹಿಸಿದ್ದರು.