ಕಾಲುವೆಗೆ ನೀರು ಬಿಟ್ಟು ೨೫ ದಿನ ಕಳೆದರೂ ಇನ್ನೂ ನೀರು ಬಾರದಕ್ಕೆ ರೊಚ್ಚಿಗೆದ್ದ ೩೧/೨ರ ವ್ಯಾಪ್ತಿಯ ಹುಳ್ಕಿಹಾಳ ಸೀಮೆ ರೈತರು ಸೋಮವಾರ ಕಾಲುವೆ ಜಾಕ್‌ವೆಲ್ ಇಳಿಸಿ ನೀರು ಹರಿಯುವುದನ್ನೇ ತಡೆಗಟ್ಟಿ ಸೋಮವಾರ ಬೆಳಗ್ಗೆ ಕಾರಟಗಿ ತಾಲೂಕಿನ ಚೆಳ್ಳೂರು ಕ್ಯಾಂಪ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕಾರಟಗಿ: ಕಾಲುವೆಗೆ ನೀರು ಬಿಟ್ಟು ೨೫ ದಿನ ಕಳೆದರೂ ಇನ್ನೂ ನೀರು ಬಾರದಕ್ಕೆ ರೊಚ್ಚಿಗೆದ್ದ ೩೧/೨ರ ವ್ಯಾಪ್ತಿಯ ಹುಳ್ಕಿಹಾಳ ಸೀಮೆ ರೈತರು, ನೀರು ಪೂರೈಸಿ ಇಲ್ಲವೇ ಕೃಷಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿ ಕಾಲುವೆ ಜಾಕ್‌ವೆಲ್ ಇಳಿಸಿ, ನೀರು ಹರಿಯುವುದನ್ನೇ ತಡೆಗಟ್ಟಿ ಪ್ರತಿಭಟಿಸಿದ ಘಟನೆ ಸೋಮವಾರ ಬೆಳಗ್ಗೆ ತಾಲೂಕಿನ ಚೆಳ್ಳೂರು ಕ್ಯಾಂಪ್‌ನಲ್ಲಿ ನಡೆದಿದೆ.

ವಾರಬಂದಿ ನಿಯಮಾವಳಿ ಪ್ರಕಾರ ನೀರು ಪೂರೈಕೆಯಾಗದಿರುವ ಕಾರಣ ಆಕ್ರೋಶ ವ್ಯಕ್ತಪಡಿಸಿದ ರೈತರು, ಅಕ್ರಮ ಪೈಪ್‌ ತೆರವುಗೊಳಿಸಿ, ಕೃಷಿ ಚಟುವಟಿಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಕಾಲುವೆಗೆ ನೀರು ಹರಿಯುವುದನ್ನು ಬಂದ್ ಮಾಡಿದರು.

ತಾಲೂಕಿನ ಹುಳ್ಕಿಹಾಳ ಮತ್ತು ಗುಂಡೂರು ಸೀಮೆ ರೈತರು ನೀರುಗಳ್ಳತನ ನಡೆಸುವವರ ವಿರುದ್ಧ ಮತ್ತು ಅವುಗಳ ತಡೆಯಲು ವಿಫಲವಾದ ಟಾಸ್ಕ್‌ಫೋರ್ಸ್‌ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಾಕ್‌ವೆಲ್ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದರು.

೩೧/೨ರ ಚೆಳ್ಳೂರುಕ್ಯಾಂಪ್, ಚೆಳ್ಳೂರು, ಹಗೇದಾಳ, ಹುಳ್ಕಿಹಾಳ ಕ್ಯಾಂಪ್, ಹುಳ್ಕಿಹಾಳ ಮತ್ತು ಗುಂಡೂರು ಸೀಮೆಗೆ ನೀರು ಹರಿಯುತ್ತದೆ. ಕಾಲುವೆಗೆ ನೀರು ಬಿಟ್ಟು ೨೫ ದಿನ ಗತಿಸಿದರೂ ಹುಳ್ಕಿಹಾಳ ಭಾಗದ ಸುಮಾರು ೫೦೦ ಎಕರೆ ಪ್ರದೇಶಕ್ಕೆ ನೀರಿಲ್ಲ. ಸೋಮವಾರ ಮತ್ತು ಗುರುವಾರ ವಾರಬಂದಿ ವೇಳಾಪಟ್ಟಿ ನಿಯದಿಯಾಗಿದೆ. ಆ ದಿನಗಳ ಸಹಿತ ನೀರು ಕಾಲುವೆಯಲ್ಲಿ ಹರಿದಿಲ್ಲ. ಹೀಗಾಗಿ ನಮಗೆ ಇಲ್ಲದ ನೀರು ಮತ್ಯಾರಿಗೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ಜಾಕ್‌ವೆಲ್ ಇಳಿಸಿದರು. ನೇತೃತ್ವ ವಹಿಸಿದ್ದ ರೈತ ವೆಂಕನಗೌಡ ಪೊಲೀಸ್ ಪಾಟೀಲ್ ಮತ್ತು ದೇವರಾಜ ಕಮಲಾಪುರ ಮಾತನಾಡಿ,

೨೫ ದಿನಗಳು ಗತಿಸಿದ್ದು, ಇನ್ನೂ ಸುಮಾರು ೩೫೦ ಎಕರೆ ಪ್ರದೇಶದಲ್ಲಿ ನಾಟಿ ಮಾಡಿಲ್ಲ. ಪರಿಸ್ಥಿತಿ ಹೀಗಾದರೆ ರೈತರು ಬದುಕುವುದು ಹೇಗೆ? ಚೆಳ್ಳೂರು ಕ್ಯಾಂಪ್, ಹುಳ್ಕಿಹಾಳ ಕ್ಯಾಂಪ್ ಪ್ರದೇಶದ ಪ್ರಭಾವಿ ರೈತರು ದೌರ್ಜನ್ಯದಿಂದ ಹಾಡುಹಗಲೇ ನೀರು ಕದಿಯುತ್ತಾರೆ. ವಾರಕ್ಕೆ ಎರಡು ಬಾರಿ ನೀರನ್ನು ಹೆಚ್ಚಿನ ಗೇಜ್ ಮೂಲಕ ಹರಿಸಿದರೆ ಎಲ್ಲರಿಗೂ ನೀರು ತಲುಪಲು ಸಾಧ್ಯ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳ ನೀರು ನಿರ್ವಹಣೆ ಮಾಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು

ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆ ಎಂಜಿನಿಯರ್ ವೆಂಕಟೇಶ್ವರ ಅವರನ್ನು ಮೊದಲು ರೈತರು ತೀವ್ರ ತರಾಟೆ ತೆಗೆದುಕೊಂಡರು. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿ, ತೀವ್ರ ತರಾಟೆ ತೆಗೆದುಕೊಂಡರು. ನಮ್ಮ ಸಮಸ್ಯೆ ಪರಿಹರಿಸಿದರೆ ಮಾತ್ರ ಜಾಕ್‌ವೆಲ್ ಎತ್ತರಿಸಿ ನೀರು ಬಿಡುಗಡೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ನೀರು ಬೇಡ ಎಂದು ಪಟ್ಟುಹಿಡಿದು ಧರಣಿ ಕುಳಿತರು.

ಪ್ರತಿಭಟನೆಯಲ್ಲಿ ನಾಗನಗೌಡ ಪೊಲೀಸ್‌ಪಾಟೀಲ್‌, ವೀರಪ್ಪ ಭೋವಿ, ವೆಂಕರೆಡ್ಡಿ ಗಂಗಾವತಿ, ದೇವರಾಜ ಕಮಲಾಪುರ, ಕೃಷ್ಣಪ್ಪ ಬೇರಿಗೆ, ಹರಿಕೃಷ್ಣ, ನಾಗರಾಜ ಸಿದ್ದಾಪುರ, ಶಶಿಧರ ಮುದೇನೂರು, ಬಸವರಾಜ ಜವಾರಿ, ಹನುಮೇಶ ಉಪ್ಪಾರ, ವಿದ್ಯಾಧರ ಪಾಟೀಲ್, ಯಂಕಣ್ಣ ಪಾಟೀಲ್, ದೊಡ್ಡಬಸವ ಮುಸಾಲಿ, ಮಲ್ಲಿಕಾರ್ಜುನ ಮರಳಿ, ಮಲ್ಲಿಕಾರ್ಜುನ ಕಾನಿಹಾಳ ಇದ್ದರು.