ನೀರು ಕೊಡುತ್ತಾರೆ ಎಂಬ ನಂಬಿಕೆಯಿಂದ ಈ ಭಾಗದ ನೂರಾರು ಎಕರೆ ಜಮೀನುಗಳಿಗೆ ರೈತರು ಬೆಳೆ ಹಾಕಿದ್ದಾರೆ. ಈಗ ಏಕಾಏಕಿ ನೀರು ನೀಡುವುದಿಲ್ಲ ಅಂದರೆ, ರೈತರ ಪಾಡೇನು. ಮದ್ದೂರು ತಾಲೂಕಿನ ಹಲವು ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಬೆಳೆಗಳಿಗೆ ನೀರಿಲ್ಲದೆ ಕಬ್ಬಿನ ಬೆಳೆ ಒಣಗುವ ಭೀತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕೆಆರ್‌ಎಸ್ ನಾಲೆ ಕೊನೇ ಭಾಗ ಹೆಬ್ಬಕವಾಡಿ ನಾಲೆಗಳ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಸಮರ್ಪಕವಾಗಿ ನೀರನ್ನು ಹರಿಸದೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಕೆಆರ್‌ಎಸ್ ನೀರು ಬಳೆಕೆದಾರರ ಮಹಾ ಮಂಡಳಿ ನಿರ್ದೇಶಕ, ಕಾವೇರಿ ನಿರಾವರಿ ಸಲಹಾ ಸಮಿತಿ ಸದಸ್ಯ ಬಿ.ಎಂ.ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಕಾವೇರಿ ನೀರಾವರಿ ಸಲಹ ಸಮಿತಿ ಸಭೆ ತೀರ್ಮಾನದಂತೆ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಕೊಡುವುದಾಗಿ ಒಪ್ಪಿ ಈಗ ನೀರು ನೀಡದೇ ಅಧಿಕಾರಿಗಳು ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.
ನೀರು ಕೊಡುತ್ತಾರೆ ಎಂಬ ನಂಬಿಕೆಯಿಂದ ಈ ಭಾಗದ ನೂರಾರು ಎಕರೆ ಜಮೀನುಗಳಿಗೆ ರೈತರು ಬೆಳೆ ಹಾಕಿದ್ದಾರೆ. ಈಗ ಏಕಾಏಕಿ ನೀರು ನೀಡುವುದಿಲ್ಲ ಅಂದರೆ, ರೈತರ ಪಾಡೇನು. ಮದ್ದೂರು ತಾಲೂಕಿನ ಮಣಿಗೆರೆ, ಅಣ್ಣೂರು, ಮೆಣಸಗೆರೆ, ಬೊಪ್ಪಸಮುದ್ರ, ಹೊನ್ನಾಯಕನಹಳ್ಳಿ, ಪುಟ್ಟೇಗೌಡನದೊಡ್ಡಿ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಬೆಳೆಗಳಿಗೆ ನೀರಿಲ್ಲದೆ ಕಬ್ಬಿನ ಬೆಳೆ ಒಣಗುವ ಭೀತಿ ಎದುರಾಗಿದೆ ಎಂದರು.ಮಳವಳ್ಳಿ ತಾಲೂಕಿನ ಕಡೆ ಭಾಗದ ಹೆಬ್ಬಕವಾಡಿ ಶಾಖಾ ನಾಲೆಗೆ ನೀರು ಹರಿಸಲಾಗಿದೆ. ಆದರೆ, ಮದ್ದೂರು ತಾಲೂಕಿನ ಕಡೆ ಭಾಗದ ರೈತರ ಜಮೀನುಗಳಿಗೆ ನೀರು ನೀಡದೆ ನಿಗಮದ ಅಧಿಕಾರಿಗಳು ತಾರತಮ್ಯ ಮಾಡಿ ವಂಚಿಸಿದ್ದಾರೆ ಎಂದು ದೂರಿದರು.
ನಾಲೆಗಳಿಗೆ ನೀರು ಬಿಡುವ ವಿಚಾರದಲ್ಲಿ ನಿಗಮದ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ನಡೆದುಕೊಂಡಿದ್ದಾರೆ. ಇಂತಹ ತಾರತಮ್ಯ ಏಕೆ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಕ ಅಭಿಯಂತರ ರಘುರಾಮ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಕಾವೇರಿ ನೀರು ಕನ್ನಂಬಾಡಿಯಿಂದ ಯತ್ತಂಬಾಡಿವರೆಗೂ ಎಂಬ ಮಾತು ಇದ್ದು, ನಾಲಾ ಆಧುನೀಕರಣ ನೆಪದಲ್ಲಿ ಬೆಳೆದಿರುವ ಬೆಳೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಪೂರೈಕೆ ಮಾಡುತ್ತೇವೆಂದು ಭರವಸೆ ನೀಡಿ ಈಗ ಅಧಿಕಾರಿಗಳು ಮದ್ದೂರು ತಾಲೂಕಿನ ಕೊನೆಯ ಭಾಗಕ್ಕೆ ನೀರು ನೀಡದೆ ರೈತರ ಬದುಕಿನ ಮೇಲೆ ಬರೆ ಎಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದ ಬಹುತೇಕ ರೈತರು ಕಳೆದ ಎರಡು ಮೂರು ವರ್ಷಗಳಿಂದ ನೀರಿನ ಅಭಾವದಿಂದ ವ್ಯವಸಾಯವನ್ನೆ ಮಾಡದೆ ಆರ್ಥಿಕವಾಗಿ ಸಂಕಷ್ಟ ಎದುರಿಸಿದ್ದಾರೆ. ಪ್ರಸ್ತುತ ಕನ್ನಂಬಾಡಿ ಕಟ್ಟೆ ತುಂಬಿ ಹರಿದು ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಈಗ ನೀರು ಬಿಡದ ಕಾರಣ ಈ ಭಾಗದ ಬಹುತೇಕ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.ಈಗಾಗಲೇ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಸಾವಿರಾರು ಎಕರೆಯಲ್ಲಿ ಬೆಳೆದಿದ್ದಾರೆ. ನೀರು ಕೊಡದಿದ್ದರೇ ಕೋಟ್ಯಂತರ ರು. ನಷ್ಟವನ್ನು ರೈತರು ಅನುಭವಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.
ಹೆಬ್ಬಕವಾಡಿ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ಶಾಖಾ ನಾಲೆಗೆ ನೀರು ನೀಡದೇ ಬೆಳೆಗಳು ಒಣಗುತ್ತಿವೆ. ಈ ತನಕ ರೈತರು ಬೆಳೆಗಾಗಿ ಮಾಡಿರುವ ಖರ್ಚಿಗೆ ಹೊಣೆ ಯಾರು. ಹೆಬ್ಬಕವಾಡಿ ಶಾಖಾ ನಾಲೆಗಳಿಗೆ ಹಿಂದಿನ ಸಭೆ ತೀರ್ಮಾನದಂತೆ ಕಟ್ಟು ಪದ್ಧತಿಯಲ್ಲಾದರೂ ನೀರನ್ನು ಕೊಟ್ಟು ರೈತರ ಬೆಳೆಗಳನ್ನು ಉಳಿಸಬೇಕು. ತಪ್ಪಿದಲ್ಲಿ ಈ ವ್ಯಾಪ್ತಿಯ ರೈತರ ಜತೆಗೂಡಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.