ಸಿ.ಕೆ. ನಾಗರಾಜ

ಹೊಸಪೇಟೆ: ವಿಜಯನಗರ ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಹೊಸಪೇಟೆ ನಗರದಿಂದ ಅನತಿ ದೂರದಲ್ಲೇ ಇದ್ದರೂ ಕುಡಿಯುವ ನೀರಿಗಾಗಿ ಜನರ ಪರದಾಟ ತಪ್ಪಿಲ್ಲ. ಒಂದರ್ಥದಲ್ಲಿ ಇದು ತುಂಗೆಯ ತಟದಲ್ಲಿ ಆರಿದ ಗಂಟಲುಗಳಿಗೆ ನೀರಿಲ್ಲದಂತಾಗಿದೆ!

ತುಂಗಭದ್ರಾ ಜಲಾಶಯದಲ್ಲಿ ನೀರು ಇಳಿಮುಖವಾಗುತ್ತಿರುವುದು ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ಕೆಲ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಜಿಲ್ಲಾದ್ಯಂತ ಮುಂದಿನ ದಿನಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ 24 ಹಳ್ಳಿ, ಕೊಟ್ಟೂರು ತಾಲೂಕಿನ 5 ಗ್ರಾಪಂಗಳಲ್ಲಿ 58, ಹರಪನಹಳ್ಳಿ ತಾಲೂಕಿನ 32 ಗ್ರಾಪಂಗಳಲ್ಲಿ 58, ಹೊಸಪೇಟೆ ತಾಲೂಕಿನ 13 ಗ್ರಾಪಂಗಳಲ್ಲಿ 19, ಕೂಡ್ಲಿಗಿ ತಾಲೂಕಿನ 19 ಗ್ರಾಪಂಗಳಲ್ಲಿ 24 ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಬರ ಎದುರಿಸಲಿರುವ ಗ್ರಾಮಗಳು ಎಂದು ಈಗಾಗಲೇ ಗುರುತಿಸಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದಂತೆ ನಿಗಾ ವಹಿಸುವಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಜಿಲ್ಲೆಯ ಕುಡಿಯುವ ನೀರಿಗಾಗಿ ಪರದಾಟ ಕಂಡು ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿ ಯಾವುದಾದರೂ ಊರಿನಲ್ಲಿ ಸರ್ಕಾರಿ ಕೊಳವೆಬಾವಿಗಳು ಬತ್ತಿ ಹೋಗಿದ್ದರೆ, ತಕ್ಷಣವೇ ಗ್ರಾಮದ ಸುತ್ತಮುತ್ತಲಿರುವ ರೈತರ ಖಾಸಗಿ ಕೊಳವೆಬಾವಿಗಳನ್ನು ಪತ್ತೆ ಹಚ್ಚಿ ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಮತ್ತು ಜಿಪಂ ಕಾರ್ಯನಿರ್ವಹಣಾಧಿಕಾರಿ ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಏಪ್ರಿಲ್‌- ಮೇ ತಿಂಗಳಲ್ಲಿ ಬಿಸಿಲಿನ ತಾಪ ಮತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಾನುವಾರುಗಳಿಗೆ ಅಗತ್ಯವಿರುವ ಪ್ರದೇಶದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಈ ನೀರಿನ ತೊಟ್ಟಿಗೆ ಸದಾ ನೀರು ತುಂಬಿಸುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ತೀವ್ರ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳತ್ತ ಜಿಲ್ಲಾಡಳಿತ ವಿಶೇಷ ಗಮನ ಹರಿಸಬೇಕಾಗಿದೆ.

ತುಂಗಭದ್ರಾ ಜಲಾಶಯದಲ್ಲಿ ಮಾರ್ಚ್‌ 16ಕ್ಕೆ 22.785 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಉಳಿದಿದೆ. ಹೊಸಪೇಟೆ ನಗರದ 35 ವಾರ್ಡ್‌ಗಳಿಗೂ ಕುಡಿಯುವ ನೀರನ್ನು ತುಂಗಭದ್ರಾ ಜಲಾಶಯದಿಂದ ನಿತ್ಯವೂ ಸರಬರಾಜು ಮಾಡಲಾಗುತ್ತಿದೆ. ಆದರೆ, ಚಿತ್ತವಾಡ್ಗಿ, ಕಾರಿಗನೂರು, ಸಂಕ್ಲಾಪುರದಲ್ಲಿ ಮಾತ್ರ ದಿನ ಬಿಟ್ಟು ದಿನ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಹೊಸಪೇಟೆ ನಗರಕ್ಕೆ ಕುಡಿಯುವ ನೀರಿಗಾಗಿ ಪ್ರತಿದಿನ ತುಂಗಭದ್ರಾ ಜಲಾಶಯದಿಂದ 38 ಮಿಲಿಯನ್ ಲೀಟರ್ (ಎಂಎಲ್ ಡಿ) ನೀರು ಶುದ್ಧೀಕರಿಸಿ ನಗರಸಭೆಯವರು ನಗರಕ್ಕೆ ಸರಬರಾಜು ಮಾಡುತ್ತಿದ್ದಾರೆ.ತುಂಗಭದ್ರಾ ಜಲಾಶಯದಿಂದ ಬರುವ ನೀರನ್ನು ಟಿ.ಬಿ. ಡ್ಯಾಂನ ರಸ್ತೆಯಲ್ಲಿ ಶುದ್ಧೀಕರಣ ಘಟಕ ಹಾಗೂ ಚಿತ್ತವಾಡ್ಗಿಯ ಮುನ್ಸಿಪಾಲ್ ಹೈಸ್ಕೂಲ್ ಹಿಂಭಾಗದಲ್ಲಿರುವ ಶುದ್ಧೀಕರಣ ಘಟಕದಿಂದ ನಗರದ 19 ನೀರಿನ ಟ್ಯಾಂಕ್ ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಶೇ. 10ರಷ್ಟು ಬೋರ್ ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿ ಎಡಿಬಿ ಯೋಜನೆ ಮತ್ತು ಅಮೖತ್ ಸಿಟಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈಗ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಕೆಲ ಪ್ರದೇಶದಲ್ಲಿ ಮಾತ್ರ ಸಮಸ್ಯೆ ಇದೆ. ವಿದ್ಯುತ್ ಸಮಸ್ಯೆ ಆದಾಗ ಅಷ್ಟೇ ತೊಂದರೆ ಉಂಟಾಗಲಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ನೀರಿನ ತೊಂದರೆ

ಈಗಾಗಲೇ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ183 ಹಳ್ಳಿಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆ ಇರುವುದನ್ನು ಮನಗಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ತಿಳಿಸಿದ್ದಾರೆ.ವಿದ್ಯುತ್ ಕೈಕೊಟ್ಟರೆ ಸಮಸ್ಯೆ

ಹೊಸಪೇಟೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ವಿದ್ಯುತ್‌ ಸಮಸ್ಯೆ ಉಂಟಾದಾಗ ಮಾತ್ರ ಸಮಸ್ಯೆ ಉಂಟಾಗಲಿದೆ. ನಗರಕ್ಕೆ ಕೆಎಂಆರ್‌ಸಿ ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ₹400 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ದವಾಗುತ್ತಿದೆ. ಈ ಯೋಜನೆಯಲ್ಲಿ ತುಂಗಭದ್ರಾ ಜಲಾಶಯದಿಂದ ಹೊಸ ಪೈಪ್‌ಲೈನ್‌, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್‌. ರೂಪೇಶ್‌ ಕುಮಾರ್‌ ತಿಳಿಸಿದ್ದಾರೆ.