ನೀರಿಲ್ಲ..ನೀರಿಲ್ಲ ಪ್ರಾಣಿ, ಪಕ್ಷಿಗಳಿಗೂ ನೀರಿಲ್ಲ...!

| Published : Mar 25 2024, 12:48 AM IST

ಸಾರಾಂಶ

ಬರಗಾಲದಿಂದ ಜಲಮೂಲಗಳು ಬರಿದಾಗಿವೆ. ಇದರಿಂದ ಗ್ರಾಮೀಣ ಪ್ರದೇಶದ ಕೆರೆಗಳು, ಹಳ್ಳಕೊಳ್ಳ, ನದಿಗಳು ತೆರೆದ ಬಾವಿಗಳು ಖಾಲಿಖಾಲಿ ಆಗಿವೆ. ಇದರಿಂದ ಪ್ರಾಣಿಗಳಿಗೆ, ಪಕ್ಷಿಗಳಿಗೆ ನೀರು ನಿಲ್ಲದೇ ಅವುಗಳ ಜೀವಕ್ಕೂ ಸಂಚಕಾರ ಎದುರಾಗಿದೆ. ಅಲ್ಲಲ್ಲಿ ತುಸು ಉಳಿದ ನೀರನ್ನು ಹಕ್ಕಿ-ಪಕ್ಷಿಗಳು ಕುಡಿಯಲು ಹೆಣಗಾಡುತ್ತಿರುವುದು ಮನಕಲಕುವಂತಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಬರಗಾಲದಿಂದ ಜಲಮೂಲಗಳು ಬರಿದಾಗಿವೆ. ಇದರಿಂದ ಗ್ರಾಮೀಣ ಪ್ರದೇಶದ ಕೆರೆಗಳು, ಹಳ್ಳಕೊಳ್ಳ, ನದಿಗಳು ತೆರೆದ ಬಾವಿಗಳು ಖಾಲಿಖಾಲಿ ಆಗಿವೆ. ಇದರಿಂದ ಪ್ರಾಣಿಗಳಿಗೆ, ಪಕ್ಷಿಗಳಿಗೆ ನೀರು ನಿಲ್ಲದೇ ಅವುಗಳ ಜೀವಕ್ಕೂ ಸಂಚಕಾರ ಎದುರಾಗಿದೆ. ಅಲ್ಲಲ್ಲಿ ತುಸು ಉಳಿದ ನೀರನ್ನು ಹಕ್ಕಿ-ಪಕ್ಷಿಗಳು ಕುಡಿಯಲು ಹೆಣಗಾಡುತ್ತಿರುವುದು ಮನಕಲಕುವಂತಿದೆ.

ಪ್ರತಿವರ್ಷ ಬೇಸಿಗೆಯ ಮಾರ್ಚ್‌ ತಿಂಗಳಿನಿಂದ ಮೇ ತಿಂಗಳ ಕೊನೆಯವರೆಗೆ ಕೆರೆ, ನದಿ, ಹಳ್ಳಗಳಿಗೆ ನೀರು ಹರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ನೀರಾವರಿ ಇಲಾಖೆಯಿಂದ ಕ್ರಿಯಾಯೋಜನೆಯನ್ನು ಮಂಜೂರು ಮಾಡಿಕೊಂಡು ಬೇಸಿಗೆಯಲ್ಲಿ ಕನಿಷ್ಠ 3 ತಿಂಗಳು ನೀರು ಹರಿಸಿದರೆ ಪ್ರಾಣಿ, ಪಕ್ಷಿ, ಜನ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಕೇವಲ ಬೇಸಿಗೆಯಲ್ಲಿ ಎರಡ್ಮೂರು ದಿನಗಳು ಕೇವಲ ಹಳ್ಳಗಳಿಗೆ ನೀರು ಹರಿಸಿದರೆ ಅನುಕೂಲವಾಗುವುದಿಲ್ಲ. ತಾಲೂಕಿನಲ್ಲಿ ಗುತ್ತಿಬಸವಣ್ಣ, ಚಿಮ್ಮಲಗಿ, ಇಂಡಿ ಶಾಖಾ ಕಾಲುವೆ ಹಾದು ಹೋದರೂ ನೀರಾವರಿಯೂ ಇಲ್ಲ, ಪ್ರಾಣಿ,ಪಕ್ಷಿಗಳಿಗೂ ನೀರಿಲ್ಲ ಎನ್ನುವಂತಾಗಿದೆ.

ಮುಖ ಪ್ರಾಣಿಗಳ ರೋಧನ:

ತಾಲೂಕಿನ ಹಲವು ಗ್ರಾಮಗಳಲ್ಲಿ, ಹಳ್ಳ, ನದಿ, ಕೆರೆಗಳು ಹಾಗೂ ಕಾಡಿನಲ್ಲಿರುವ ಪ್ರದೇಶದಲ್ಲಿ ವಾಸಿಸುವ ನವಿಲು, ತೋಳ, ನರಿ, ಮೊಲ ಸೇರಿದಂತೆ ಹಕ್ಕಿ, ಪಕ್ಷಿಗಳ ನೆಲೆ ಕಂಡುಕೊಂಡಿದ್ದ ಕೆರೆಗಳು, ನದಿಗಳು, ಹಳ್ಳಗಳು ಹಾಗೂ ಕಾಡಿನಲ್ಲಿರುವ ಗುಂಡಿಗಳಲ್ಲಿ ನಿಂತಿರುವ ನೀರು ಬತ್ತಿದ ಪರಿಣಾಮ ನೀರಿನ ದಾಹದಿಂದ ಬಳಲುತ್ತಿವೆ. ಮಳೆಯ ಅಭಾವದಿಂದ ಕೆರೆ ಹಾಗೂ ಹಳ್ಳಗಳು ಈ ಬಾರಿ ಭರ್ತಿಯಾಗಿಲ್ಲ. ಅಲ್ಪಸ್ವಲ್ಪ ನೀರಿದ್ದ ಹಳ್ಳ, ಕೆರೆಗಳು ತಳ ಕಂಡಿವೆ. ಹಾಗಾಗಿ ಜಾನುವಾರು ಹಾಗೂ ಮೂಕ ಪ್ರಾಣಿಗಳ ರೋಧನ ಮುಗಿಲು ಮುಟ್ಟಿದೆ.

ಕುಸಿದ ಅಂತರ್ಜಲಮಟ್ಟ:

ತಾಲೂಕಿನ 32 ಕೆರೆಗಳು, ಈ ಭಾಗದ ಜೀವನಾಡಿ ಭೀಮಾನದಿ ಹಾಗೂ ಹಳ್ಳಕೊಳ್ಳಗಳು ನೀರಿಲ್ಲದೇ ಭಣಗುಡುತ್ತಿವೆ. ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯ ತಾಪ ಜಾನುವಾರುಗಳಿಗೆ ತಟ್ಟಿದೆ. ವರ್ಷವಿಡೀ ತನ್ನ ಒಡಲಿನಲ್ಲಿ ನೀರಿಟ್ಟುಕೊಂಡು ಜಾನುವಾರುಗಳಿಗೆ, ಹಕ್ಕಿ, ಪಕ್ಷಿಗಳಿಗೆ ನೆಲೆ ಒದಗಿಸಿದ್ದ ಹಳ್ಳ, ಭೀಮಾನದಿ ನೀರಿಲ್ಲದೆ ಬೀಕೊ ಎನ್ನುತ್ತಿವೆ. ಮಳೆ ಇಲ್ಲದಕ್ಕಾಗಿ ಅಂತರ್ಜಲಮಟ್ಟವೂ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ಕುರಿಗಾಯಿಗಳು ಹಾಗೂ ಕುರಿಗಳಿಗೆ ನೀರು ಕುಡಿಸಲು ಖಾಸಗಿಯವರ ಪಂಪ್‌ಸೆಟ್‌ ಇಲ್ಲವೇ ಕೊಳವೆಬಾವಿ ಅವಲಂಬಿಸುವಂತಾಗಿದ್ದರೂ ಅವುಗಳಲ್ಲಿಯೂ ಅಂತರ್ಜಲಮಟ್ಟ ಕುಸಿದಿದ್ದರಿಂದ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಪುನಶ್ಚೇತನಗೊಳಿಸಿ, ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಸಿ:

ತಾಲೂಕಿನ ಎಲ್ಲ ಕೆರೆಗಳನ್ನು ಪುನಶ್ಚೇತನಗೊಳಿಸಿ, ಕಾಲುವೆ ಮೂಲಕ ನೀರು ಹರಿಸಬೇಕು. ನದಿ ಹಾಗೂ ಹಳ್ಳಗಳಿಗೆ ಬೇಸಿಗೆಯಲ್ಲಿ ನೀರು ಹರಿಸುವ ಹಾಗೆ ವ್ಯವಸ್ಥಿತವಾಗಿ ಪ್ರಸ್ತಾವನೆ ತಯಾರಿಸಿ, ನದಿ, ಹಳ್ಳಗಳಿಗೆ ಬೇಸಿಗೆಯಲ್ಲಿ ನೀರು ಹರಿಯುವಂತೆ ಮಾಡಿದರೆ, ನದಿ, ಹಳ್ಳ, ಕೆರೆಗಳನ್ನು ನಂಬಿಕೊಂಡಿರುವ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಇಲ್ಲದೇ ಹೋದರೆ ಪ್ರಾಣಿ, ಪಕ್ಷಿ,ಜೀವ ಸಂಕುಲಗಳ ಸಂತತಿ ಅವನತಿ ಹೊಂದುವ ಲಕ್ಷಣಗಳು ಕಾಣುತ್ತಿವೆ.

ಈ ಮೊದಲು ಭೀಮಾನದಿ ತೀರದಲ್ಲಿ ಬಹಳಷ್ಟು ಪ್ರಾಣಿ, ಪಕ್ಷಿಗಳು ವಾಸಿಸುತ್ತಿದ್ದವು. ನದಿ, ಕೆರೆಗಳು ಬತ್ತಿದ್ದರಿಂದ ವನ್ಯಜೀವಿಗಳಿಗೂ ನೀರಿನ ಕೊರತೆ ಬಿಸಿ ತಟ್ಟಿದೆ.

---

ಬಾಕ್ಸ ಪಕ್ಷಿಗಳಿಗೆ ನೀರಿಡಿ

ಸಾರ್ವಜನಿಕರು ತಮ್ಮ ಮನೆಯ ಮುಂದಿನ ಹಿತ್ತಲದಲ್ಲಿನ, ತೋಟದಲ್ಲಿನ ಗಿಡ, ಮರಗಳ ಬುಡದಲ್ಲಿ ಹಾಗೂ ಟೊಂಗೆಗಳಿಗೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿನ ಅನುಕೂಲವಾಗುವಂತೆ ನೀರಿನ ತೊಟ್ಟಿಗಳನ್ನು ನೇತುಹಾಕುವುದರ ಮೂಲಕ ಪ್ರಾಣಿಪ್ರೇಮವನ್ನು ತೊರಿಸಬೇಕು. ತಮ್ಮ ತಮ್ಮ ಮನೆಯ ಮೇಲೆ ಪಾತ್ರೆಗಳಲ್ಲಿ ನೀರು ತುಂಬಿಟ್ಟು ಪಕ್ಷಿಗಳ ನೀರಿನ ದಾಹ ತೀರಿಸಬೇಕು.

--

ಕೋಟ್‌ ತಾಲೂಕಿನ ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಹಾವು, ನವಿಲು, ಮೊಲ, ನರಿ, ತೋಳ ಸೇರಿದಂತೆ ಇತರೆ ಪಕ್ಷಿ, ಪ್ರಾಣಿಗಳು ಇವೆ. ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿಗಾಗಿ ಹೊಂಡಗಳನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಹೊಂಡಗಳನ್ನು ತುಂಬಿಸಲಾಗುತ್ತದೆ. ಅರಣ್ಯ ಪ್ರದೇಶದಲ್ಲಿನ ಗಿಡಗಳ ರಕ್ಷಣೆಗಾಗಿ ಟ್ಯಾಂಕರ್‌ ಮೂಲಕ ಗಿಡಗಳಿಗೆ ನೀರು ಉಣಿಸಲಾಗುತ್ತಿದೆ. ಜೇವೂರ, ಲೋಣಿ, ಧೂಮಕನಾಳ, ನಂದರಗಿ ಇತರೆ ಪ್ರದೇಶದಲ್ಲಿ ಕೃಷ್ಣಮೃಗಳು ಇವೆ.

- ಧನರಾಜ ಮುಜಗೊಂಡ,ಅರಣ್ಯಾಧಿಕಾರಿ, ಇಂಡಿ.

---

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭೀಕರ ಬರ ಕಾಡುತ್ತಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ಅನುಕೂಲಕ್ಕಾಗಿ ಪಟ್ಟಣದ ರಸ್ತೆಯ ಬದಿಯಲ್ಲಿರುವ ಮರ, ಗಿಡಗಳಿಗೆ ನೀರಿನ ತೊಟ್ಟಿಗಳನ್ನು ಕಟ್ಟಿ ಪ್ರತಿನಿತ್ಯ ಬೇಸಿಗೆ ಮುಗಿಯುವವರೆಗೆ ನೀರು ಹಾಕುವ ಕಾರ್ಯ ಮಾಡಲು ಯೋಚಿಸಲಾಗಿದೆ. ಶೀಘ್ರದಲ್ಲಿಯೇ ಆ ಕೆಲಸ ಮಾಡುತ್ತೇನೆ.

-ಅನಿಲಗೌಡ ಬಿರಾದಾರ,ಪುರಸಭೆ ಸದಸ್ಯ