ತೇರು ಬೀದಿ ಕಾಮಗಾರಿ ಸದ್ಯಕ್ಕೆ ಇಲ್ಲ: ಶಾಸಕ

| Published : Jan 26 2025, 01:31 AM IST

ಸಾರಾಂಶ

ಫೆ.22ರಂದು ಕೊಟ್ಟೂರೇಶ್ವರ ಮಹಾರಥೋತ್ಸವ ನಡೆಯಲಿದೆ.

ಕೊಟ್ಟೂರು: ಇದೇ ಫೆ.22ರಂದು ಕೊಟ್ಟೂರೇಶ್ವರ ಮಹಾರಥೋತ್ಸವ ನಡೆಯಲಿದೆ. ಈ ಹಿಂದೆ ಕೈಗೆತ್ತಿಕೊಳ್ಳಲಾಗಿದ್ದ ತೇರು ಬೀದಿಯ ₹2 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಯನ್ನು ಸದ್ಯಕ್ಕೆ ಕೈಬಿಟ್ಟು ಜಾತ್ರೋತ್ಸವದ ನಂತರ ಕೈಗೆತ್ತಿಕೊಳ್ಳುವಂತೆ ಶಾಸಕ ಕೆ.ನೇಮರಾಜ ನಾಯ್ಕ್ ಕಾಮಗಾರಿ ನಿರ್ವಹಣೆ ಹೊತ್ತಿರುವ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಈಗ್ಗೆ ಕೆಲ ದಿನಗಳ ಹಿಂದೆ ದೇವಸ್ಥಾನದ ಬೆಳ್ಳಿ ಬಾಗಿಲು, ಎಡಭಾಗದ ರಸ್ತೆ ಉದ್ದಕ್ಕೂ ನೆರಳು ಕಲ್ಪಿಸುವ ಶೆಲ್ಟರ್ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಜೊತೆಗೆ ತೇರು ಬೀದಿಯ ಸಿಸಿ ರಸ್ತೆ ಕಾಮಗಾರಿಗೂ ಶಾಸಕರು ಚಾಲನೆ ನೀಡಿದ್ದರು. ಸದ್ಯ ದೇವಸ್ಥಾನದ ಎಡಭಾಗದ ನೆರಳು ಕಲ್ಪಿಸುವ ಕಾಮಗಾರಿ ಮಾತ್ರ ಕೆಆರ್‌ಐಡಿ ಎಲ್ ಕೈಗೊಂಡಿದೆ.

ತೇರು ಬೀದಿಯ ಸಿಸಿ ರಸ್ತೆ ಕಾಮಗಾರಿಯನ್ನು ರಥೋತ್ಸವದ ಒಳಗೆ ಕೈಗೊಂಡರೆ ಕಾಮಗಾರಿ ಸಮರ್ಪಕವಾಗಿ ನಡೆಯಲಾರದು. ಹೀಗಾಗಿ ಜಾತ್ರೆ ನಂತರ ಕೈಗೊಳ್ಳುವಂತೆ ಪಟ್ಟಣದ ಜನತೆ ಶಾಸಕರ ಮೇಲೆ ಒತ್ತಾಯಿಸಿದ್ದರು.

ಈ ಮಧ್ಯೆ ಕೆಆರ್‌ಐಡಿಎಲ್ ನವರು ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲು ಧಾರ್ಮಿಕ ದತ್ತಿ ಇಲಾಖೆ ನಿರ್ವಾಹಣೆಯ ಹಣವನ್ನು ತಕ್ಷಣ ಹಾಕದೇ ತಡಮಾಡ ತೊಡಗಿದ್ದರು. ಇದನ್ನು ಗಮನಿಸಿದ ಪಟ್ಟಣ ನಾಗರಿಕರು ಇನ್ನು ಕೆಲ ದಿನಗಳಲ್ಲಿ ರಥೋತ್ಸವ ದಿನ ಬರುತ್ತೆ. ಅವಸರವಾಗಿ ಕಾಮಗಾರಿ ಕೈಗೊಂಡರೆ ಕಳಪೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಸಿಸಿ ರಸ್ತೆ ಕಾಮಗಾರಿಯನ್ನು ಜಾತ್ರೆ ನಂತರ ಕೈಗೊಳ್ಳುವಂತೆ ಒತ್ತಾಯಿಸಿದರು. ಹಾಗಾಗಿ ಶಾಸಕರು ಕಾಮಗಾರಿಯನ್ನು ಮುಂದೂಡಿದ್ದಾರೆ.