ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌, ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ. ಆರೋಪ ಮಾಡಿದವರು ಇದುವರೆಗೂ ಲಿಖಿತವಾಗಿ ದೂರು ನೀಡಿಲ್ಲ. ಹಾಗಾಗಿ ಅದು ಚರ್ಚೆಯ ವಿಷಯ ಅಲ್ಲ ಎಂದು ಹೇಳಿದ್ದಾರೆ.

ಮಂಗಳೂರು: ತನ್ನ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಆರೋಪಗಳಿಗೆ ಉತ್ತರಿಸಿದ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌, ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ. ಆರೋಪ ಮಾಡಿದವರು ಇದುವರೆಗೂ ಲಿಖಿತವಾಗಿ ದೂರು ನೀಡಿಲ್ಲ. ಹಾಗಾಗಿ ಅದು ಚರ್ಚೆಯ ವಿಷಯ ಅಲ್ಲ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡಿದವರು ಲಿಖಿತವಾಗಿ ನೀಡಲಿ ಎಂದು ಹಿಂದೆಯೇ ಹೇಳಿದ್ದೆ. ಲಿಖಿತ ರೂಪದಲ್ಲಿ ಕೊಡದಿದ್ದರೆ ಅದರ ಬಗ್ಗೆ ಚರ್ಚೆ ಮಾಡಲು ಆಗಲ್ಲ ಎಂದರು.

ಸಾಹಿತಿಗಳಿಗೆ 25 ಸಾವಿರ ರು.ಗಳ ಶಾಲು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಸಾಹಿತಿಗಳಿಗೆ ಗೌರವ ನೀಡುವಾಗ ಉತ್ತಮ ರೀತಿಯಲ್ಲಿಯೇ ಸನ್ಮಾನಿಸಬೇಕಾಗುತ್ತದೆ. ಅದು ರೇಷ್ಮೆ ಶಾಲು. ಅದನ್ನು ಕರ್ನಾಟಕ ಸಿಲ್ಕ್‌ ಬೋರ್ಡ್‌ನಿಂದ ಅದರ ಬೆಲೆಗೆ ತಕ್ಕುದಾಗಿ ಖರೀದಿಸಲಾಗಿದೆಯೇ ಹೊರತು ಖಾಸಗಿ ಕಂಪೆನಿಯಿಂದ ಅಲ್ಲ. ಇನ್ನು, ಅಧಿವೇಶನ ಸಂದರ್ಭ ಶಾಸಕರಿಗೆ ಮಸಾಜ್‌ ಚೇರ್‌ನ್ನು ಅದರ ಕಂಪೆನಿಯೇ ಉಚಿತವಾಗಿ ತಂದು ಕೊಡುವುದು. ಸುಳ್ಳನ್ನು ಹೇಗೂ ಸೃಷ್ಟಿಸಬಹುದು. ರಾಜಕೀಯ ಏನು ಬೇಕಾದರೂ ಮಾತನಾಡಬಹುದು. ಅವರ ರೀತಿ ನಾನು ಮಾತನಾಡಲು ಆಗಲ್ಲ. ಆರೋಪ ಮಾಡುವವರು ಮೊದಲು ಆ ಬಗ್ಗೆ ಅಧ್ಯಯನ ಮಾಡಲಿ ಎಂದು ಖಾದರ್‌ ಹೇಳಿದರು.

ಬಾಲ್‌ ಬಂದಾಗ ಬ್ಯಾಟಿಂಗ್‌: ಸಚಿವ ಸ್ಥಾನ ದೊರೆಯುವ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಪೀಕರ್‌ ಆಗಿ ಆ ಬಗ್ಗೆ ಮಾತನಾಡಲು ಆಗಲ್ಲ. ಸ್ಪೀಕರ್‌ ಆದ ಬಳಿಕ ನನ್ನ ರಾಜಕೀಯ ಚಾನೆಲ್‌ ಬಂದ್‌ ಆಗಿದೆ. ಈಗ ಸಂವಿಧಾನದ ಚಾನೆಲ್‌ ಮಾತ್ರ ಇರೋದು. ಮುಂದೆ ಬಾಲ್‌ ಬಂದಾಗ ಬ್ಯಾಟ್‌ ಬೀಸೋಣ ಎಂದರು.ಬೆಂಗಳೂರು ವಿಧಾನಸೌಧ ಆವರಣದಲ್ಲಿ 52 ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಪ್ರತ್ಯೇಕ ಊಟ- ವಸತಿಗೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿಯೂ ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಚರ್ಚೆ ನಡೆಸಲಾಗಿದೆ. ಅದಕ್ಕೆ ವ್ಯವಸ್ಥಿತವಾಗಿ ನಿಯಮ ಮಾಡಬೇಕಿದೆ ಎಂದರು.

ಡಿ.8ರಿಂದ ಬೆಳಗಾವಿ ಅಧಿವೇಶನ

ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.8ರಿಂದ 19ರವರೆಗೆ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಪೂರಕ ಸಿದ್ಧತೆ ನಡೆಸಲಾಗುತ್ತಿದೆ. ಆ ಸಂದರ್ಭ ಸುವರ್ಣ ಸೌಧ ಆವರಣದಲ್ಲಿ ಸುಂದರ ಉದ್ಯಾನವನ ಉದ್ಘಾಟನೆ ಹಾಗೂ ಕಲಬುರ್ಗಿಯ ವಿನೋದ್‌ ಕುಮಾರ್‌ ಅವರು ಖಾದಿ ಬಟ್ಟೆಯಲ್ಲಿ ರಚಿಸಿರುವ 55*75 ಅಡಿಯ ಜಗತ್ತಿನ 2ನೇ ಅತಿ ದೊಡ್ಡ ರಾಷ್ಟ್ರಧ್ವಜದ ಪ್ರದರ್ಶನ ಏರ್ಪಡಿಸಲಾಗಿದೆ. ಅಧಿವೇಶನದಲ್ಲಿ 6ಕ್ಕೂ ಅಧಿಕ ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. ಅಧಿವೇಶನ ವೇಳೆಗೆ ಇನ್ನೂ ಕೆಲವು ಮಸೂದೆಗಳು ಬರುವ ನಿರೀಕ್ಷೆಯಿದೆ ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದರು.ನಂತೂರು- ತಲಪಾಡಿ ರಸ್ತೆ 60 ಮೀ. ಅಗಲೀಕರಣನಂತೂರಿನಿಂದ ತಲಪಾಡಿಯ ಹೆದ್ದಾರಿಯನ್ನು 45 ಮೀ.ನಿಂದ 60 ಮೀ.ಗೆ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗುತ್ತಿದೆ. ಹೆದ್ದಾರಿಯಲ್ಲಿ ಭವಿಷ್ಯದಲ್ಲಿ ವಾಹನ ದಟ್ಟಣೆ ನಿವಾರಣೆಗೆ ಇದು ಸಹಕಾರಿಯಾಗಲಿದೆ ಎಂದು ಯು.ಟಿ.ಖಾದರ್‌ ಹೇಳಿದರು.