ದೊಡ್ಡಬಳ್ಳಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ವಿ.ರಾಮಚಂದ್ರಯ್ಯ ಅವರಿಗೆ ನುಡಿನಮನ ಕಾರ್ಯಕ್ರಮ ಕನ್ನಡ ಜಾಗೃತ ಭವನದಲ್ಲಿ ಶುಕ್ರವಾರ ನಡೆಯಿತು.
ದೊಡ್ಡಬಳ್ಳಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ವಿ.ರಾಮಚಂದ್ರಯ್ಯ ಅವರಿಗೆ ನುಡಿನಮನ ಕಾರ್ಯಕ್ರಮ ಕನ್ನಡ ಜಾಗೃತ ಭವನದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮುಖಂಡರು, ಕಲಾವಿದರ ಸಾವು ನೋವಿನ ಸಂಗತಿಯೇ, ಕಲಾವಿದರು ತಮ್ಮ ಕಲೆ, ಅಭಿನಯದಿಂದ ಜನರ ಮನಸ್ಸನ್ನು ತಲುಪಿ, ಭಾವನೆಗಳನ್ನು ಕೆರಳಿಸಿ, ಸಮಾಜಕ್ಕೆ ಸ್ಪೂರ್ತಿ ತುಂಬಿರುತ್ತಾರೆ. ಪ್ರತಿಭಾವಂತ ಕಲಾವಿದನ ನಿಧನ ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸುತ್ತದೆ ಎಂದರು.
ಎಂ.ಎಸ್ ಉಮೇಶ್ ಅವರು ಬಾಲ್ಯದಿಂದಲೇ ಅಭಿನಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು. ಹಿರಣ್ಣಯ್ಯರ ನಾಟಕ ಕಂಪನಿಯಲ್ಲಿ ಬಾಲನಟನಾಗಿ ನಂತರ ಗುಬ್ಬಿ ವೀರಣ್ಣರ ಕಂಪನಿಯಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದರು. 1960ರಲ್ಲಿ ʻಮಕ್ಕಳ ರಾಜ್ಯʼ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು.ಜಾನಪದ ಕಲಾವಿದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ಶ್ಯಾಕಲದೇವನಪುರ ಗ್ರಾಮದ ರಾಮಚಂದ್ರಯ್ಯ ಹಲವಾರು ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದರು. ದೊಡ್ಡಬಳ್ಳಾಪುರ ತಾಲೂಕಿನ ಹಲವಾರು ಹಿರಿಯ ಕಲಾವಿದರಿಗೆ ಸರ್ಕಾರದಿಂದ ಮಾಸಾಶನ ದೊರೆಯುವಂತೆ ಮಾಡಿದರು. ದೊಡ್ಡಬಳ್ಳಾಪುರಕ್ಕೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸ್ಥಳೀಯ ಕಲಾವಿದರನ್ನು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹಿರಿಯ ಹೋರಾಟಗಾರ ಸಂಜೀವ್ ನಾಯಕ್, ಗುರುರಾಜಪ್ಪ, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಣ್ಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ, ನವೋದಯ ವಿದ್ಯಾಲಯ ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ಸಾಸಲು ಹೋಬಳಿ ಅಧ್ಯಕ್ಷ ಜಿ.ಎಂ.ನಾಗರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿಗಳಾದ ನಾಗರತ್ನಮ್ಮ, ಕೋದಂಡರಾಮ್, ಜಿ.ವಿ.ಗಣೇಶ್, ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ದೈಹಿಕ ಶ್ರೀನಿವಾಸ್, ದರ್ಗಾಜೋಗಿಹಳ್ಳಿ ಮಲ್ಲೇಶ್, ಇಸ್ತೂರು ರಂಗಸ್ವಾಮಯ್ಯ, ಮುಂತಾದವರು ಭಾಗವಹಿಸಿದ್ದರು.19ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಹಾಸ್ಯ ನಟ ಎಂ.ಎಸ್.ಉಮೇಶ್ ಹಾಗೂ ಜನಪದ ಕಲಾವಿದ ರಾಮಚಂದ್ರಯ್ಯ ನುಡಿನಮನ ನಡೆಯಿತು.