ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವಾಗಲಿ ರೈತರ ಹೋರಾಟವನ್ನು ದಾಖಲೀಕರಣ ಮಾಡಿಲ್ಲ. ರೈತರಿಗೆ ಜಾಗೃತಿ ಮೂಡಿಸುತ್ತಿಲ್ಲ. ರೈತರ ಬದುಕಿನ ಉನ್ನತಿಗೆ ಹೆಚ್ಚಿನ ಕಾಳಜಿ ವಹಿಸಿಲ್ಲ. ರೈತನ ಬದುಕನ್ನು ಯಾರೂ ನೆನಸಿಕೊಳ್ಳುವುದಿಲ್ಲ. ಆದರೆ, ಕರ್ನಾಟಕ ಲಲಿತಕಲಾ ಅಕಾಡೆಮಿ ರೈತರ ಚಳವಳಿ, ಹೋರಾಟ, ಬದುಕಿನ ಚಿತ್ರದಾಖಲೆ ಮಾಡುತ್ತಿರುವುದು ರೈತ ಕುಟುಂಬಕ್ಕೆ ನೀಡಿದ ಗೌರವ ಎಂದೇ ಭಾವಿಸುತ್ತೇನೆ

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರೈತ ಚಳವಳಿ ಮತ್ತು ಹೋರಾಟಗಾರರ ಜೀವನ ಚಿತ್ರಕಲೆ ಮೂಲಕ ದಾಖಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ರೈತನಾಯಕಿ ಸುನೀತ ಪುಟ್ಟಣ್ಣಯ್ಯ ತಿಳಿಸಿದರು.

ಮೇಲುಕೋಟೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ, ರಾಜ್ಯ ರೈತಸಂಘ ಪಾಂಡವಪುರ ತಾಲೂಕು ಘಟಕ ಮತ್ತು ಕರ್ನಾಟಕ ಸಂಸ್ಕೃತ ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ರೈತರ ಬದುಕು ಹೋರಾಟ ಚಳವಳಿಯ ಚಿತ್ರದಾಖಲೆ, ರೈತರಿಗೆ ಚಿತ್ರನಮನ ಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವಾಗಲಿ ರೈತರ ಹೋರಾಟವನ್ನು ದಾಖಲಿಕರಣ ಮಾಡಿಲ್ಲ. ರೈತರಿಗೆ ಜಾಗೃತಿ ಮೂಡಿಸುತ್ತಿಲ್ಲ. ರೈತರ ಬದುಕಿನ ಉನ್ನತಿಗೆ ಹೆಚ್ಚಿನ ಕಾಳಜಿ ವಹಿಸಿಲ್ಲ. ರೈತನ ಬದುಕನ್ನು ಯಾರೂ ನೆನಸಿಕೊಳ್ಳುವುದಿಲ್ಲ. ಆದರೆ, ಕರ್ನಾಟಕ ಲಲಿತಕಲಾ ಅಕಾಡೆಮಿ ರೈತರ ಚಳವಳಿ, ಹೋರಾಟ, ಬದುಕಿನ ಚಿತ್ರದಾಖಲೆ ಮಾಡುತ್ತಿರುವುದು ರೈತ ಕುಟುಂಬಕ್ಕೆ ನೀಡಿದ ಗೌರವ ಎಂದೇ ಭಾವಿಸುತ್ತೇನೆ ಎಂದರು.

ರೈತ ನಾಯಕ ಗೋವಿಂದೇಗೌಡ ಮಾತನಾಡಿ, ಅರಣ್ಯಇಲಾಖೆ ಯಾರಿಗೂ ಲಾಭ ಮಾಡಿಕೊಡುವ ಸಲುವಾಗಿ ಎಲ್ಲಾ ಹಳ್ಳಿಗಳಲ್ಲೂ ನೀಲಗಿರಿ ಮರಗಳನ್ನು ನೆಟ್ಟು ಪರಿಸರ ನಾಶ ಮಾಡಿತು. ಇಂತಹ ಸಂದರ್ಭದಲ್ಲಿ ಇದರ ವಿರುದ್ಧ ದನಿಎತ್ತಿ ಪರಿಸರ ಉಳಿಸಲು ರೈತ ಸಂಘ ಹೋರಾಟ ಮಾಡಿದೆ ಎಂದರು.

ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ ಹೊರತು ಯಾವುದೇ ಸರ್ಕಾರ ರೈತರ ಬದಕನ್ನು ಹಸನು ಮಾಡುವ ಕಾರ್ಯಕ್ರಮ ರೂಪಿಸಿಲ್ಲ. ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದ ಕಾರಣ ರೈತರು ಇಂದಿಗೂ ತಮ್ಮ ಉತ್ಪನ್ನ ಮಾರಾಟ ಮಾಡಲು ದಳ್ಳಾಳಿಗಳನ್ನೇ ಅವಲಂಬಿಸಬೇಕಾಗಿದೆ. ಅದಕ್ಕಾಗಿಯೇ ಕಾಲಕಾಲಕ್ಕೆ ರೈತಸಂಘ ರೈತರ ಪರ ಕೆಲ ಸಮಾಡುತ್ತಾ ಬಂದಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ರೈತಸಂಘ ಸಕ್ರಿಯವಾಗಿ ದೊಡ್ಡ ದೊಡ್ಡ ಚಳವಳಿ ಮಾಡಿದೆ. ಆದರೆ, ಯಾವುದೇ ಹೋರಾಟಗಳೂ ದಾಖಲೀಕರಣವಾಗಿಲ್ಲ. ಮೇಲುಕೋಟೆಯಲ್ಲಿ ಚಿತ್ರಕಲೆ ಮೂಲಕ ರೈತರ ಚಳವಳಿ ಬದುಕು ಹೋರಾಟವನ್ನು ಪ್ರಥಮ ಬಾರಿಗೆ ದಾಖಲೀಕರಣವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಕಲಾವಿದರು ತಮ್ಮದೇ ರೀತಿ ಚಿತ್ರಣಗಳನ್ನು ಬಿಡಿಸಿ ರೈತಸಂಘದ ಹೋರಾಟಗಳನ್ನು ಬಿಡಿಸಲಿದ್ದೀರಿ. ಅದೇ ರೀತಿ ರೈತ ಸಂಘದ ಚಳವಳಿ, ಹೋರಾಟಗಳನ್ನು ಪುಸ್ತಕದ ಮೂಲಕ ದಾಖಲೀಕರಿಸಲು ಲೇಖಕರು ಮುಂದೆ ಬಂದಿದ್ದಾರೆ. ಕೆ.ಎಸ್.ಪುಟ್ಟಣ್ಣಯ್ಯ ನಾಯಕತ್ವದಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಗೋವಿಂದೇಗೌಡರು ಮತ್ತು ನಾವು ಬದುಕಿದ್ದೇವೆ. 82ರಿಂದ ಈವರೆಗಿನ ಎಲ್ಲಾ ಹಂತಗಳನ್ನು ಸಮಗ್ರವಾಗಿ ದಾಖಲೀಕರಣ ಮಾಡಿ ಪುಸ್ತಕ ಹೊರತರುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿ, ರೈತಸಂಘದ ಹೋರಾಟ ತ್ಯಾಗ ಜೀವನವಾಗಿದೆ. ರೈತ ಹೋರಾಟಗಾರರು ಇಡೀ ಜೀವನ ಬಿಟ್ಟು ತಿಂಗಳುಗಟ್ಟಲೆ ಮನೆಯಿಂದ ಹೊರಗೆ ಉಳಿದು ರೈತರ ಬದುಕು ಹಸನು ಮಾಡಲು ಶ್ರಮಿಸಿದ್ದಾರೆ ಎಂದರು.

ವೇದಿಕೆಯಲ್ಲಿ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಪ್ರತಿಮೆಯಿಟ್ಟು ಅವರ ಹೋರಾಟದ ಬದುಕು ಜೀವನಶೈಲಿ ಅನುಭವಿಸಿದ ಜೀವನ ಚಿತ್ರಣವನ್ನು ಸ್ಮರಿಸಲಾಯಿತು. ಇದೇ ವೇಳೆ ರೈತ ಹೋರಾಟಗಾರರಾದ ನಂಜುಂಡಸ್ವಾಮಿ ಇತರ ನಾಯಕರ ಬಾವಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ವೇದಿಕೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, ರಿಜಿಸ್ಟಾರ್ ಎನ್.ನಮ್ರತಾ, ಭರಾರಾಸಂಸಂ ಕುಲಸಚಿವ ಡಾ.ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿಬಿರಲ್ಲಿ 30ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಜೂ.19ರವರೆಗೆ ರೈತಹೋರಾಟದ ಆಯಾಮಗಳನ್ನು ಕುಂಚದ ಮೂಲಕ ಚಿತ್ರಿಸಿ ದಾಖಲೀಕರಣ ಮಾಡಿ ಜೂ.20ರಂದು ಪ್ರದರ್ಶನ ಮಾಡಲಿದ್ದಾರೆ.