ಸಾರಾಂಶ
ಗದಗ: ಅಸ್ಪೃಶ್ಯ ಸಂಬಂಧಿತ ಅಲೆಮಾರಿಗಳಿಗೆ ಶೇ. 1ರ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಶನಿವಾರ ಗದಗ ನಗರದಲ್ಲಿ ಕಿತ್ತೂರ ಚನ್ನಮ್ಮ ಸರ್ಕಲ್‌ದಿಂದ ಬೃಹತ್ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಯ 59 ಸೂಕ್ಷ್ಮ ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ ಬೆಂಗಳೂರು ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾದ ಗದಗ ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ದುರಗೇಶ ವಿಭೂತಿ ಮಾತನಾಡಿ (ಗೌರವಾನ್ವಿತ ನ್ಯಾಯಮೂರ್ತಿ ಡಾ. ನಾಗಮೋಹನ ದಾಸ್ ಆಯೋಗದ ವರದಿಯ ಶಿಫಾರಸ್ಸಿನಂತೆ) ಕ್ರ.ಸಂ. 1, ಪ್ರವರ್ಗ-ಎ ಜಾತಿಗಳ ಸಂಖ್ಯೆ: 59 ಶೇಕಡಾವಾರು ಮೀಸಲಾತಿ ಶೇ 1ರಷ್ಟು ನೀಡಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸು ನೀಡಿ ಇದನ್ನು ಯಥಾವತ್ತಾಗಿ ಜಾರಿಗೊಳಿಸಲು ಹಕ್ಕೊತ್ತಾಯಕ್ಕಾಗಿ ಮುಖ್ಯಮಂತ್ರಿಗಳಿಗೆ ಶಿಫಾರಸು ವರದಿ ಸಲ್ಲಿಸಿದ್ದರು. ಆದರೆ ಕರ್ನಾಟಕ ಸರ್ಕಾರ ಆ. 19ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಚಿವ ಸಂಪುಟದಲ್ಲಿ ಶೇ. 1ರ ಮೀಸಲಾತಿಯನ್ನು ಬಲಾಢ್ಯ ಸಮುದಾಯಗಳ ಜತೆಗೆ ಸಿ ಗ್ರುಪ್‌ನಲ್ಲಿ ಸೇರಿಸಿರುವುದು ಸರಿಯಾದುದಲ್ಲ, ಅಸ್ಪೃಶ್ಯ ಸಂಬಂಧಿತ ಅಲೆಮಾರಿಗಳಿಗೆ ಶೇ. 1 ಮೀಸಲಾತಿ ನೀಡಬೇಕೆಂದು ಮನವಿ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷ ಗತಿಸಿದರೂ ಈ ಅಲೆಮಾರಿ ಸಮುದಾಯದಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ನಮ್ಮ ಸಮುದಾಯದವರು ಅನಕ್ಷರಸ್ಥರಾಗಿದ್ದು, ಇನ್ನೂ ಗುಡಿಸಲು, ಟೆಂಟ್, ಜೋಪಡಿಗಳಲ್ಲಿ ಸ್ವಂತ ಸೂರು ಇಲ್ಲದೆ, ಖಾಲಿ ಜಾಗೆ ನಿವೇಶನಗಳು ಸೇರಿದಂತೆ ಬಯಲು ಜಾಗೆಗಳಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಈ ಅಲೆಮಾರಿ ಸಮುದಾಯಗಳಲ್ಲಿ ನಾಗಮೋಹನ ದಾಸ ವರದಿಯಲ್ಲಿ ಎ ಗ್ರುಪ್ ಗುರುತಿಸಿ ಪರಿಶಿಷ್ಟ ಜಾತಿ ಅಲೆ ಸಮುದಾಯದವರಿಗೆ ಸರ್ಕಾರಿ ನೌಕರಿಗಳು ಇರುವುದಿಲ್ಲ. ಪದವೀಧರರು ಇಲ್ಲ, ಇನ್ನೂ ರಾಜಕೀಯವಾಗಿ ಯಾವುದೇ ಸ್ಥಾನಮಾನ ಪಡೆದಿರುವುದಿಲ್ಲ. ಇಂತಹ ಅಲೆಮಾರಿ ಸಮುದಾಯಗಳಿಗೆ ಶೇ 1ರ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದ್ದಾರೆ. ಇದನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಈ ನಿರ್ಲಕ್ಷ್ಯ ಬರುವ ದಿನಮಾನಗಳಲ್ಲಿ ಅಲೆಮಾರಿಗಳಿಗೆ ಮರಣ ಶಾಸನವಾಗಲಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಅಲೆಮಾರಿ ಸಮುದಾಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಹಿರಿಯ ದಲಿತ ಮುಖಂಡ ಎಸ್.ಎನ್. ಬಳ್ಳಾರಿ ಅಲೆಮಾರಿಗಳಿಗೆ ಅನ್ಯಾಯವಾಗಿದ್ದು ನಿಜ. ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳು, ಎಸ್.ಸಿ,ಎಸ್.ಟಿ. ದೌರ್ಜನ್ಯ ಸಮಿತಿ ಸದಸ್ಯರುಗಳು, ಹಿರಿಯ ಸಾಹಿತಿಗಳು, ಪ್ರಗತಿಪರರು, ಬೆಂಬಲ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಚೆನ್ನದಾಸರ, ಗಂಟಿಚೋರ, ಶಿಳ್ಳೇಕ್ಯಾತ, ಸುಡುಗಾಡುಸಿದ್ದ, ಬುಡ್ಗಜಂಗಮ, ದೊಂಬರು, ಗೋಸಂಗಿ, ಸಿಂಧೋಳ, ಹಂದಿಜೋಗಿ, ದಕ್ಕಲಿಗ ಇನ್ನು ಉಳಿದ 59 ಅಲೆಮಾರಿಗಳ ಮುಖಂಡರು ಗದಗ ಜಿಲ್ಲೆಯ 7 ಎಲ್ಲಾ ತಾಲೂಕುಗಳ ಪರಿಶಿಷ್ಟ ಜಾತಿಯ 49 ಅಲೆಮಾರಿ ಸಮುದಾಯಗಳ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಹಾಗೂ ಎಲ್ಲ ತಾಲೂಕು ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು, ತಾಲೂಕು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಎಲ್ಲಾ ಅಲೆಮಾರಿ ಮುಖಂಡರು ಪಾಲ್ಗೊಂಡಿದ್ದರು.
ಅಲೆಮಾರಿ ಸಮುದಾಯದ ಕಲಾವಿದರು ತಮ್ಮ ವಿಶೇಷ ವೇಷಭೂಷಣಗಳೊಂದಿಗೆ ಭಾಗವಹಿಸಿ ತಮಗೆ ಆದ ಅನ್ಯಾಯವನ್ನು ಖಂಡಿಸಿ ಸುಮಾರು 5 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಅಲೆಮಾರಿಗಳು ಭಾಗವಹಿಸಿದ್ದು ಇದೊಂದು ಐತಿಹಾಸಿ ಹೋರಾಟಕ್ಕೆ ಜನಸಾಗರವೇ ಸೇರಿತ್ತು. ಪಾದಯಾತ್ರೆಯಲ್ಲಿ ತೀವ್ರ ಜನಸಂದಣಿಯಿಂದ ಕೂಡಿದ್ದು ಕೆಲವು ಘಂಟೆಗಳ ಕಾಲ ಗದಗ ನಗರದ ಮುಳಗುಂದ ನಾಕಾ, ಕಿತ್ತೂರ ಚನ್ನಮ್ಮ ಸರ್ಕಲ್, ಟಿಪ್ಪು ಸುಲ್ತಾನ ಸರ್ಕಲ್‌ದಲ್ಲಿ ಸಂಚಾರಕ್ಕೆ ವ್ಯತ್ಯಾಯ ಉಂಟಾಯಿತು.