ಸಾರಾಂಶ
ಹಾವೇರಿ: ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮೈಸೂರಿನ ಪುರಭವನದಲ್ಲಿ ಜ. 28ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಕ್ಕೂಟ ಸ್ಥಾಪನೆಯಾಗಿ ಎರಡು ವರ್ಷವಾಗುತ್ತಿರುವ ಸವಿನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಲೆಮಾರಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.ರಾಜ್ಯದಾದ್ಯಂತ ಹಿಂದುಳಿದ ವರ್ಗದ ಪ್ರವರ್ಗ–1ಕ್ಕೆ ಸೇರಿದ ಹಲವಾರು ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ 46 ಜಾತಿಗಳನ್ನೊಳಗೊಂಡ ಅಲೆಮಾರಿ ಕುಟುಂಬಗಳು, ಸುಮಾರು ವರ್ಷಗಳಿಂದ ಬೀದಿ ಬದಿಗಳಲ್ಲಿ, ಸರ್ಕಾರಿ ಮತ್ತು ಖಾಸಗಿ ಖಾಲಿ ನಿವೇಶನಗಳಲ್ಲಿ ಗುಡಿಸಲು–ಗುಡಾರಗಳನ್ನು ಕಟ್ಟಿಕೊಂಡು ಶೋಚನೀಯ ಸ್ಥಿತಿಯಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತಿ ಹಿಂದುಳಿದ ಈ ಸಮುದಾಯದವರು ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ 10 ವರ್ಷಗಳಿಂದ ಮೇಲ್ಪಟ್ಟು ಗುಡಿಸಲು, ಡೇರೆ, ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಈ ನಿವಾಸಿಗಳಿಗೆ ಆ ಜಾಗದ ಹಕ್ಕುಪತ್ರ ನೀಡಬೇಕು. ಈ ಜನರಿಗೆ ರುದ್ರಭೂಮಿಗಾಗಿ ಸರ್ಕಾರಿ ಜಾಗವನ್ನು ಕಾಯ್ದಿರಿಸಬೇಕು. ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯ ಭವನಗಳನ್ನು ನಿರ್ಮಿಸಬೇಕು. ಈ ಸಮುದಾಯದ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರಮುಖರಾದ ಶೆಟ್ಟಿ ವಿಭೂತಿ, ಪಾಂಡುರಂಗ, ಗಿರೀಶ ಗಣಾಚಾರಿ, ಆನಂದ ಜಾಧವ್, ಹುಲ್ಲಪ್ಪ ಜಾಡರ್ ಮುಂತಾದವರು ಇದ್ದರು.