ಸಾರಾಂಶ
ಮಾರುತಿ ಶಿಡ್ಲಾಪೂರಹಾನಗಲ್ಲ: ತುತ್ತಿನ ಚೀಲ ತುಂಬಿಸಿಕೊಳ್ಳಲು ಊರೂರು ಅಲೆದಾಡುವ ಅಲೆಮಾರಿ ಸುಡುಗಾಡುಸಿದ್ಧರು, ಡೊಂಬರ ಸಮುದಾಯದ ಬದುಕು ಅಸಹನೀಯವಾಗಿದ್ದು, ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, ಇವರು ವಾಸಿಸುವ ಬಡಾವಣೆಯು ಹಲವು ಸೌಲಭ್ಯಗಳಿಲ್ಲದೇ ನಿವಾಸಿಗಳು ನಿತ್ಯ ನರಳುತ್ತಿದ್ದಾರೆ.
ಪಟ್ಟಣದ ಹೊರವಲಯದ ಹೆಸರಿಲ್ಲದ ಈ ಬಡಾವಣೆಯಲ್ಲಿ 40 ಕುಟುಂಬಗಳು ವಾಸಿಸುತ್ತಿವೆ. ಇವರಿಗೆ ಅಗತ್ಯವಾಗಿ ಬೇಕಾದ ನೀರೂ ಇಲ್ಲ. ರಸ್ತೆ ವ್ಯವಸ್ಥೆ ದೇವರಿಗೇ ಪ್ರೀತಿ. ವಿದ್ಯುತ್ ಸಂಪರ್ಕವೂ ಅತ್ಯಂತ ಅಸುರಕ್ಷಿತವಾಗಿದೆ. ಇನ್ನು ಮನೆ ಕಟ್ಟಿಕೊಳ್ಳುವ ಸಮಸ್ಯೆ ಸೇರಿದಂತೆ ಹಲವು ತಾಪತ್ರಯಗಳು ಇವರನ್ನು ಆವರಿಸಿದ್ದರೂ ಸಂಬಂಧಪಟ್ಟವರು ಪರಿಹರಿಸುವ ಗೋಜಿಗೆ ಹೋಗಿಲ್ಲ.ಪಟ್ಟಣದ ಖಾಸಗಿ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡಿದ್ದ ಅಲೆಮಾರಿ ಸುಡುಗಾಡು ಸಿದ್ಧರು, ಡೊಂಬರು ಸಮುದಾಯದ ಅಲೆಮಾರಿ ಕೆಲಸಗಾರರಿಗೆ ಮಳೆ ಕಾರಣದಿಂದಾಗಿ ಹಾಕಿಕೊಂಡ ಟೆಂಟ್‌ಗಳು ಬಿದ್ದು ಇವರು ಬೀದಿಗೆ ಬಿದ್ದರು. ನಂತರ ನವನಗರದಲ್ಲಿರುವ ನೀರಿನ ಟ್ಯಾಂಕ್ ಬಳಿ ವಾಸಕ್ಕೆ ಮುಂದಾದರು. ಅಲ್ಲಿಯೂ ಅದೇ ಸ್ಥಿತಿ ಬಂತು. ಅಂತಿಮವಾಗಿ ಪುರಸಭೆ ಆಡಳಿತ ಹಾನಗಲ್ಲಿನಿಂದ ಪಾಳಾ ರಸ್ತೆಯ ಬದಿ ಜಾಗದಲ್ಲಿ ತಲಾ 20x30 ಅಳತೆಯ ನಿವೇಶನವನ್ನು 40 ಕುಟುಂಬಗಳಿಗೆ ನೀಡಿದರು. ಕಳೆದ 8 ತಿಂಗಳಿಗೂ ಅಧಿಕ ಕಾಲದಿಂದ ಈ ಅಲೆಮಾರಿಗಳು ಅಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರಿಗೆಲ್ಲ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಇನ್ನೂ 9 ಜನರಿಗೆ ನಿವೇಶನ ಹಕ್ಕುಪತ್ರವನ್ನೂ ನೀಡಿಲ್ಲ. ಇಲ್ಲಿ 21 ಸುಡುಗಾಡು ಸಿದ್ಧರು, 12 ಡೊಂಬರು ಹಾಗೂ ಇತರ 7 ಕುಟುಂಬಗಳು ವಾಸವಾಗಿವೆ. 120ಕ್ಕೂ ಅಧಿಕ ಜನರ ವಾಸ ಇಲ್ಲಿದೆ.ಈ ನಿವೇಶನಗಳಲ್ಲಿ ಮುಖ್ಯವಾಗಿ ರಸ್ತೆ ಸಮಸ್ಯೆ ಇದೆ. ಮಳೆ ಬಂತೆಂದರೆ ಓಡಾಡುವುದೂ ಕಷ್ಟ. ಕುಡಿಯುವ ನೀರಿಗಾಗಿ ಪುರಸಭೆ ಕೊರೆದ ಕೊಳವೆ ಬಾವಿಯಲ್ಲಿ ನೀರೇ ಬರಲಿಲ್ಲ. ಪಕ್ಕದ ಖಾಸಗಿಯವರ ಹೊಲದ ಕೊಳವೆ ಬಾವಿಯ ನೀರನ್ನೇ ಅವರು ಅವಲಂಬಿಸಿದ್ದಾರೆ. ಅದು ಕೂಡ ಆಗಾಗ ಕೈಕೊಡುತ್ತದೆ. ಅಲ್ಲಿಂದ ದೂರದ ದರ್ಗಾದ ಬಳಿಯಿಂದ ನೀರು ತರುವ ಸ್ಥಿತಿ ಇದೆ. ಅಸುರಕ್ಷಿತ ವಿದ್ಯುತ್: ವಿದ್ಯುತ್ ವ್ಯವಸ್ಥೆಯಂತೂ ತೀರ ಆತಂಕಕಾರಿಯಾಗಿದೆ. ತಮ್ಮ ಮನೆಗೆ ಬೆಳಕು ಬೇಕೆಂದು ಪಕ್ಕದಲ್ಲಿದ್ದ ಒಂದು ವಿದ್ಯುತ್ ಕಂಬದಿಂದ ವೈರ್‌ಗಳ ಮೂಲಕ ತಾವೇ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇಲ್ಲಿ ಸುರಕ್ಷಿತವಾದ ಕಂಬ ತಂತಿಗಳನ್ನು ಹಾಕಿ ವಿದ್ಯುತ್ ಪೂರೈಕೆ ಮಾಡುವ ಅಗತ್ಯವಿದೆ. ಇದಕ್ಕಾಗಿ ಪುರಸಭೆ ಹಾಗೂ ಕಂದಾಯ ಇಲಾಖೆ ಶೀಘ್ರ ಕ್ರಮ ಜರುಗಿಸಬೇಕಾಗಿದೆ.
ಶೌಚಾಲಯವಿಲ್ಲ: ಸ್ವಚ್ಛ ಭಾರತ್, ಬಯಲು ಬಹಿರ್ದೆಸೆ ಬೇಡ ಎನ್ನುವ ಸರ್ಕಾರಗಳಿಗೆ ಇಂತಹ ಬಡ ಅಲೆಮಾರಿ ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿಲ್ಲ. ಇಲ್ಲಿನ ಯಾವುದೇ ನಿವಾಸಿಗಳಿಗೆ ಆಶ್ರಯ ಮನೆಗಳನ್ನು ಹಾಕಿಕೊಟ್ಟಿಲ್ಲ. ಸೀರೆ, ತಾಡಪತ್ರಿ, ಕೌದಿಗಳಿಂದ ಮನೆ ಕಟ್ಟಿಕೊಂಡಿದ್ದಾರೆ.ನಿವೇಶನ ಅಳತೆ ಸಮಸ್ಯೆ: ಇಲ್ಲಿರುವ 40 ಕುಟುಂಬಗಳಿಗೆ ಕೊಟ್ಟ ಹಕ್ಕುಪತ್ರದಲ್ಲಿ 20x30 ಅಳತೆ(600 ಚದರ ಅಡಿ) ಜಾಗ ಎಂದು ಗುರುತಿಸಲಾಗಿದೆ. ವಾಸ್ತವಾಗಿ ಜಾಗೆ ಕಡಿಮೆ ಇದೆ. ಇದನ್ನು ಸರಿಪಡಿಸಿಕೊಡಲು ತಹಸೀಲ್ದಾರರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಲೆಮಾರಿಗಳಿಗೆ ಅಲೆದಾಡುವುದು ಕಷ್ಟವಲ್ಲ. ಆದರೆ ಬೇಡಿಕೆ ಕನಿಷ್ಠ ಈಡೇರುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎನ್ನುತ್ತಾರೆ. ಜಿಲ್ಲಾಧಿಕಾರಿಗೆ ಮನವಿ: ಇತ್ತೀಚೆಗಷ್ಟೇ ಸುಡುಗಾಡುಸಿದ್ಧರು ಸಮುದಾಯದ ಅಲೆಮಾರಿ ಜನರು ಜಿಲ್ಲಾಧಿಕಾರಿಗಳನ್ನೂ ಕಂಡು ತಮ್ಮ ಸಮಸ್ಯೆಯ ಅಳಲನ್ನು ತೋಡಿಕೊಂಡಿದ್ದಾರೆ. ನಾವು ಸಮಸ್ಯೆಯನ್ನು ಯಾರಿಗೂ ಮಾಡಿಲ್ಲ. ನಮಗೆ ಆದ ಸಮಸ್ಯೆಯನ್ನು ಸರ್ಕಾರ ಕಣ್ಬಿಟ್ಟು ನೋಡಿ ಪರಿಹರಿಸಲಿ ಎಂದು ಸುಡುಗಾಡು ಸಿದ್ಧರು ಸಮುದಾಯದ ಸೋಮಣ್ಣ ಕೂಡ್ಲಿಗಿ ಮನವಿ ಮಾಡಿದ್ದಾರೆ.
ಶಾಶ್ವತವಾದ ಸಣ್ಣ ಮನೆ ಬೇಕು: ನಮಗೆ ಶಾಶ್ವತವಾದ ಸಣ್ಣ ಮನೆ ಬೇಕು. ಅನುದಾನ ಬಂದಿಲ್ಲ, ಬಂದ ಮೇಲೆ ಮನೆ ಕಟ್ಟಿಕೊಡುತ್ತೇವೆ ಎನ್ನುತ್ತಾರೆ. ನಮ್ಮ ಸ್ಥಿತಿಯಲ್ಲಿರುವವರಿಗೆ ಸರ್ಕಾರ ವಿಳಂಬವಿಲ್ಲದೆ ಅನುಕೂಲ ಕಲ್ಪಿಸಬೇಕು. ನಮ್ಮ ಮೇಲೆ ಕರುಣೆ ತೋರಿ ಎಂದು ಸುಡುಗಾಡುಸಿದ್ಧ ಸಮುದಾಯದವರಾದ ಸೋಮಣ್ಣ ಕೂಡ್ಲಿಗಿ, ದುರಗಪ್ಪ ವಿಭೂತಿ ತಿಳಿಸಿದರು.ಪ್ರಾಮಾಣಿಕ ಪ್ರಯತ್ನ:ಇಲ್ಲಿ ವಾಸಿಸುವವರಿಗೆ ಜಾಗದ ಅಳತೆಯ ಸಮಸ್ಯೆ ಪರಿಹರಿಸಲು ಕ್ರಮ ಜರುಗಿಸುತ್ತೇವೆ. ತಾತ್ಕಾಲಿಕವಾಗಿ ಪಕ್ಕದ ಬೋರ್‌ವೆಲ್‌ನಿಂದ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅನುದಾನಕ್ಕಾಗಿ ಕಾಯುತ್ತಿದ್ದು, ಕೂಡಲೇ ಅವರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.
ಸೌಲಭ್ಯಕ್ಕೆ ಯತ್ನ: ಸುಡುಗಾಡು ಸಿದ್ಧರು ಮತ್ತು ಡೊಂಬರು ಸಮುದಾಯದ ಅಲೆಮಾರಿಗಳು ಖಾಸಗಿ ಜಾಗಗಳಲ್ಲಿ ಅಸುರಕ್ಷಿತ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ಅವರ ಈ ಕಷ್ಟವನ್ನು ಪರಿಗಣಿಸಿಯೇ ಪುರಸಭೆಯಿಂದ ಅವರಿಗೆ ಶಾಶ್ವತ ನಿವೇಶನ ನೀಡಲಾಗಿದೆ. ಅನುದಾನದ ಲಭ್ಯತೆಯನ್ನು ನೋಡಿಕೊಂಡು ಅಗತ್ಯ ಸೌಲಭ್ಯ ನೀಡಲು ಯತ್ನಿಸುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ತಿಳಿಸಿದರು.