ನಾಗರಿಕತೆಯ ಹೆಸರಿನಲ್ಲಿ ಸಂಸ್ಕೃತಿಯ ಮರುವು ಒಳ್ಳೆಯದಲ್ಲ, ಅಲೆಮಾರಿಗಳೂ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಸೂರು, ನೀರು, ಆಹಾರ ಭದ್ರತೆ ಉಳ್ಳವರಾಗಬೇಕು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.
ಹಾನಗಲ್ಲ: ನಾಗರಿಕತೆಯ ಹೆಸರಿನಲ್ಲಿ ಸಂಸ್ಕೃತಿಯ ಮರುವು ಒಳ್ಳೆಯದಲ್ಲ, ಅಲೆಮಾರಿಗಳೂ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಸೂರು, ನೀರು, ಆಹಾರ ಭದ್ರತೆ ಉಳ್ಳವರಾಗಬೇಕು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು. ಹಾನಗಲ್ಲಿನ ಹೊರವಲಯದಲ್ಲಿ ಹಾವೇರಿ ಜಿಲ್ಲಾ ಅಲೆಮಾರಿಗಳ ಸಮುದಾಯಗಳ ಸಂಘ, ಬೆಂಗಳೂರಿನ ನಂದಾದೀಪ ಚಾರಿಟೇಬಲ್ ಟ್ರಸ್ಟ, ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ ಸಂಯುಕ್ತವಾಗಿ ಆಯೋಜಿಸಿದ ಅಲೆಮಾರಿ ಸಮುದಾಯದ ನಿವಾಸಿಗಳ ಗೃಹ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಒಂದು ನೆಲೆ ಇರಬೇಕು. ದುಡಿಯುವವರಿಗೆ ಒಂದು ಪ್ರೊತ್ಸಾಹವೂ ಬೇಕು. ನಮ್ಮ ಸಂವಿಧಾನದಂತೆ ಎಲ್ಲರಿಗೂ ಸಮಾನ ಅವಕಾಶಗಳಿರಬೇಕು. ಈಗ ನಾಗರೀಕ ಬದುಕಿನ ಶೈಲಿ ಬದಲಾಗಿದೆ. ಆದರೆ ನಮ್ಮ ಸಂಸ್ಕೃತಿಯನ್ನು ನಮ್ಮಲ್ಲಿ ಉಳಿಸಿಕೊಳ್ಳುವ ಮನಸ್ಸು ಕೂಡ ನಮ್ಮದಾಗಬೇಕು. ನಮ್ಮ ಬದುಕಿನ ವಿನ್ಯಾಸ ಚನ್ನಾಗಿರಬೇಕು. ನಮ್ಮ ಕುಟುಂಬಗಳ ಬದುಕು ಹಸನಾಗಲು ನಮ್ಮೆಲ್ಲರ ಕಾಳಜಿ ಅವಶ್ಯ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರು ಅಲೆಮಾರಿ ಕಾರ್ಯವಿಬಾಗದ ಮುಖ್ಯಸ್ಥ ಗ.ರಾ.ಸುರೇಶ ಮಾತನಾಡಿ, ಅಲೆಮಾರಿಗಳ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಸಮಾಜ ಒಟ್ಟಾಗಿ ಆಲೋಚಿಸಬೇಕಾಗಿದೆ. ಹಾನಗಲ್ಲಿನಲ್ಲಿ ಅಲೆಮಾರಿಗಳಿಗಾಗಿ 42 ಮನೆಗಳ ನಿರ್ಮಾಣ ಅತ್ಯವಶ್ಯವಾಗಿದೆ. ಇಂತಹ ಅಲೆಮಾರಿಗಳು ದುರ್ಬಲರನ್ನು ಗುರಿ ಮಾಡಿಕೊಂಡು ಮತಾಂತರಿಸುವವರಿಂದ ಈ ಸಮುದಾಯವನ್ನು ರಕ್ಷಿಸಬೇಕಾಗಿದೆ. ನೈತಿಕ ಬೆಂಬಲ ನೀಡಬೇಕಾಗಿದೆ. ಅಲೆಮಾರಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಕಲ್ನಾಣಕುಮಾರ ಶೆಟ್ಟರ ಮಾತನಾಡಿ, ವಿಳಾಸವೇ ಇಲ್ಲದಂತಾದ ಜನಾಂಗಗಳಿಗೆ ಒಂದು ಉತ್ತಮ ನಿವಾಸ ನಿರ್ಮಾಣಕ್ಕೆ ಸಹಕರಸಬೇಕಾಗಿದೆ. ಎಲ್ಲವೂ ಸರ್ಕಾರದಿಂದ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಬೇಕು. ಹಾನಗಲ್ಲಿನ ಅಲೆಮಾರಿಗಳು ಐದಾರು ಕಡೆಗೆ ತಿರುಗಾಡಿಕೊಂಡು ಅಲೆದಾಟದಲ್ಲಿರುವಾಗಿ ಹಾನಗಲ್ಲ ಪುರಸಭೆ ಮೂಲಕ ಇಂಥದ್ದೊಂದು ವಸತಿ ಕಲ್ಪಿಸಲು ಸಾಧ್ಯವಾಗಿದೆ. ಈಗ ಅವರಿಗೆ ಉತ್ತಮ ಸೂರು ನೀಡುವ ಕೆಲಸ ಮಾಡಬೇಕು ಎಂದರು. ತಾಲೂಕು ತಹಶೀಲ್ದಾರ ಎಸ್.ರೇಣುಕಮ್ಮ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ, ನಂದಾದೀಪ ಚಾರಿಟೇಬಲ್ ಟ್ರಸ್ಟ ಆಧ್ಯಕ್ಷ ವೀರೇಂದ್ರ, ಹಾವೇರಿ ಜಿಲ್ಲಾ ಅಲೆಮಾರಿ ಸಮುದಾಯಗಳ ಅಧ್ಯಕ್ಷ ಶೆಟ್ಟಿ ವಿಭೂತಿ, ಪುರಸಭೆ ಅಧಿಕಾರಿ ಶಿವಾನಂದ ಕ್ಯಾಲಕೊಂಡು, ಅಲೆಮಾರಿ ರಾಜ್ಯಾಧ್ಯಕ್ಷ ವೀರೇಶ ವಿಭೂತಿ, ರೇಖಾ ಶೆಟ್ಟರ, ಸುಭಾಸ ಚಹ್ವಾಣ, ಸಂಗಯ್ಯಶಾಸ್ತ್ರಿ ಹಿರೇಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧು ಪಾಟೀಲ ಕಾರ್ಯಕ್ರಮ ನಿರೂಪಿಸಿದರು.