ಸಾರಾಂಶ
ಅಲೆಮಾರಿ ಸಮುದಾಯವನ್ನು ಕರ್ನಾಟಕ ರಾಜ್ಯ ಸರ್ಕಾರವೂ ಪ್ರವರ್ಗ ಎ ಗೆ ಸೇರಿಸಿ ನ್ಯಾಯ ಒದಗಿಸದೇ, ಪ್ರವರ್ಗ ಸಿ ಗೆ ಸೇರಿಸಿ, ಮರಣ ಶಾಸನ ಬರೆದಿದೆ. ಆದ್ದರಿಂದ ರಾಜ್ಯದ ೪೯ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಪ್ರವರ್ಗ ಎ ನಲ್ಲಿ ಶೇ.೧ ರಷ್ಟು ಮೀಸಲಾತಿ ನೀಡಬೇಕೆಂದು ರಾಜ್ಯದ್ಯಾಂತ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲ್ಲಿದ್ದೇವೆ ಎಂದು ಗೋಪನಹಳ್ಳಿ ಮಂಜು ತಿಳಿಸಿದರು. ನೂರಾರು ಜನರು ಭಾಗಿಯಾಗಿದ್ದ ಪ್ರತಿಭಟನಾ ಮೆರವಣಿಗೆ ಕೆಲ ಮಹಿಳೆಯರು ತಮ್ಮ ಕುಲಕಸುಬು ಶ್ರೀ ಮಾರಮ್ಮದೇವಿಯ ಅಡ್ಡೆಯನ್ನು ಹೊತ್ತಿದ್ದರು, ಕೆಲವು ಜನರು ತಮಟೆ ಬಾರಿಸುತ್ತಿದ್ದರು ಹಾಗೂ ಕೆಲ ಪುರುಷರು ಚಾವಟಿಯಿಂದ ಹೊಡೆದುಕೊಳ್ಳುತ್ತಾ ಅಸಹಾಯಕತೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಅಲೆಮಾರಿ ಸಮುದಾಯವನ್ನು ಕರ್ನಾಟಕ ರಾಜ್ಯ ಸರ್ಕಾರವೂ ಪ್ರವರ್ಗ ಎ ಗೆ ಸೇರಿಸಿ ನ್ಯಾಯ ಒದಗಿಸದೇ, ಪ್ರವರ್ಗ ಸಿ ಗೆ ಸೇರಿಸಿ, ಮರಣ ಶಾಸನ ಬರೆದಿದೆ. ಆದ್ದರಿಂದ ರಾಜ್ಯದ ೪೯ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಪ್ರವರ್ಗ ಎ ನಲ್ಲಿ ಶೇ.೧ ರಷ್ಟು ಮೀಸಲಾತಿ ನೀಡಬೇಕೆಂದು ರಾಜ್ಯದ್ಯಾಂತ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲ್ಲಿದ್ದೇವೆ ಎಂದು ಗೋಪನಹಳ್ಳಿ ಮಂಜು ತಿಳಿಸಿದರು.ಪಟ್ಟಣದ ತಾಪಂ ಕಚೇರಿ ಸಮೀಪದಿಂದ ತಾಲೂಕು ಕಚೇರಿ ತನಕ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ನಿರ್ದೇಶನದಂತೆ ತಾಲೂಕು ಘಟಕದ ಸದಸ್ಯರು ನಡೆಸಿದ ಪ್ರತಿಭಟನಾ ಮೆರವಣಿಗೆ ಭಾಗವಹಿಸಿ ಮಾತನಾಡಿದರು. ಭಾರತದ ಸರ್ವೋಚ್ಛ ನ್ಯಾಯಾಲಯವು ೨೦೨೪ ಆಗಸ್ಟ್ ೧ರಂದು ಮೀಸಲಾತಿಯ ಒಳವರ್ಗೀಕರಣದ ಕುರಿತು ಮಹತ್ವದ ತೀರ್ಪನ್ನು ನೀಡಿತ್ತು. ಕಳೆದ ೭೫ ವರ್ಷಗಳಲ್ಲಿ ಮೀಸಲಾತಿಯ ಮೂಲಕ ಸೂಕ್ತ ಪ್ರಾತಿನಿಧ್ಯ ಪಡೆಯದ ಅಲೆಮಾರಿ ಸಮುದಾಯಗಳಲ್ಲಿ ಈ ತೀರ್ಪು ಹೊಸ ಭರವಸೆಯನ್ನು ಮೂಡಿಸಿತ್ತು. ಸದರಿ ತೀರ್ಪನ್ನು ಆಧರಿಸಿ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರುವ ಸಲುವಾಗಿ ಕರ್ನಾಟಕದ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವನ್ನೂ ನೇಮಿಸಲಾಗಿತ್ತು. ಈ ಆಯೋಗವು ೪೯ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳ ಜೊತೆಗೆ ಇನ್ನೂ ಹತ್ತು ಸಮುದಾಯಗಳನ್ನು ಸೇರ್ಪಡೆ ಮಾಡಿ ಶೇ ೧% ರಷ್ಟು ಪ್ರಮಾಣದ ಮೀಸಲಾತಿಯನ್ನು ನಿಗದಿ ಮಾಡಿತ್ತು. ಆದರೆ ನ್ಯಾ. ನಾಗಮೋಹನದಾಸ್ ಆಯೋಗವೂ ಅಸ್ಪೃಶ್ಯ ಅಲೆಮಾರಿ ಜನಾಂಗವೂ ಅತಿ ಹಿಂದುಳಿದ ಜಾತಿ ಎಂದು ಪರಿಗಣಿಸಿ, ಪ್ರವರ್ಗ ಎ ನಲ್ಲಿ ಮೀಸಲಾತಿಗೆ ಮಾಡಿದ ಶಿಫಾರಸ್ಸು ಪರಿಗಣಿಸದೇ ಪ್ರವರ್ಗ ಸಿ ನಲ್ಲಿ ಮೀಸಲಾತಿ ನಿಗದಿ ಮಾಡಿದೆ. ಕರ್ನಾಟಕದ ಸರಕಾರದ ಈ ಆದೇಶವು ಸರ್ವೋಚ್ಚ ನ್ಯಾಯಾಲಯವು ೨೦೨೪ ಆಗಸ್ಟ್ ೧ ರಂದು ಮೀಸಲಾತಿಯ ಒಳವರ್ಗೀಕರಣದ ಕುರಿತು ನೀಡಿದ ಮಹತ್ವದ ತೀರ್ಪಿಗೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾಜವಾದಿ ಆಶಯಗಳನ್ನು ಸದಾ ಪ್ರತಿಪಾದಿಸುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲಾವಧಿಯಲ್ಲಿ ಅಲೆಮಾರಿಗಳಂತಹ ತಬ್ಬಲಿ ಸಮುದಾಯಗಳಿಗೆ ನ್ಯಾಯ ಸಿಗುವ ಭರವಸೆ ಇತ್ತು. ಆದರೆ ೨೦೨೫ ಆಗಸ್ಟ್ ೨೫ ರಂದು ಸರ್ಕಾರ ಹೊರಡಿಸಿದ ಆದೇಶವು ಈ ೪೯ ಅಲೆಮಾರಿ ಸಮುದಾಯಗಳನ್ನು ಶಾಶ್ವತವಾಗಿ ಮೂಲೆ ಗುಂಪಾಗಿಸಲಿದೆ ಎಂದು ಅಸಹಾಯಕತೆಯಿಂದ ನುಡಿದರು.ಅಲೆಮಾರಿ ಹಂದಿಜೋಗಿ ತಾಲೂಕು ಘಟಕದ ಪ್ರ. ಕಾರ್ಯದರ್ಶಿ ಬಲರಾಮ್, ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದ ಕಾರ್ಯದರ್ಶಿ ನಂದೀಶ್ ವೈ.ಆರ್. ಮಾತನಾಡಿದರು. ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಅವರಿಗೆ ಬರೆದಿದ್ದ ಮನವಿ ಪತ್ರವನ್ನು ಉಪತಹಸೀಲ್ದಾರ್‌ಶಿವಕುಮಾರ್ ಎಚ್.ಎಂ. ಅವರಿಗೆ ಸಲ್ಲಿಸಿದರು.ನೂರಾರು ಜನರು ಭಾಗಿಯಾಗಿದ್ದ ಪ್ರತಿಭಟನಾ ಮೆರವಣಿಗೆ ಕೆಲ ಮಹಿಳೆಯರು ತಮ್ಮ ಕುಲಕಸುಬು ಶ್ರೀ ಮಾರಮ್ಮದೇವಿಯ ಅಡ್ಡೆಯನ್ನು ಹೊತ್ತಿದ್ದರು, ಕೆಲವು ಜನರು ತಮಟೆ ಬಾರಿಸುತ್ತಿದ್ದರು ಹಾಗೂ ಕೆಲ ಪುರುಷರು ಚಾವಟಿಯಿಂದ ಹೊಡೆದುಕೊಳ್ಳುತ್ತಾ ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸೋಮಶೇಖರ್, ರಾಮಚಂದ್ರು, ಶಿವರಾಜಕುಮಾರ, ಲಕ್ಷ್ಮಣ, ರಾಮು, ಯಲ್ಲಪ್ಪ, ಮಲ್ಲರಾಜು, ಮಂಜು, ಗಂಗಣ್ಣ, ರಾಮಣ್ಣ, ಭೀಮಣ್ಣ, ಶಿವಣ್ಣ, ಇತರರು ಇದ್ದರು.