ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ಅ.10ರಂದು ನಾನು ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡಿಕೊಂಡು ನಾಮಪತ್ರ ಸಲ್ಲಿಸಲಿದ್ದೇವೆ ಎಂದು ಶಾಸಕ ರಾಜು ಕಾಗೆ ಹೇಳಿದರು.ಮತಕ್ಷೇತ್ರ ವ್ಯಾಪ್ತಿಯ ಅರಳಿಹಟ್ಟಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಸ್ವಾಸ್ಥ್ಯ ಕೇಂದ್ರದ ನಿರ್ಮಾಣ ಹಾಗೂ ಸಂಬರಗಿ ಗ್ರಾಮದಲ್ಲಿ ವಿಠ್ಠಲ ರುಕ್ಮೀಣಿ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ನಾನು ಯಾವುದೇ ಬಣ ಹಾಗೂ ವ್ಯಕ್ತಿಗತ ರಾಜಕಾರಣದಲ್ಲಿ ಭಾಗಿಯಾಗಿಲ್ಲ. ನನ್ನದು ಸರಳ ರಾಜಕಾರಣ, ನಾನು ಯಾರ ಪರವಾಗಿಯೂ ಇಲ್ಲ, ಯಾರ ವಿರುದ್ಧವೂ ಇಲ್ಲ, ನಾನು ಲಕ್ಷ್ಮಣ ಸವದಿ ಕೂಡಿಕೊಂಡು ನಾಮಪತ್ರ ಸಲ್ಲಿಸಲಿದ್ದೇವೆ ಎಂದರು.
ವೀಕ್ಷಣೆಗೆ ಬಂದು ಚಹಾ, ಚೋಡಾ ತಿಂದು ಹೋಗಬೇಕಾ?ಇತ್ತೀಚಿಗೆ ರಾಜ್ಯ ವಿರೋಧ ಪಕ್ಷದ ನಾಯಕರ ನಿಯೋಗವೊಂದು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ರಾಜು ಕಾಗೆ, ವಿರೋಧ ಪಕ್ಷದರು ಬಂದು ನಮ್ಮನ್ನು ಹೊಗಳಿ ಚಹಾ, ಚೋಡಾ ತಿಂದು ಹೋಗಲು ಬಂದಿಲ್ಲ. ನಮ್ಮನ್ನು ಟೀಕಿಸುವುದೇ ಅವರ ಕೆಲಸ. ಬಂದಿದ್ದಾರೆ ಏನಾದರು ಒಂದು ಹೇಳಿಕೆ ನೀಡಲೇಬೇಕು, ನೀಡಿದ್ದಾರೆ. ಆದರೆ ನಾವೇನು ಕೈ ಕಟ್ಟಿ ಕುಳಿತಿಲ್ಲ, ನಮ್ಮ ರಾಜ್ಯವಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿಯೂ ಅತಿವೃಷ್ಟಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ. ಸರ್ವೇ ಕಾರ್ಯ ಮುಗಿದ ನಂತರ ಶೀಘ್ರ ಪರಿಹಾರ ವಿತರಿಸಲಾಗುವುದೆಂದು ಸಿಎಂ ಹೇಳಿದ್ದಾರೆ. ನಾನು ಕೂಡ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ರೈತರಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದರು.ಉತ್ತರ ಕರ್ನಾಟಕಕ್ಕೂ ಹೆಚ್ಚಿನ ಅನುದಾನ ನೀಡಲಿ:
ರಾಜು ಕಾಗೆಯವರಿಂದ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಎಂಬ ಮಾದ್ಯಮದವರ ಹೇಳಿಕೆಗೆ ಸ್ಪಷ್ಟನೆ ನೀಡಿದ ಕಾಗೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹500 ಕೋಟಿ ಅನುದಾನ ನೀಡಿದ್ದೀರಿ. ಅದೇ ಮಾದರಿಯಲ್ಲಿ ಉತ್ತರ ಕರ್ನಾಟಕಕ್ಕೂ ಹೆಚ್ಚಿನ ಅನುದಾನ ನೀಡಿ ಈ ಭಾಗವನ್ನು ಅಭಿವೃದ್ಧಿಗೊಳಿಸಬೇಕೆಂದು ನಾನು ಮೊನ್ನೆ ಹೇಳಿಕೆ ನೀಡಿದೆ. ಅದನ್ನು ಈ ರೀತಿ ಬಿಂಬಿಸಿಲಾಗಿದೆ. ಕಲ್ಯಾಣ ಕರ್ನಾಟಕದ ಹಾಗೆ ಉತ್ತರ ಕರ್ನಾಟಕಕ್ಕೂ ಹೆಚ್ಚಿನ ಅನುದಾನ ನೀಡಬೇಕೇಂಬುದೇ ನನ್ನ ಬಯಕೆಯಾಗಿದೆ ಎಂದರು.ಈ ವೇಳೆ ಅರಳಿಹಟ್ಟಿ ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ(ಬಮ್ನಾಳ) ಮಾಜಿ ಅಧ್ಯಕ್ಷ ಕಾಮಗೌಡ ಪಾಟೀಲ, ಸದಾಶಿವ ಪಾಟೀಲ, ಪರಶುರಾಮ ನಾಯಿಕ, ಕೇದಾರಿ ನಾಗರಾಳೆ, ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಜಿಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ವಾಲಿ, ಮಲ್ಲಿಕಾರ್ಜುನ ದಳವಾಯಿ, ಅಣ್ಣಸಾಬ್ ಮಿಸಾಳ, ವಿಲಾಸ ಟೋಣೆ, ತುಕಾರಾಮ ಸೇಳಕೆ, ವಿಠ್ಠಲ ಗಸ್ತಿ ಸೇರಿದಂತೆ ಅನೇಕರು ಇದ್ದರು.