ಮೊದಲ ದಿನವೇ ಕಾಂಗ್ರೆಸ್‌, ಬಿಜೆಪಿ ಹುರಿಯಾಳುಗಳಿಂದ ನಾಮಪತ್ರ ಸಲ್ಲಿಕೆ

| Published : Apr 13 2024, 01:00 AM IST

ಮೊದಲ ದಿನವೇ ಕಾಂಗ್ರೆಸ್‌, ಬಿಜೆಪಿ ಹುರಿಯಾಳುಗಳಿಂದ ನಾಮಪತ್ರ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಮನಿ ನಾಮಪತ್ರ ಸಲ್ಲಿಕೆ. ಪುನರಾಯ್ಕೆ ಬಯಸಿ ಬಿಜೆಪಿಯಿಂದ ಡಾ. ಉಮೇಶ ಜಾಧವ್‌ ಉಮೇದುವಾರಿಕೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಲೋಕಸಭಾ ಮೀಸಲು ಮತಕ್ಷೇತ್ರಕ್ಕೆ ಮೇ 7 ರಂದು ನಡೆಯುವ ಸಾರ್ವತ್ರಿಕ ಚುನಾವಣೆಗೆ ಹುರಿಯಾಳಾಗಿ ಶುಕ್ರವಾರ ಕಾಂಗ್ರೆಸ್‌ನಿಂದ ರಾಧಾಕೃಷ್ಣ ದೊಡ್ಮನಿ, ಬಿಜೆಪಿಯಿಂದ ಡಾ. ಉಮೇಶ ಜಾಧವ್‌ ನಾಮಪತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಸಲ್ಲಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಶಾಸಕರಾದ ಕನೀಜ್‌ ಫಾತೀಮಾ, ಎಂ.ವೈ. ಪಾಟೀಲ್‌, ಮಾಜಿ ಶಾಸಕ ಬಾಬೂರಾವ್‌ ಚಿಂಚನ್ಸೂರ್‌ ಅವರೊಂದಿಗೆ ಶುಕ್ರವಾರ ಬೆಳಗ್ಗೆ 11ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ರಾಧಾಕೃಷ್ಣ ನಾಮಪತ್ರಗಳನ್ನು 2 ಸೆಟ್ಟುಗಳಲ್ಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್‌, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌, ಶಾಸಕರಾದ ತಿಪ್ಪಣ್ಣ ಕಮಕನೂರ್‌ ಸೇರಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌ ಹಾಗೂ ಪಕ್ಷದ ವಿವಿಧ ಘಟಕಗಳ ಮುಂಚೂಣಿಯಲ್ಲಿರುವ ಪ್ರಮುಖರೆಲ್ಲರೂ ಉಪಸ್ಥಿತರಿದ್ದರು.

ಇದಾದ ನಂತರ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌, ಲಕ್ಷ್ಮಣ ಸವದಿ ಸೇರಿ ಪ್ರಮುಖರು ಪಾಲ್ಗೊಂಡಿದ್ದ ಸಮಾವೇಶವನ್ನು ಕಾಂಗ್ರೆಸ್‌ ಪಕ್ಷ ಕಲಬುರಗಿ ಎನ್‌.ವಿ. ಮೈದಾನದಲ್ಲಿ ಆಯೋಜಿಸಿ ರಣಕಹಳೆ ಮೊಳಗಿಸಿತು.ಬಿಜೆಪಿಯಿಂದ ಜಾಧವ್‌ ನಾಮಪತ್ರ ಸಲ್ಲಿಕೆ

ಬಿಜೆಪಿಯಿಂದ ಪುನರಾಯಕೆ ಬಯಸಿ ಡಾ. ಉಮೇಶ ಜಾಧವ್‌ ಅವರು ಶುಕ್ರವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ಶೋಭಾ ಬಾಣಿ, ಲಿಂಗರಾಜ ಬಿರಾದಾರ್‌ ಹಾಗೂ ಬಿಜೆಪಿಯ ಪ್ರಮುಖರು ಹಾಜರಿದ್ದರು.

ನಾಮಪತ್ರ ಸಲ್ಲಿಕೆ ನಂತರ ಡಾ. ಉಮೇಶ ಜಾಧವ್‌ ಹಾಗೂ ಪಕ್ಷದ ಪ್ರಮುಖರೆಲ್ಲರೂ ಚಿತ್ತಾಪುರದಲ್ಲಿ ಸೇಡಂ, ಚಿತ್ತಾಪುರ, ಶಹಾಬಾದ್‌ ವಾಡಿ ಶಕ್ತಿ ಕೇಂದ್ರಗಳ ಪ್ರಮುಖರ ಸಭೆ ನಡೆಸಿದರು. ರಾಜ್ಯ ಚುನಾವಣಾ ಉಸ್ತುವಾರಿ ಅಗರವಾಲ್‌ ಸೇರಿ ಮಾಜಿ, ಹಾಲಿ ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಂಡು ಚುನಾವಣೆ ಕಹಳೆ ಇಲ್ಲಿ ಮೊಳಗಿಸಿದರು.

ಇನ್ನು ಕಲಬುರಗಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಬಯಸಿ ತಾರಾಬಾಯಿ ವಿಶ್ವೇಶ್ವರಯ್ಯ ಬೋವಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಜಿಲ್ಲೆಯಲ್ಲಿ ನಾಮ ಪತ್ರ ಸಲ್ಲಿಕೆ ಮೊದಲ ದಿನವೇ ಒಟ್ಟು ಮೂವರು ಹುರಿಯಾಲುಗಳು ನಾಮಪತ್ರ ಸಲ್ಲಿಸಿದ್ದಾರೆ.