ಬಸವರಾಜ ಹಿರೇಮಠ
ಧಾರವಾಡ: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತಿರುವ ಪರೀಕ್ಷೆಗೆ ಕೃಷಿಯೇತರ ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ರಾಜ್ಯ ಸರ್ಕಾರ ಹಾಗೂ ಕೃಷಿ ಪದವೀಧರರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.ಕೃಷಿ ಇಲಾಖೆಯಲ್ಲಿನ 945 ಗ್ರೂಪ್-ಬಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ನೇಮಕಾತಿಯ ಪರೀಕ್ಷೆಯನ್ನು ಆಗಸ್ಟ್ ತಿಂಗಳಲ್ಲಿ ನಡೆಸಲು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಆದರೆ, ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ''ಬಿಇ ಬಯೋಟೆಕ್ನಾಲಜಿ'' ಪದವೀಧರರನ್ನು ಸೇರಿಸಿರುವುದು ಕೃಷಿ ಪದವೀಧರರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಸ್ಪಂದನೆ ಇಲ್ಲಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಧಾರವಾಡದ ಕೃಷಿ ವಿವಿಯಲ್ಲಿ ಕಳೆದ ಹಲವು ದಿನಗಳಿಂದ ಪದವೀಧರರು ಹಾಗೂ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ಸಹ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಈ ವಿಷಯದಲ್ಲಿ ಈ ವರೆಗೂ ಸ್ಪಂದನೆ ನೀಡಿಲ್ಲ. ಈ ತಾಂತ್ರಿಕ ಹುದ್ದೆಗಳು ಕೇವಲ ಕೃಷಿ ಪದವೀಧರರಿಗೆ ಮಾತ್ರ ಮೀಸಲಾಗಿರಬೇಕು. ರಾಜ್ಯ ಸರ್ಕಾರ ಪ್ರಸ್ತುತ ನೇಮಕಾತಿ ಅಧಿಸೂಚನೆ ಹಿಂಪಡೆದು, ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಪ್ರತಿಪಾದಿಸಿರುವ ಕೃಷಿ ಪದವೀಧರ ವಿದ್ಯಾರ್ಥಿಗಳ ಸಂಘದ ಮುಖಂಡರಾದ ಚಿರದೀಪ್, ಹರ್ಷಿತಾ ಲಾಲ್, ರಾಹುಲ್ ನಾಯಕ್, ಕೃಷಿ ಇಲಾಖೆ, ಪರೀಕ್ಷಾ ಪ್ರಾಧಿಕಾರ ಮತ್ತು ಕೃಷಿ ಆಯುಕ್ತರಿಗೆ ಈ ಕುರಿತಾಗಿ ಮನವಿ ಸಲ್ಲಿಸುತ್ತಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅರ್ಹತೆ ಮೇಲೆ ನೀಡಿ
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮಾನ್ಯತೆ ಪಡೆದ ಸಂಸ್ಥೆಗಳಿಂದ ಕೃಷಿ ಮತ್ತು ಕೃಷಿ-ಸಂಬಂಧಿತ ಪದವಿಗಳನ್ನು ಪಡೆದವರಿಗೆ ಕೃಷಿ ಇಲಾಖೆಯ ಎಲ್ಲ ತಾಂತ್ರಿಕ ಹುದ್ದೆಗಳಿಗೆ ಅರ್ಹತೆ ಸೀಮಿತಗೊಳಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಉದ್ಯೋಗಗಳು ವಿರಳವಾಗಿವೆ. ಪ್ರತಿಷ್ಠಿತ ಕೃಷಿ ಸಂಸ್ಥೆಗಳ ಅನೇಕ ಪದವೀಧರರು ಕಡಿಮೆ ವೇತನ ಮತ್ತು ಕಡಿಮೆ ಉದ್ಯೋಗ ಭದ್ರತೆಯಿರುವ ಖಾಸಗಿ ವಲಯದ ಉದ್ಯೋಗಗಳನ್ನು ಅನಿವಾರ್ಯವಾಗಿ ಪಡೆಯುತ್ತಿದ್ದಾರೆ. ಇದೀಗ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ದೀರ್ಘಕಾಲದ ನಂತರ ಸರ್ಕಾರ ಭರ್ತಿ ಮಾಡುತ್ತಿರುವುದು ಒಂದೆಡೆ ಸಮಾಧಾನ ತಂದರೆ, ಕೃಷಿಯೇತರ ಪದವೀಧರರಿಗೂ ಅವಕಾಶ ನೀಡಿದ್ದು ತೀವ್ರ ಆತಂಕ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹುದ್ದೆಗಳಿಗೆ ಅಗತ್ಯವಿರುವ ಕ್ಷೇತ್ರ-ಮಟ್ಟದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುವಂತೆಯೇ ನಾಲ್ಕು ವರ್ಷಗಳ ಪಠ್ಯಕ್ರಮವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ, ಬಿಇ ಬಯೋಟೆಕ್ನಾಲಜಿ ಪದವೀಧರರಿಗೆ ಈ ಹುದ್ದೆಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಅವೈಜ್ಞಾನಿಕ ಎಂದು ಚಿರದೀಪ್ ಮತ್ತು ರಾಹುಲ್ ಪ್ರತಿಪಾದಿಸಿದರು.ಸರ್ಕಾರದ ನಿರ್ಧಾರ ಅವೈಜ್ಞಾನಿಕ ಎಂದ ಕೃಷಿ ವಿವಿ ವಿಶ್ರಾಂತ ಕುಲಪತಿಯೊಬ್ಬರು, ಕೃಷಿಯಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳ ಶೈಕ್ಷಣಿಕ ತರಬೇತಿಯು ರೈತರ ಅಗತ್ಯಗಳು ಮತ್ತು ಕ್ಷೇತ್ರ-ಮಟ್ಟದ ಕೃಷಿ ಸವಾಲುಗಳಿಗೆ ಪೂರಕವಾಗಿವೆ. ಬಯೋಟೆಕ್ನಾಲಜಿ ಶಿಕ್ಷಣ ಹೆಚ್ಚಾಗಿ ಪ್ರಯೋಗಾಲಯ-ಆಧಾರಿತವಾಗಿದೆ ಮತ್ತು ರೈತರು ಎದುರಿಸುವ ಪ್ರಾಯೋಗಿಕ ಸಮಸ್ಯೆಗಳನ್ನು ಗುರುತಿಸಲು ಅಥವಾ ಪರಿಹರಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಕೃಷಿಯೇತರರಿಗೆ ಈ ಹುದ್ದೆಗಳು ಬೇಡ ಎಂದರು.
ಕೃಷಿಯು ಮಣ್ಣು ವಿಜ್ಞಾನ, ನೀರು ನಿರ್ವಹಣೆ, ಬೆಳೆ ಪೋಷಣೆ, ರಸಗೊಬ್ಬರ ನಿರ್ವಹಣೆ, ಸಸ್ಯ ತಳಿ ಅಭಿವೃದ್ಧಿ, ಕೀಟ ನಿರ್ವಹಣೆ ಮತ್ತು ಇತರ ಹಲವಾರು ವಿಷಯಗಳನ್ನು ಒಳಗೊಂಡಿರುವ ಬಹು-ಶಿಸ್ತಿನ ಕ್ಷೇತ್ರ. ಜೊತೆಗೆ ಕ್ಷೇತ್ರ-ಮಟ್ಟದ ವಿಸ್ತರಣಾ ಕಾರ್ಯಗಳಿಗೆ ಅಗತ್ಯ ಕೌಶಲ್ಯಗಳೊಂದಿಗೆ ಕೃಷಿ ಪದವೀಧರರು ಸಜ್ಜಾಗಿರುತ್ತಾರೆ. ಸರ್ಕಾರವು ಬಯೋಟೆಕ್ನಾಲಜಿ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಬಯಸಿದರೆ, ಪ್ರತ್ಯೇಕ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಕೃಷಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ರಾಜೇಂದ್ರ ಪೋದ್ದಾರ ಸರ್ಕಾರಕ್ಕೆ ಸಲಹೆ ನೀಡಿದರು.ಕೃಷಿ ಇಲಾಖೆಯಲ್ಲಿನ 945 ಗ್ರೂಪ್-ಬಿ ಹುದ್ದೆಗಳ ನೇಮಕಾತಿಯಲ್ಲಿ ಕೃಷಿಯೇತರರಿಗೂ ಅವಕಾಶ ನೀಡಿರುವ ಕುರಿತು ಕೃಷಿ ವಿವಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ವಿಷಯವನ್ನು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರವೇ ನಿರ್ಧಾರ ಪ್ರಕಟಿಸಬೇಕು ಎಂದು ಕೃಷಿ ವಿವಿ ಕುಲಪತಿ ಡಾ. ಎನ್.ಬಿ. ಪ್ರಕಾಶ ಆಗ್ರಹಿಸಿದ್ದಾರೆ.