ಬಾರದ ಸರ್ಕಾರಿ ಬಸ್ಸುಗಳು, ಪ್ರಯಾಣಿಕರ ನರಕಯಾತನೆ!

| Published : Oct 17 2024, 12:59 AM IST

ಸಾರಾಂಶ

ಡಿಪೋಗಳಲ್ಲಿರುವ ಬಸ್ಸುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ನಿಗದಿತ ಸ್ಥಳ ತಲುಪುವ ಮಾರ್ಗ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರು ಮತ್ತೊಂದು ಬಸ್ ಹಿಡಿದು ಪ್ರಯಾಣ ಮಾಡುವಷ್ಟರಲ್ಲಿ ನರಕಯಾತನೆ ಅನುಭವಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ಸುಗಳು ಬಾರದೇ ಇರುವುದರಿಂದ ಪ್ರಯಾಣಿಕರು ಗಂಟೆಗಟ್ಟಲೇ ಕಾದು ಹೈರಾಣು ಆಗುತ್ತಿದ್ದಾರೆ.

ನಗರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು. ಗೌರಿಬಿದನೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಶಾಲಾ- ಕಾಲೇಜುಗಳಿಗೆ ಹೊರಡಬೇಕಾದ ವಿದ್ಯಾರ್ಥಿಗಳು ಮತ್ತು ಕರ್ತವ್ಯದ ನಿಮಿತ್ತ ಹೋಗಬೇಕಾದ ಸಾರ್ವಜನಿಕರು ಮಳೆಯ ನಡುವೆಯೂ ಬಸ್ಸುಗಳಿಗಾಗಿ ಕಾದು- ಕಾದು ಸುಸ್ತಾಗುತ್ತಿದ್ದಾರೆ.

ಡಿಪೋಗಳಲ್ಲಿರುವ ಬಸ್ಸುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ನಿಗದಿತ ಸ್ಥಳ ತಲುಪುವ ಮಾರ್ಗ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರು ಮತ್ತೊಂದು ಬಸ್ ಹಿಡಿದು ಪ್ರಯಾಣ ಮಾಡುವಷ್ಟರಲ್ಲಿ ನರಕಯಾತನೆ ಅನುಭವಿಸಬೇಕಾಗುತ್ತದೆ.

ಪ್ರತಿನಿತ್ಯ ವಿದ್ಯಾರ್ಥಿಗಳ ಪರದಾಟ:

ತಾಲೂಕಿನಲ್ಲಿ ವಿವಿಧ ಭಾಗಗಳಿಂದ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರಕ್ಕೆ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಅನುಸೂಚಿತ ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳು ನಿಗದಿತ ಪ್ರಯಾಣಿಕರ ಸಂಖ್ಯೆಗಿಂತಲೂ ಹೆಚ್ಚಿನದಾಗಿ ತುಂಬಿಕೊಂಡು ಹೋಗುತ್ತವೆ. ಇದರಿಂದ ವಿದ್ಯಾರ್ಥಿಗಳು ಪ್ರಯಾಣಕ್ಕೆ ಪ್ರಯಾಸ ಪಡಬೇಕಾಗಿದೆ. ಕೊರಟಗೆರೆ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಸರಕಾರಿ ಬಸ್ಸುಗಳಲ್ಲಿ ಸದಾ ಜನಜಂಗುಳಿ ಇರುತ್ತದೆ. ಈ ಮಾರ್ಗದ ಬಸ್ಸುಗಳಲ್ಲಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಹೆಚ್ಚುಸಂಚಾರ ಮಾಡುತ್ತಾರೆ. ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಜನಪ್ರತಿನಿಧಿಗಳಿಗೆ, ನಿಗಮದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲವೆಂದು ಗೌರಿಬಿದನೂರು ಎಬಿವಿಪಿ ತಾಲೂಕು ಸಂಘಟನಾ ಕಾರ್ಯದರ್ಶಿ ಮಾರುತಿ ತಿಳಿಸಿದರು.

ವಿದ್ಯಾರ್ಥಿಗಳಿಂದ ಬಸ್ಸು ತಡೆದು ಪ್ರತಿಭಟನೆ:

ಅ.15ರ ಬೆಳಗ್ಗೆ 8-30 ಗಂಟೆ ಸಮಯದಲ್ಲಿ ತಾಲೂಕಿನ ತೊಂಡೇಭಾವಿ ಹೋಬಳಿ, ತಿಪ್ಪಗಾನಹಳ್ಳಿಯಲ್ಲಿ ಬಸ್ ಖಾಲಿ ಇದ್ದರೂ ನಿಲ್ಲಿಸಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ- ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿ, ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಈ ಸಮಸ್ಯೆ ಬಗ್ಗೆ ಗೌರಿಬಿದನೂರು ಕೆಎಸ್ಆರ್ ಟಿಸಿ ಘಟಕದ ವ್ಯವಸ್ಥಾಪಕ ರವಿಶಂಕರ್ ಮಾತನಾಡಿ, ಗೌರಿಬಿದನೂರು ವಿಭಾಗದಲ್ಲಿರುವ ಬಸ್ಸುಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸೇವೆ ಒದಗಿಸಲಾಗುತ್ತಿದೆ. ವಿಭಾಗಕ್ಕೆ ಇನ್ನೂ ಹೆಚ್ಚುವರಿಯಾಗಿ 30 ಬಸ್ಸುಗಳನ್ನು ನೀಡಿದಲ್ಲಿ ಗ್ರಾಮೀಣ ಭಾಗಕ್ಕೂ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಚಾಲಕ, ನಿರ್ವಾಹಕರ ನೇಮಕಾತಿ ನಡೆಯಬೇಕಿದೆ. ಹಂತ- ಹಂತವಾಗಿ ಗ್ರಾಮೀಣ ಭಾಗದಲ್ಲಿರುವ ಬಸ್ ಸಂಚಾರ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.