ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮನರೇಗಾ ನೌಕರರಿಗೆ ಕಳೆದ ಆರು ತಿಂಗಳಿಂದ ಸಂಬಳ ಪಾವತಿಯಾಗದಿರುವುದರಿಂದ ಅವರೆಲ್ಲರೂ ಕರ್ತವ್ಯದಿಂದ ದೂರ ಉಳಿದು ಅಸಹಕಾರ ಚಳವಳಿ ನಡೆಸುತ್ತಿದ್ದಾರೆ. ಅವರ ಹೋರಾಟ ಎಂಟನೇ ದಿನಕ್ಕೆ ಕಾಲಿಟ್ಟಿದೆ.ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜ್ಯ ಬೇರ್ ಫೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘ ಕರೆಯ ಮೇರೆಗೆ ನಗರದ ತಾಲೂಕು ಕಚೇರಿ ಎದುರು ಕೆಲವು ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ, ಉಳಿದ ನೌಕರರು ಕಚೇರಿಯಲ್ಲಿ ಹಾಜರಿದ್ದರೂ ಯಾವುದೇ ಕರ್ತವ್ಯವನ್ನು ನಿರ್ವಹಿಸದೆ ಆಡಳಿತಕ್ಕೆ ಅಸಹಕಾರ ತೋರುತ್ತಿದ್ದಾರೆ.
ಜಿಲ್ಲೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಮನರೇಗಾ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ. ಒಬ್ಬೊಬ್ಬ ನೌಕರರಿಗೆ ಸುಮಾರು ೨ ಲಕ್ಷ ರು.ಗೂ ಹೆಚ್ಚು ಬಾಕಿ ವೇತನ ಉಳಿಸಿಕೊಂಡಿದೆ. ಕೂಡಲೇ ಆರು ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿದ್ದಾರೆ.ಈಗಾಗಲೇ ಮನರೇಗಾ ನೌಕರರು ಜಿಪಂ ಸಿಇಒ ಮತ್ತು ಆಯುಕ್ತಾಲಯಕ್ಕೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಆರು ತಿಂಗಳಿಂದ ಸಂಬಳವಿಲ್ಲದೆ ನೌಕರರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚ, ಪ್ರಯಾಣವೆಚ್ಚ, ಸಾಲಗಳ ಮರುಪಾವತಿ, ಇಎಂಐ ಸೇರಿದಂತೆ ಅನೇಕ ಖರ್ಚುಗಳನ್ನು ನಿಭಾಯಿಸಲು ತೊಂದರೆ ಉಂಟಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.ಸಕಾಲದಲ್ಲಿ ವೇತನ ಪಾವತಿಯಾಗದಿರುವುದರಿಂದ ಸ್ನೇಹಿತರು, ಸಂಬಂಧಿಕಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಲೇವಾದೇವಿಗಾರರಿಂದ ಅನಿವಾರ್ಯವಾಗಿ ಸಾಲ ಮಾಡಿ ಕುಟುಂಬ ನಿರ್ವಹಿಸುವ ದಿನನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಪರಿಸ್ಥಿತಿಯು ನೌಕರ ವರ್ಗದವರನ್ನು ಮುಜುಗರಕ್ಕೆ ತಳ್ಳುತ್ತಿದೆ. ಪ್ರತಿಯೊಬ್ಬ ನೌಕರರು ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾರೆ. ವೇತನ ಪಾವತಿಯಾಗದಿದ್ದರೆ ನೌಕರರ ಆರ್ಥಿಕ ಪರಿಸ್ಥಿತಿ, ಮನೋಬಲ, ಆತ್ಮಸ್ಥೈರ್ಯ ಮತ್ತಷ್ಟು ಕುಸಿಯಲಿದೆ ಎಂದರು.
ಬಾಕಿ ವೇತನ ಪಾವತಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿದೆ. ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ. ಆದರೆ, ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರಿಯದೆ ಇರುವುದರಿಂದ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ವೇತನ ಪಾವತಿಯಾಗುವವರೆಗೂ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಎಲ್.ರವಿಕುಮಾರ್, ಮೋಹನ್‌ಗೌಡ, ಕಿರಣ್‌ಕುಮಾರ್, ಆಶಾ, ಜಗದೀಶ್, ಸಂಧ್ಯಾ, ಚೇತನ್ ಇತರರಿದ್ದರು.