ಸಾರಾಂಶ
ಕರವೇ ಕಾರ್ಯಕರ್ತರ ಬದಲು ಪೌರ ಕಾರ್ಮಿಕರೇ ನಾಮಫಲಕಗಳನ್ನು ಹರಿದು ಆಕ್ರೋಶ । ಬಿಗಿ ಪೊಲೀಸ್ ಬಂದೋಬಸ್ತ್
ಕನ್ನಡಪ್ರಭ ವಾರ್ತೆ ಹಾಸನನಾಮಫಲಕದಲ್ಲಿ ಶೇ.೬೦ ರಷ್ಟು ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮವಿದ್ದರೂ ಅದನ್ನು ಪಾಲಿಸದೇ ಇಂಗ್ಲೀಷ್ ಬಳಕೆ ಮಾಡಿದ್ದ ಬ್ಯಾನರ್, ಕಟೌಟ್, ಅಂಗಡಿ ಮುಂದಿನ ನಾಮಫಲಕವನ್ನು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಮಂಗಳವಾರ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ನಗರಸಭೆಯ ಸಹಕಾರದಲ್ಲಿ ಹರಿದು ಮಸಿ ಬಳಿಯುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಮೊದಲು ನಗರದ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪ್ರತಿಭಟನೆಗೆ ಮೊದಲು ನಗರಸಭೆ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಆಂಗ್ಲ ಪದಗಳಿರುವ ಕಟೌಟ್ ಮತ್ತು ಬ್ಯಾನರ್‌ಗಳ ತೆರವು ಮಾಡುವುದಾಗಿ ಹೇಳಿದರು.ಮೊದಲು ಘೋಷಣೆ ಕೂಗಿದ ಕರವೇ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಆವರಣದಲ್ಲಿ ಮುಖ್ಯ ರಸ್ತೆಗೆ ಕಾಣುವಂತೆ ಇದ್ದ ಬೃಹತ್ ಬ್ಯಾನರ್ ಅನ್ನು ನಗರಸಭೆಯ ಸಿಬ್ಬಂದಿ ಜೊತೆ ತೆರವು ಮಾಡಿದರು. ನಂತರ ಬಿ.ಎಂ. ರಸ್ತೆ ಮೂಲಕ ಬಂದು ಟ್ರೆಂಡ್ಸ್ ಎದುರು ಇದ್ದ ಅನೇಕ ಆಂಗ್ಲ ಕಟೌಟ್‌ಗಳನ್ನು ಹರಿದು ಹಾಕಲಾಯಿತು. ಈ ದೃಶ್ಯವನ್ನು ನೋಡಿದ ಇತರೆ ಅಂಗಡಿ ಮಾಲೀಕರು, ಶೋರೂಂ ಮಾಲೀಕರು ಆಂಗ್ಲ ಪದಗಳಿರುವ ಬೋರ್ಡ್‌ಗಳನ್ನು ಬಟ್ಟೆಯಿಂದ ಮುಚ್ಚಿಡುತ್ತಿರುವುದು ಕಂಡು ಬಂದಿತು. ಕೆಲವರು ಅಡ್ಡಿಪಡಿಸಿದಾಗ ವಾಗ್ವಾದ ಕೂಡ ನಡೆಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ‘ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎಂಬ ಹಕ್ಕೊತ್ತಾಯವನ್ನು ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ನಿರ್ಣಾಯಕ ಚಳವಳಿ ಕೈಗೊಂಡಿದ್ದು, ಕಳೆದ ವರ್ಷ ಡಿಸೆಂಬರ್ ೨೭ ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇತಿಹಾಸವನ್ನೇ ಸೃಷ್ಟಿಸಿತು. ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೇತರ ನಾಮಫಲಕಗಳು ಧರೆಗುರುಳಿದವು. ನಮ್ಮ ಚಳವಳಿಗೆ ರಾಜ್ಯದ ಜನತೆ ತುಂಬು ಮನಸಿನಿಂದ ಬೆಂಬಲಿಸಿತು. ಕನ್ನಡ ನಾಮಫಲಕ ಬೇಕು ಎಂದು ದಶಕಗಳಿಂದ ಹಂಬಲಿಸುತ್ತಿದ್ದ ಮನಸುಗಳಿಗೆ ಸಮಾಧಾನ ತಂದ ಬಹುದೊಡ್ಡ ಹೋರಾಟವಾಗಿದೆ’ ಎಂದು ಹೇಳಿದರು.‘ನಮ್ಮ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡಿತು. ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿರುವುದರಿಂದ ಅದು ಕಾನೂನಾಗಿ ಕೂಡ ಜಾರಿಯಾಗಿದೆ. ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿದ್ದೇ ಆಯಾ ಭಾಗದ ನುಡಿಪರಂಪರೆಯನ್ನು ರಕ್ಷಿಸಲು, ಗೌರವಿಸಲು. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗೌರವ. ಇದನ್ನು ಹೇಗೆ ಸಹಿಸುವುದು, ನಾವು ಹಿಂದಿ ರಾಜ್ಯಗಳಲ್ಲಿ ಕನ್ನಡ ನಾಮಫಲಕ ಕೇಳುತ್ತಿದ್ದೇವೆಯೇ? ನಮ್ಮ ನಾಡಿನಲ್ಲೇ ನಮ್ಮ ನುಡಿ ಸೊರಗಬೇಕೇ? ಹೀಗಾಗಿ ಕನ್ನಡದಲ್ಲಿ ನಾಮಫಲಕ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಇಡೀ ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಜಾಹೀರಾತು ಫಲಕಗಳು ಕೂಡ ಕನ್ನಡದಲ್ಲಿರಬೇಕು. ಇದನ್ನು ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಪಾಲಿಸುವುದು ಕಡ್ಡಾಯವಾಗಿದೆ’ ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಜಾಗೃತಿ ಮೆರವಣಿಗೆಯನ್ನು ನಡೆಸುತ್ತಿದ್ದು, ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಸರ್ಕಾರದ ನಿಯಮಾವಳಿ ಪ್ರಕಾರ ನಾಮಫಲಕಗಳನ್ನು ಬದಲಿಸಬೇಕು, ಕನ್ನಡೀಕರಿಸಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ರಕ್ಷಣಾ ವೇದಿಕೆಯ ಓಹಿಲೇಶ್, ಸೀತಾರಾಮ್, ಹೇಮಂತ್ ಕುಮಾರ್, ಸೋಮಶೇಖರ್, ಪ್ರೀತಂರಾಜ್, ರೇಖಾಮಂಜುನಾಥ್, ಆಲ್ವೀನ್, ಚಂದ್ರಶೇಖರ್, ರಘು ಪಾಳ್ಯ, ಗಣೇಶ್ ಗೌಡ, ತೋಫಿಕ್ ಪಾಷಾ, ಶಿವಣ್ಣಗೌಡ, ತುಳಸಿದಾಸ್, ಶ್ರಿಧರ್, ತನುಗೌಡ, ಶಿವಕುಮಾರ್, ನಳಿನಿ ಇದ್ದರು.ಹಾಸನದ ರೈಲ್ವೆ ನಿಲ್ದಾಣದ ಬಳಿ ಇಂಗ್ಲೀಷಿನಲ್ಲಿದ್ದ ಬ್ಯಾನರ್‌ಗಳನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು.