ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ವಸತಿನಿಲಯದ ಕಟ್ಟಡ ಕಾಮಗಾರಿಯು ನಿಗದಿತ ಮಾನದಂಡ ಹಾಗೂ ಗುಣಮಟ್ಟವನ್ನು ಪಾಲಿಸಿಕೊಂಡು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ನಡೆಯಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ₹೩ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯ ಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮೀಣ, ನಗರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಜನರು ಸಣ್ಣಪುಟ್ಟ ವೈಮನಸ್ಸುಗಳನ್ನು ದೂರ ಮಾಡಿ ಪಕ್ಷಾತೀತವಾಗಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಸಹಕರಿಸಬೇಕು. ಅಂದಾಗ ಮಾತ್ರ ನಿರೀಕ್ಷೆಯಂತೆ ಗುಣಮಟ್ಟದ ಕಾಮಗಾರಿ ಜತೆಗೆ ವೇಗವಾಗಿ ಕಾಮಗಾರಿ ಮಾಡಲು ಸಾಧ್ಯ ಎಂದರು.ಈಗಾಗಲೇ ತಾಲೂಕಿನಲ್ಲಿ ಸಿಸಿ ರಸ್ತೆ, ಚರಂಡಿ ಸೇರಿದಂತೆ ಇತರೆ ಮೂಲ ಸೌಲಭ್ಯ ನೀಡುವಲ್ಲಿ ಅನುದಾನ ತರಲಾಗಿದೆ. ಅಲ್ಲದೇ ಕೋಟ್ಯಂತರ ರು. ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. ತಾಲೂಕಿನ ಜನತೆಯ ಆಶೀರ್ವಾದದಿಂದ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜನತೆಯ ಋಣ ತೀರಿಸುವುದು ನನ್ನ ಜವಾಬ್ದಾರಿಯಾಗಿದೆ. ಇದೇ ರೀತಿ ಮುಂದೆಯು ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ. ರಾಜ್ಯದಲ್ಲಿಯೇ ಶಿರಹಟ್ಟಿ ಮೀಸಲು ಮತಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ಮಾದರಿ ಮತಕ್ಷೇತ್ರ ಮಾಡಿ ತೋರಿಸುವೆ ಎಂದರು.ಇಲಾಖೆಯ ಅಧಿಕಾರಿ ಎಸ್.ಎಸ್. ಪಾಟೀಲ, ತಿಮ್ಮರಡ್ಡಿ ಮರಡ್ಡಿ, ಶಂಕರ ಮರಾಠೆ, ಡಿ.ವೈ. ಹುನಗುಂದ, ಮೋಹನ್ ಗುತ್ತೆಮ್ಮನವರ, ಮಹೇಶ್ ಬಡ್ನಿ, ಕೊಟ್ರೇಶ್ ಸಜ್ಜನರ, ಫಕೀರೇಶ ರಟ್ಟಿಹಳ್ಳಿ, ಗಂಗಾಧರ ಮೆಣಸಿನಕಾಯಿ, ಸುರೇಶ್ ಬೆಲಹುಣಸಿ, ರಾಜು ಮಾಂಡ್ರೆ, ಕೆ.ವಿ. ಅಕ್ಕೂರ, ಹನುಮಂತಗೌಡ ಪಾಟೀಲ, ಶೇಖಣ್ಣ ಕುಲಕರ್ಣಿ, ಅಪ್ಪಣ್ಣ ಸಾಲಿ, ಶರಣಬಸವ ಚನ್ನೂರ, ಜಾನು ಲಮಾಣಿ, ರಾಜೀವ್‌ರೆಡ್ಡಿ ಬಮ್ಮನಕಟ್ಟಿ, ಮಲ್ಲನಗೌಡ ಪಾಟೀಲ್, ಬಸವರಾಜ್ ಬೆಳಗಟ್ಟಿ, ಪರಶುರಾಮ್ ಗೋಪಾಲಿ, ಮಧುಚಂದ್ರ ಮರೆಡ್ಡಿ, ವಿಶ್ವನಾಥ್ ಪಾಟೀಲ, ಮದನಲಾಲ್ ಬಾಫಣಾ ಇತರರು ಇದ್ದರು.