ಸಾರಾಂಶ
ಹಾವೇರಿ: ನೀರು ಎಲ್ಲರಿಗೂ ಸೇರಿದ್ದಾಗಿದ್ದು, ನೀರಿನ ಸಮಸ್ಯೆ ಲೋಕಲ್‌ನಿಂದ ಗ್ಲೋಬಲ್‌ವರೆಗೂ ಇದೆ. ಬೇಡ್ತಿ ವರದಾ ನದಿ ಜೋಡಣೆಗೆ ಜನಶಕ್ತಿ ಪ್ರಕಟವಾಗಿದ್ದು, ಜನಶಕ್ತಿಯ ಮುಂದೆ ಯಾವುದೂ ದೊಡ್ಡದಿಲ್ಲ. ಹಳ್ಳ- ಹಳ್ಳ ಸೇರಿ ನದಿಯಾದಂತೆ ರೈತರ ಹಳ್ಳ ದೊಡ್ಡ ನದಿಯಾಗಿ ಹರಿಯುತ್ತದೆ. ಈ ಯೋಜನೆಗಾಗಿ ಪಕ್ಷಾತೀತ ಹೋರಾಟ ಅಗತ್ಯ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಹುಕ್ಕೇರಿಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವರದಾ ಹಾಗೂ ಬೇಡ್ತಿ ನದಿಗಳ ಜೋಡಣೆ ಕಾಮಗಾರಿಯ ಕುರಿತಾದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ನಮ್ಮ ಜಿಲ್ಲೆಗೆ ನೀರು ಬೇಕು ಎನ್ನುವುದಕ್ಕೆ ನಾವು ರಾಜಕಾರಣ ಮಾಡಬೇಕು. ಆದರೆ, ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಬೇಡ್ತಿ- ವರದಾ ನದಿ ಜೋಡಣೆ ಸಂಬಂಧವಾಗಿ ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ, ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಇನ್ನೊಂದು ವಾರದಲ್ಲಿ ಪೂರ್ವ ಕಾರ್ಯಸಾಧ್ಯತೆಯ ವರದಿಗೆ (ಪಿಎಫ್‌ಆರ್) ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದರು.
ಪಿಎಫ್‌ಆರ್ ಆದ ಬಳಿಕ ಪಿಡಿಆರ್ ಶುರುವಾಗಲಿದೆ. ಆಗ ಪ್ರತಿಯೊಂದು ಹಂತದಲ್ಲೂ ಪರಿಶೀಲನೆ ನಡೆಸುವ ಅಗತ್ಯತೆ ಇದೆ. ಬದಲಾದ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೂ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಕೊಡಬೇಕಿದೆ. ಸಂಘರ್ಷ ಬಿಟ್ಟು ಮನವೊಲಿಕೆ ಮಾಡಬೇಕಿದೆ. ಈ ಯೋಜನೆಗೆ ಅನೇಕ ಅಡೆತಡೆ, ಸವಾಲು ಬರುತ್ತವೆ. ಹಾಗೆಯೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಹೀಗಾಗಿ ಸವಾಲುಗಳನ್ನು ಮೀರಿ ಯೋಜನೆ ಕಾರ್ಯಗತಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಯೋಜನೆ ಅನುಷ್ಠಾನ ಆಗಲಿದೆ ಎಂಬ ವಿಶ್ವಾಸವಿದೆ ಎಂದರು.26 ಟಿಎಂಸಿ ನೀರು: ಡಿಪಿಆರ್ ಆದ ಮೇಲೆ ಎಷ್ಟು ನೀರು ಬಳಕೆ ಮಾಡಿಕೊಳ್ಳಬೇಕು. ಹಿರೇಹಳ್ಳ, ಬೇಡ್ತಿ, ಶಾಲ್ಮಲಾ ಹಳ್ಳ ಇವೆ. ವರದಾ ನದಿಯಲ್ಲಿ ಎಷ್ಟು ನೀರು ಸಿಗುತ್ತದೆ, ಅದು ನಮಗೆ ಬಳಕೆಗೆ ಬರುತ್ತದೆ. ಅದು ಜಿಲ್ಲೆಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಅದರ ಜತೆಗೆ ಈ ನೀರನ್ನು ಎಲ್ಲಿ ಸಂಗ್ರಹ ಮಾಡುತ್ತೇವೆ ಎನ್ನುವುದು ಮುಖ್ಯ. ಫಲವತ್ತಾದ ಭೂಮಿ ಮುಳುಗದಂತೆ ನೋಡಬೇಕು. ಸುಮಾರು 26 ಟಿಎಂಸಿ ನೀರನ್ನು ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವುದನ್ನು ಚಿಂತನೆ ಮಾಡಬೇಕು. ಇದು ಒಂದೇ ದಿನದಲ್ಲಿ ಅಗುವುದಿಲ್ಲ. ಸುದೀರ್ಘ ಪ್ರಕ್ರಿಯೆ ಇದೆ. ಅದಕ್ಕಾಗಿ ಸಿದ್ಧರಾಗಬೇಕು ಎಂದರು. ಈ ಸಂದದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಸವಣೂರಿನ ಅಡವಿ ಸ್ವಾಮಿಮಠದ ಶ್ರೀಗಳು, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಡಿ.ಎಂ. ಸಾಲಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ರೈತ ಸಂಘದ ಮುಖಂಡರಾದ ಎ.ಎಸ್. ಬಳ್ಳಾರಿ, ರಾಮಣ್ಣ ಕೆಂಚೆಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಸೋಮಶೇಖರ ಕೊತಂಬರಿ ಇತರರು ಇದ್ದರು.