26ರಂದು ಪಕ್ಷಾತೀತ, ಜಾತ್ಯಾತೀತ ಡಾ.ಬಿ.ಆರ್‌.ಅಂಬೇಡ್ಕರ್‌ ಭೀಮೋತ್ಸವ

| Published : May 15 2025, 01:53 AM IST

26ರಂದು ಪಕ್ಷಾತೀತ, ಜಾತ್ಯಾತೀತ ಡಾ.ಬಿ.ಆರ್‌.ಅಂಬೇಡ್ಕರ್‌ ಭೀಮೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್‌ ಆಚರಣಾ ಸಮಿತಿ ಮುಖ್ಯಸ್ಥ ಸುಭಾಷ್‌ ಮಾಡ್ರಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮೇ ೨೬ ರಂದು ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಭೀಮೋತ್ಸವ ಆಚರಣೆಯಾಗಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿ ಮುಖ್ಯಸ್ಥ ಸುಭಾಷ್ ಮಾಡ್ರಹಳ್ಳಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸರ್ವ ಸಮಾಜ ಸೇರಿ ಡಾ.ಬಿ.ಆರ್.ಅಂಬೇಡ್ಕರ್ ಭೀಮೋತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ ಹಾಗೂ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳೆಲ್ಲ ಒಂದುಗೂಡಿ ಪಕ್ಷಾತೀಕ, ಜಾತ್ಯಾತೀತವಾಗಿ ಆಚರಿಸಲು ಬೆಂಬಲ ಸೂಚಿಸಿದ್ದಾರೆ. ಎಲ್ಲ ಸರ್ವ ಧರ್ಮಗಳ ಸಾಮರಸ್ಯದ ನಡಿಗೆ ಜಾಥಾ ಇದಾಗಲಿದೆ ಎಂದರು.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಸುನೀಲ್ ಬೋಸ್, ಯದುವೀರ್‌ ಒಡೆಯರ್‌, ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು, ಭೀಮೋತ್ಸವದಲ್ಲಿ ಆಗಮಿಸಲಿದ್ದಾರೆ ಎಂದರು. ಭೀಮೋತ್ಸವದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನತೆ ಸೇರುವ ನಿರೀಕ್ಷೆ ಇದೆ. ಈ ಭೀಮೋತ್ಸವವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಂಬೇಡ್ಕರ್‌ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಸಾಕಾನೆ ಮೇಲೆ ಅಂಬೇಡ್ಕರ್ ಮೆರವಣಿಗೆ:

ಮೇ ೨೬ ರಂದು ನಡೆಯಲಿರುವ ಭೀಮೋತ್ಸವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ೧೩೪ನೇ ಜಯಂತಿ ಆಚರಣೆಯಲ್ಲಿ ಆನೆ ಮೇಲೆ ಅಂಬೇಡ್ಕರ್‌ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಸುಭಾಷ್‌ ಮಾಡ್ರಹಳ್ಳಿ ತಿಳಿಸಿದರು. ಭೀಮೋತ್ಸವಕ್ಕೆ ಸಾಕಾನೆ ಕರೆತರುವ ಪ್ರಯತ್ನ ನಡೆದಿದೆ, ಸದ್ಯದಲ್ಲೇ ಅನುಮತಿ ಸಿಗಲಿದೆ. ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಲಿದ್ದು, ವಾಹನಗಳ ಮೆರವಣಿಗೆ ಸಹ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷ ಆರ್.ಡಿ.ಉಲ್ಲಾಸ್‌, ಪಿಎಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಬೇಗೂರು ಸದಾ, ಅಂಬೇಡ್ಕರ್ ಆಚರಣಾ ಸಮಿತಿಯ ಸದಾನಂದ, ಮಲ್ಲಿಕ್, ತಿಮ್ಮಯ್ಯ, ಗೋಪಾಲಸ್ವಾಮಿ, ಸುರೇಶ್, ಲಕ್ಕೂರ್ ಗಿರೀಶ್, ಮಲ್ಲೇಶ್ ಇದ್ದರು.