ಕನ್ನಡಪ್ರಭ ವಾರ್ತೆ ರಾಮನಗರ

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಯೇ ಅನಧಿಕೃತ. ಹೀಗಾಗಿ ಶಾಸನಬದ್ಧವಲ್ಲದ ಬಿಡದಿ ಟೌನ್ ಶಿಪ್ ಯೋಜನೆ ಮತ್ತು ಭೂ ಸ್ವಾಧೀನ ಅಂತಿಮ ಅಧಿಸೂಚನೆಯನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ಬೈರಮಂಗಲ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರ ಭೂ ಹಿತರಕ್ಷಣಾ ಸಂಘ ಜಂಟಿಯಾಗಿ ಗುರುವಾರ ಆಯೋಜಿಸಿದ್ದ ಜನತಾ ನ್ಯಾಯಪೀಠದ ಸಾರ್ವಜನಿಕ ವಿಚಾರಣೆಯಲ್ಲಿ ಟೌನ್ ಶಿಪ್ ಯೋಜನೆ ವಿರುದ್ಧದ ರೈತರಿಂದ ಅಭಿಪ್ರಾಯ ಆಲಿಸಿ ಗೋಪಾಲಗೌಡರು ಮಾತನಾಡಿದರು.

1994ರ ಟೈಲರ್ ವರ್ಸಸ್ ಟೈಲರ್ ಕೇಸ್ ಮತ್ತು ಬಾಬು ವರ್ಗೀಸ್ ಪ್ರಕರಣದ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಉಪನಗರ ಯೋಜನೆ ಮತ್ತು ಭೂ ಸ್ವಾಧೀನ ಅಧಿಸೂಚನೆ ಬೇಜವಾಬ್ದಾರಿಯಿಂದ ಕೂಡಿದ್ದು ಸಂವಿಧಾನ ವಿರೋಧಿಯಾಗಿದೆ. ಒಂದೇ ತಾಲೂಕಿನಲ್ಲಿ ಎರಡು ಅರ್ಬನ್ ಅಥಾರಿಟಿ ಇರುವಂತಿಲ್ಲ. ಹಾಗಾಗಿ ಜಿಬಿಡಿಎ ಕಾನೂನು ಪ್ರಕಾರ ಅಸ್ತಿತ್ವದಲ್ಲಿಲ್ಲ. ಅದರ ಭೂ ಸ್ವಾಧೀನ ಅಧಿಸೂಚನೆಗೆ ಮಾನ್ಯತೆಯೂ ಇಲ್ಲ ಎಂದು ಹೇಳಿದರು.

2015ರಲ್ಲಿ ಬಿಡದಿ ಹೋಬಳಿ ವ್ಯಾಪ್ತಿಯ 26 ಗ್ರಾಮಗಳು ನಗರ ಪ್ರದೇಶವಲ್ಲ, ಕೃಷಿ ವಲಯ ಎಂದು ನಮೂದು ಮಾಡಲಾಗಿದೆ. ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೆ ಟೌನ್ ಶಿಪ್ ಹೇಗೆ ಮಾಡುತ್ತೀರಾ. ನಿಮ್ಮ ಪ್ಲಾನ್ ಏನು. ಬಿಡದಿ ಸಮಗ್ರ ಉಪನಗರ ಯೋಜನೆ ಸ್ಥಾಪನೆಗೆ ಆಧಾರ ಏನು. ಪ್ಲಾನಿಂಗ್ ಆಥಾರಿಟಿ, ಅಭಿವೃದ್ಧಿ ಪ್ರಾಧಿಕಾರ ಆಗಲು ಸಾಧ್ಯವೇ. ಅಭಿವೃದ್ಧಿ ಮಾಡುವುದು ನಗರದ ಪ್ರದೇಶವನ್ನೇ ಹೊರತು ಗ್ರಾಮಗಳ ಕೃಷಿ ಭೂಮಿಯನ್ನಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.


ಜಿಬಿಡಿಎ ರಚನೆಯೇ ಅನಧಿಕೃತ:

ಈ ಉಪನಗರಕ್ಕೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಬೇಕಿತ್ತು. ಆದರೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಹೊರಡಿಸಲಾಗಿದೆ. ಪ್ಲಾನಿಂಗ್ ಅಥಾರಿಟಿಯೇ ಬೇರೆ ಅಭಿವೃದ್ಧಿ ಪ್ರಾಧಿಕಾರವೇ ಬೇರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಯೇ ಅನಧಿಕೃತವಾಗಿದೆ. ಏಕೆಂದರೆ ಯೋಜನಾ ಪ್ರದೇಶದ ಭೂಮಿ ಗ್ರಾಪಂಗಳ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಇಲ್ಲಿ ನಗರಾಭಿವೃದ್ಧಿ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಆಡಳಿತವು ಪ್ರಸ್ತಾವನೆಯನ್ನು ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ಅನುಮತಿ ಪಡೆದ ನಂತರವೇ ಅಕ್ಕಪಕ್ಕದ ಜಮೀನು ನಗರಕ್ಕೆ ಸೇರಿಕೊಳ್ಳಲು ಅವಕಾಶವಿದೆ. ಅಲ್ಲದೆ, ಸ್ಥಳೀಯ ಗ್ರಾಪಂ ಒಪ್ಪಿಗೆ ನೀಡಿದರೆ ಮಾತ್ರ ಉದ್ದೇಶಿತ ಗ್ರಾಮವನ್ನು ನಗರಕ್ಕೆ ಸೇರ್ಪಡೆ ಮಾಡಬಹುದು. ಇದೆಲ್ಲವೂ ಗ್ರಾಮೀಣ ಭಾಗಕ್ಕೆ ಸೇರುತ್ತದೆ. ಹಾಗಾಗಿ ಇಲ್ಲಿ ಉಪನಗರ ಮಾಡಲು ಬರುವುದಿಲ್ಲ ಎಂದರು.

ಕುಡಾ ಕಾಯ್ದೆಯಡಿ ಭೂಸ್ವಾಧೀನಕ್ಕೆ ಅವಕಾಶವಿಲ್ಲ. ಸಂವಿಧಾನದಲ್ಲಿ ಯೋಜನಾ ಪ್ರಾಧಿಕಾರಕ್ಕೆ(ಪ್ಲಾನಿಂಗ್ ಅಥಾರಿಟಿ) ತಂದ 74ನೇ ತಿದ್ದುಪಡಿ ರಾಜ್ಯದಲ್ಲಿ ಇನ್ನೂ ಕಾಯ್ದೆಯಾಗಿ ಜಾರಿಯಾಗಿಲ್ಲ. ಹೀಗಿರುವಾಗ ಪ್ಲಾನಿಂಗ್ ಅಥಾರಿಟಿಗೂ ಡೆವಲಪ್ಮೆಂಟ್ ಅಥಾರಿಟಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ರೈತರಿಗೆ ಸಂವಿಧಾನದ ತಾಯಿತ ಕಟ್ಟುತ್ತಿದ್ದೇವೆ:

ಸರ್ಕಾರ ರೈತರ ವಿಷಯದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡಿಲ್ಲ. 2013ರ ಕಾಯ್ದೆ ಪ್ರಕಾರ ನೀವು ಮಾರುಕಟ್ಟೆ ಆಧಾರಿತ ಪರಿಹಾರ ನಿಗದಿ ಮಾಡಿಲ್ಲ. ಜಿಬಿಡಿಎ ಪ್ಲಾನಿಂಗ್ ಅಥಾರಿಟಿಯೇ ಹೊರತು ನಗರಾಭಿವೃದ್ಧಿ ಅಥಾರಿಟಿ ಅಲ್ಲ. ಅದನ್ನು ಮಾಡಬೇಕಾದರೆ ಶಾಸನಬದ್ಧ ಪ್ರಕ್ರಿಯೆ ಪಾಲಿಸಬೇಕು. ಉಪನಗರ ನಿರ್ಮಾಣವನ್ನು ದೆಹಲಿಯವರಿಗಾಗಿ ಮಾಡುತ್ತಿದ್ದೀರಾ. ಟೌನ್ ಶಿಪ್ ಬೇಕಿರುವುದು ಇಲ್ಲದವರಿಗೆ ಹೊರತು ಇರುವವರಿಗಲ್ಲ. ಉಪನಗರ ಸ್ಕೀಮ್ ಗೆ ಭೂಮಾಲೀಕರು ಮತ್ತು ರೈತರ ಅನುಮತಿ ಪಡೆದಿದ್ದೀರಾ? ಕೈಗೆಟುಕುವ ದರದಲ್ಲಿ ನಿವೇಶನ ಕೊಡುವ ಘೋಷಣೆ ಮಾಡಿದ್ದಿರಾ ಎಂದು ಪ್ರಶ್ನೆ ಮಾಡಿದರು.

ರೈತರು ಹೆದರುವ ಅಗತ್ಯವಿಲ್ಲ. ನಿಮಗೆ ಸಂವಿಧಾನದ ತಾಯಿತವನ್ನು ನಾವು ಕಟ್ಟುತ್ತಿದ್ದೇವೆ. ಇದು ಸಂವಿಧಾನ ಮತ್ತು ಸರ್ವೋಚ್ಛ ನ್ಯಾಯಾಲಯದ ನಿಯಮಗಳಿಗೆ ವಿರುದ್ಧವಾದ ಭೂಸ್ವಾಧೀನವಾಗಿದೆ. ಶಾಸನಬದ್ಧವಲ್ಲದ ಫೈನಲ್ ನೋಟಿಫಿಕೇಶನ್ ಶೂನ್ಯ. ಸರ್ಕಾರ ಪಬ್ಲಿಕ್ ಸರ್ವೆಂಟ್ ಅನ್ನೂದನ್ನು ಮರೆತಿದೆಯಾ. ಒಂದು ಗ್ರಾಮದಲ್ಲಿ ಎರಡು ಗುಂಪು ಮಾಡಿದೆ. ನಾವು ಬದುಕಿರುವವರೆಗೆ ನಿಮ್ಮನ್ನು ಯಾರೂ ಹೆದುರಿಸಲು ಸಾಧ್ಯವಿಲ್ಲ. ಇನ್ನೆರಡು ದಿನಗಳಲ್ಲಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡುತ್ತೇವೆ. ಇಲ್ಲಿಂದ ದೆಹಲಿವರೆಗೂ ನಿಮ್ಮನ್ನು ಕರೆದೊಯ್ಯುತ್ತೇವೆ ಎಂದು ರೈತರಿಗೆ ಧೈರ್ಯ ತುಂಬಿದರು. ಸಭೆಯಲ್ಲಿ ಕೃಷಿ ಆರ್ಥಿಕ ತಜ್ಞ ಡಾ.ಪ್ರಕಾಶ ಕಮ್ಮರಡಿ, ಸಮಾಜಶಾಸ್ತ್ರಜ್ಞೆ ಡಾ. ಎ.ಆರ್.ವಾಸವಿ, ಹಿರಿಯ ಪತ್ರಕರ್ತ ಡಿ. ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.

--------

ಇದು ಪ್ರಜಾಪ್ರಭುತ್ವ ರಾಷ್ಟ್ರ, ಈ ದೇಶಕ್ಕೆ ರಾಜಕೀಯ ಗ್ರಂಥ ಸಂವಿಧಾನ. ರೈತರು ಒಪ್ಪಿದ ಮಾತ್ರಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶದ ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ ಎನ್ನುವ ನಾಯಕರ ಪಕ್ಷದ ಸರ್ಕಾರ ರಾಜ್ಯದಲ್ಲಿದೆ. ಸಂವಿಧಾನದ ರಕ್ಷಣೆಯಾಗಬೇಕಾದರೆ ಮೊದಲು ರೈತರ ರಕ್ಷಣೆ ಮಾಡಬೇಕು.

ಎಲ್ಲರೂ ಸಂವಿಧಾನದತ್ತವಾಗಿ ಬದುಕುವ ಹಕ್ಕನ್ನು ಕಸಿಯದೆ ರಕ್ಷಿಸಬೇಕು. ರೈತರಿಗಾಗಿ ನಮ್ಮಂತವರು ಇದ್ದೇವೆ.

- ವಿ.ಗೋಪಾಲಗೌಡ, ನಿವೃತ್ತ ನ್ಯಾಯಾಧೀಶರು, ಸುಪ್ರೀಂ ಕೋರ್ಟ್