ಸಾರಾಂಶ
ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿಗೆ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಪ್ರವೇಶ ನಿರಾಕರಣೆ ಮತ್ತು ಶಿವಮೊಗ್ಗ, ಸಾಗರದಲ್ಲಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ್ದರ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಹೋರಾಟದ ಕಿಡಿ ಸೋಮವಾರವೂ ಮುಂದುವರಿಯಿತು
ಕನ್ನಡಪ್ರಭ ವಾರ್ತೆ ಬೆಂಗಳೂರು
ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿಗೆ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಪ್ರವೇಶ ನಿರಾಕರಣೆ ಮತ್ತು ಶಿವಮೊಗ್ಗ, ಸಾಗರದಲ್ಲಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ್ದರ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಹೋರಾಟದ ಕಿಡಿ ಸೋಮವಾರವೂ ಮುಂದುವರಿಯಿತು. ಶಿವಮೊಗ್ಗ, ಬೆಳಗಾವಿ, ವಿಜಯಪುರ ಸೇರಿ ರಾಜ್ಯಾದ್ಯಂತ ಹಲವು ಜಿಲ್ಲೆ - ತಾಲೂಕು ಕೇಂದ್ರಗಳಲ್ಲಿ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಶಿವಮೊಗ್ಗದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ, ವಿವಿಧ ವಿಪ್ರ ಸಂಘಟನೆಗಳು, ವಿಪ್ರ ವಕೀಲರ ವೇದಿಕೆಗಳ ಸಹಯೋಗದಲ್ಲಿ ತಿಲಕನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ತುಮಕೂರಿನಲ್ಲಿ ಜಿಲ್ಲಾ ಬಾಹ್ಮಣ ಸಭಾದ ನೇತೃತ್ವದಲ್ಲಿ ಸಮಾವೇಶಗೊಂಡ ಆರ‍್ಯವೈಶ್ಯ, ವಿಶ್ವಕರ್ಮ ಹಾಗೂ ಜೈನ ಸಮುದಾಯದ ಮುಖಂಡರು ಜನಿವಾರ ತೆಗೆಸಿದ್ದರ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಿದರು. ಧಾರವಾಡದಲ್ಲಿ ತಾಲೂಕು ಬ್ರಾಹ್ಮಣ ಸಭಾ ಹಾಗೂ ಹಿಂದು ಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ತಾಲೂಕು ಬ್ರಾಹ್ಮಣ ಸಂಘದ ನೇತೃತೃದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ನಗರದಲ್ಲಿ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು. ಬಾಗಲಕೋಟೆ ನಗರದಲ್ಲಿ ಹಿಂದೂ ಸಂಸ್ಕೃತಿ ಸುರಕ್ಷಾ ಸಮಿತಿಯು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿತು.
ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿ ಜನಿವಾರ ಧಾರಣೆ ಮಾಡುವ ವಿವಿಧ ಸಮುದಾಯಗಳು ಬೃಹತ್ ಪ್ರತಿಭಟನೆ ನಡೆಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ವಿವಿಧ ಬ್ರಾಹ್ಮಣ ಸಂಘಟನೆಗಳ ಸಹಭಾಗಿತ್ವದಲ್ಲಿ ಹೋರಾಟ ನಡೆಯಿತು.