ಸಾರಾಂಶ
ಹುಬ್ಬಳ್ಳಿ:
ವರ್ತಮಾನದ ಸಂಘರ್ಷಮಯ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಲು ಅಹಿಂಸಾ ತತ್ವ ಪಾಲನೆ ಅನಿವಾರ್ಯ ಎಂದು ಸಚಿವ ಡಿ. ಸುಧಾಕರ ಹೇಳಿದರು.ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಭಗವಾನ್ ಪಾರ್ಶ್ವನಾಥರ ಕೇವಲ ಜ್ಞಾನ ಕಲ್ಯಾಣಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಲ್ಯಾಣ ಮತ್ತು ಅಸ್ತಿತ್ವದ ಉಳಿವಿಗೆ ಜೈನಧರ್ಮದ ಪರಮ ತತ್ವವಾದ ಅಹಿಂಸೆಯನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವುದು ಅವಶ್ಯಕವಾಗಿದೆ. ಭಾರತದ ತಳಹದಿಯೇ ಧರ್ಮದ ಮೇಲೆ ನಿಂತಿದೆ. ದೇಶದಲ್ಲಿ ಜೈನ ಧರ್ಮವು ಅತಿ ಪುರಾತನವಾದುದು. ಅದರ ಮೂಲತತ್ವ ಅಹಿಂಸೆಯನ್ನು ಎಲ್ಲ ಧರ್ಮಗಳೂ ಅಂಗೀಕರಿಸಿವೆ. ಭಾರತೀಯರು ಅಹಿಂಸಾ ತತ್ವವನ್ನು ಉಳಿಸಿ- ಬೆಳೆಸಿ ತಮ್ಮದನ್ನಾಗಿಸಿಕೊಳ್ಳಬೇಕು. ಜತೆಗೆ ಇನ್ನೊಬ್ಬರಿಗೂ ತಿಳಿಹೇಳಬೇಕು ಎಂದು ಕರೆನೀಡಿದರು.ನವಗ್ರಹ ತೀರ್ಥಕ್ಷೇತ್ರದಲ್ಲಿ ಆಚಾರ್ಯ ಗುಣಧರ ನಂದಿ ಮಹಾರಾಜರು ನಿರ್ಮಿಸಿರುವ 405 ಅಡಿ ಎತ್ತರದ ಸುಮೇರು ಪರ್ವತವು ಕರ್ನಾಟಕದ ಹೆಮ್ಮೆಯಾಗಿದೆ. ಮುಂದಿನ ದಿನಗಳಲ್ಲಿ ಇದು ರಾಜ್ಯದ ಪ್ರಮುಖ ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ಬೆಳೆಯಲಿದೆ. ರಾಜ್ಯದ ಎಲ್ಲ ಜೈನ ಬಸದಿಗಳು ಮತ್ತು ಮಂದಿರಗಳ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರವು ಈಗಾಗಲೇ ₹ 50 ಕೋಟಿಗಳ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆಯಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ದೆಹಲಿಯ ಆಯುಷ್ ಮಂತ್ರಾಲಯದ ಮೆಡಿಕಲ್ ಅಸೆಸ್ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್ ಅಧ್ಯಕ್ಷ ಹಾಗೂ ಕನ್ನಡಿಗ ರಘುರಾಮ ಭಟ್ ಮಾತನಾಡಿದರು.ನ್ಯಾಯಮೂರ್ತಿ ಪದ್ಮರಾಜ ದೇಸಾಯಿ, ಮಹಾವೀರ ಮಿರಜಗಿ, ಪ್ರಮೋದ ಜೈನ, ಕೇಶವ ಜೈನ ಸೇರಿದಂತೆ ಹಲವರಿದ್ದರು. ಪಾರ್ಶ್ವನಾಥರಿಗೆ ಭಿಕ್ಷೆ, ಕೇವಲ ಜ್ಞಾನ ಕಲ್ಯಾಣಕ:
ನವಗ್ರಹ ತೀರ್ಥಕ್ಷೇತ್ರದ ಆರಾಧ್ಯ ದೇವರಾದ ಭಗವಾನ್ ಪಾರ್ಶ್ವನಾಥರು ಸನ್ಯಾಸ ಸ್ವೀಕಾರ ನಂತರದ ಭಿಕ್ಷಾ ಪ್ರದಾನ, ಕೇವಲ ಜ್ಞಾನ ಪ್ರಾಪ್ತಿ ಹಾಗೂ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಭಾನುವಾರ ಆಗಮೋಕ್ತ ಸಂಸ್ಕೃತ ಮಂತ್ರಗಳ ಪಠಣದೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿದವು. ಗುರುದೇವ ಆಚಾರ್ಯ ಕುಂತುಸಾಗರ ಮಹಾರಾಜರು, ಆಚಾರ್ಯ ಗುಣಧರ ನಂದಿ ಮಹಾರಾಜ ಸೇರಿದಂತೆ ಅನೇಕ ಆಚಾರ್ಯರ ಸಮ್ಮುಖದಲ್ಲಿ ಭಗವಾನ್ ಪಾರ್ಶ್ವನಾಥರ ಪಂಚಲೋಹ ಮತ್ತು ಶಿಲಾ ಪ್ರತಿಮೆಗಳಿಗೆ ಪುಷ್ಪಾಂಜಲಿ, ನೈವೇದ್ಯ, ಧೂಪ, ದೀಪ, ಆರತಿ, ಫಲ ಸಮರ್ಪಣೆ ಮಾಡಲಾಯಿತು.ನಂತರ 24 ತೀರ್ಥಂಕರರಿಗೆ ಆರ್ಘ್ಯವನ್ನು ಬಿಡಲಾಯಿತು. ವಂದಿಪೆ ಗುರುಚರಣ ಗೀತೆಗೆ ಕಲಬುರಗಿಯ ಪೂಜಾ ಪ್ರಸ್ತುತಪಡಿಸಿದ ಭಕ್ತಿ ನರ್ತನ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿತ್ತು. ಸೋಂದೆಯ ಭಟ್ಟಾಕಳಂಕ ಆಚಾರ್ಯರು ಹಾಗೂ ಪ್ರತಿಷ್ಠಾಚಾರ್ಯರು ಶಾಸ್ತ್ರೋಕ್ತ ಕಾರ್ಯಕ್ರಮ ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ ಇಬ್ಬರು ಜೈನ ಸನ್ಯಾಸ ದೀಕ್ಷೆ ಪಡೆದರು. ಅವರಿಗೆ ಆಚಾರ್ಯ ಪದವಿಯನ್ನೂ ಗುರುದೇವ ಕುಂತುಸಾಗರ ಮಹಾರಾಜರು ಪ್ರದಾನ ಮಾಡಿದರು. ಆಚಾರ್ಯ ಧರ್ಮಸೇನ ಭಟ್ಟಾರಕರು, ಜಿನಸೇನ ಭಟ್ಟಾರಕರು ಅತಿಥಿಗಳನ್ನು ಸನ್ಮಾನಿಸಿದರು. ಪಂಡಿತರು, ರಾಜೇಂದ್ರ ಜೈನ್ ನೇತೃತ್ವ ವಹಿಸಿದ್ದರು.
ಸಚಿವರಿಂದ ₹ 1 ಕೋಟಿ ದೇಣಿಗೆ:ನವಗ್ರಹ ತೀರ್ಥಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣಕ ಮಹೋತ್ಸವದಲ್ಲಿ ಭಾಗವಹಿಸಿದ ಸಚಿವ ಸುಧಾಕರ ₹ 1.11 ಕೋಟಿ ದೇಣಿಗೆ ನೀಡಿದ್ದು ವಿಶೇಷವಾಗಿತ್ತು. ನಂತರ ಡಾ. ಗಂಗವಾಲರು ರಚಿಸಿದ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು.