ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಅಹಿಂದ ವರ್ಗದವರಾದ ನಾವು ಸಾಕಷ್ಟು ಶ್ರಮಿಸಿದ್ದೇವೆ. ಹಗಲಿರುಳು ದುಡಿದಿದ್ದೇವೆ. ಆದರೆ, ರಾಜ್ಯದಲ್ಲಿ ನಡೆಯಲಿರುವ ಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆ ಪೈಕಿ ಮೂರಲ್ಲಿ ಮೇಲ್ವರ್ಗದವರಿಗೆ ನೀಡಲಾಗಿದೆ. ಅಹಿಂದ ವರ್ಗಕ್ಕೆ ನೀಡಿಯೇ ಇಲ್ಲ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಾವಿರ ದಿನದ ಸಾಧನಾ ಸಮಾವೇಶವನ್ನು ಹಾವೇರಿಯಲ್ಲಿ ಫೆ.13ರಂದು ನಡೆಯಲಿದೆ. ಅದೇ ದಿನ 1 ಸಾವಿರ ಅಹಿಂದ ಹೋರಾಟಗಾರರು ಕಾಂಗ್ರೆಸ್‌ ವಿರುದ್ಧ ಹಾವೇರಿಯಲ್ಲಿ ಪ್ರತಿಭಟಣೆಗೆ ಮುಂದಾಗಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಂಚಿತ ಆರ್‌.ಎಂ. ಕುಬೇರಪ್ಪ ಅವರು ಕಾಂಗ್ರೆಸ್‌ ವಿರುದ್ಧ ಈ ಹೋರಾಟ ಸಂಘಟಿಸುತ್ತಿದ್ದು, ಕಾಂಗ್ರೆಸ್‌-ಅಹಿಂದ ಹೋರಾಟಕ್ಕೆ ಹಾವೇರಿ ವೇದಿಕೆಯಾಗಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕುಬೇರಪ್ಪ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಅಹಿಂದ ವರ್ಗದವರಾದ ನಾವು ಸಾಕಷ್ಟು ಶ್ರಮಿಸಿದ್ದೇವೆ. ಹಗಲಿರುಳು ದುಡಿದಿದ್ದೇವೆ. ಆದರೆ, ರಾಜ್ಯದಲ್ಲಿ ನಡೆಯಲಿರುವ ಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆ ಪೈಕಿ ಮೂರಲ್ಲಿ ಮೇಲ್ವರ್ಗದವರಿಗೆ ನೀಡಲಾಗಿದೆ. ಅಹಿಂದ ವರ್ಗಕ್ಕೆ ನೀಡಿಯೇ ಇಲ್ಲ. ಎಲ್ಲಿದೆ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದರು.

ಕಳೆದ ಬಾರಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರಲಿಲ್ಲ. ಆಗ ನನಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿದ್ದರು. ನಾನಾಗ 15 ಸಾವಿರಕ್ಕೂ ಅಧಿಕ ಮತ ಪಡೆದಿದ್ದೆ. ಆದರೆ, ಈಗ ಪಕ್ಷ ಅಧಿಕಾರದಲ್ಲಿದೆ. ನನಗೆ ಟಿಕೆಟ್‌ ಕೊಟ್ಟಿಲ್ಲ. ನನಗೆ ಟಿಕೆಟ್‌ ನೀಡದಿರಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಟಿಕೆಟ್‌ ನೀಡಿರುವುದನ್ನು ಹಿಂಪಡೆದು ಅದನ್ನು ತಮಗೆ ಟಿಕೆಟ್‌ ನೀಡಬೇಕು. ಇಲ್ಲವೇ ರಾಜಕೀಯ ಸಮಾನಂತರವಾದ ಅಧಿಕಾರ ನೀಡಬೇಕು ಎಂದು ಡಾ.ಕುಬೇರಪ್ಪ ಒತ್ತಾಯಿಸಿದರು.

ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಾವೇರಿಯಲ್ಲಿ ಫೆ.13ರಂದು ನಡೆಯಲಿರುವ ಸಾವಿರ ದಿನದ ಸಾಧನಾ ಸಮಾವೇಶದಲ್ಲಿ ನಾವು ಸಾವಿರ ಅಹಿಂದ ಹೋರಾಟಗಾರರನ್ನು ಜತೆಗೂಡಿಸಿಕೊಂಡು ಪ್ರತಿಭಟನಾ ಸಮಾವೇಶ ನಡೆಸುತ್ತೇವೆ. ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಎಲ್ಲಿದೆ ಸಾಮಾಜಿಕ ನ್ಯಾಯ. ಇದನ್ನು ಸರಿಪಡಿಸಿದರೆ ಉತ್ತಮ. ಇಲ್ಲದಿದ್ದಲ್ಲಿ ನಿಮ್ಮೊಂದಿಗೆ ನಾವು ಇರಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿಕಾರ ಕೇಳುವುದು ನಮ್ಮ ಹಕ್ಕು, ನಮಗೂ ಅಧಿಕಾರ ಕೊಡಿ. ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್‌ ಆದರೂ ಕೊಡಲಿ. ಅಥವಾ ಸಮಾನಂತರ ಅಧಿಕಾರವನ್ನಾದರೂ ಕೊಡಲಿ. 45 ವರ್ಷಗಳ ಕಾಲ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. 3 ಬಾರಿ ಸ್ಪರ್ಧಿಸಿದ್ದು, ಕಡಿಮೆ ಅಂತರದಿಂದ ಸೋತಿದ್ದೇನೆ. ಬಿಜೆಪಿಯಿಂದ ಬಂದಿರುವ ಮೋಹನ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಿರುವುದನ್ನು ರದ್ದುಪಡಿಸಬೇಕು. ನನಗೆ, ಬಸವರಾಜ ಗುರಿಕಾರ, ಎಸ್.ಜಿ. ಸೋನೇಖಾನ್ ಮೂವರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೂ ನಾವು ಚುನಾವಣೆ ಮಾಡಲಿದ್ದೇವೆ. ಒಂದು ವೇಳೆ ನೀಡದಿದ್ದರೆ, ಏನು ಮಾಡಬೇಕು ಎಂಬುವುದು ಮುಂದೆ ತಿಳಿಸುತ್ತೇವೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಎಸ್.ಜಿ. ಸೋನೇಖಾನ್ ಇದ್ದರು.