ನೀವ್ಯಾರೂ ಲಿಂಗಾಯತ ನಾಯಕರಲ್ಲ, ತಿರಸ್ಕೃತ ನಾಣ್ಯದಂತೆ ಡಮ್ಮಿ

| Published : Feb 26 2025, 01:03 AM IST

ನೀವ್ಯಾರೂ ಲಿಂಗಾಯತ ನಾಯಕರಲ್ಲ, ತಿರಸ್ಕೃತ ನಾಣ್ಯದಂತೆ ಡಮ್ಮಿ
Share this Article
  • FB
  • TW
  • Linkdin
  • Email

ಸಾರಾಂಶ

ನೀವ್ಯಾರೂ ಲಿಂಗಾಯತ ನಾಯಕರಲ್ಲ, ತಿರಸ್ಕೃತ ನಾಣ್ಯವಾಗಿರುವ ನೀವೆಲ್ಲಾ ಡಮ್ಮಿ ನಾಯಕರು ಎಂದು ಸ್ವಪಕ್ಷದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತಿತರೆ ಲಿಂಗಾಯತ ನಾಯಕರ ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

- ಯತ್ನಾಳ ನೇತೃತ್ವದ ಲಿಂಗಾಯತ ನಾಯಕರ ಗುಂಪಿಗೆ ಮಾಜಿ ಸಚಿವ ರೇಣುಕಾಚಾರ್ಯ ಟಾಂಗ್‌

- - - - ವೀರಶೈವ ಲಿಂಗಾಯತ ಮಠಾಧೀಶರ ಜೊತೆಗೆ ಚರ್ಚಿಸಿ, ಶೀಘ್ರದಲ್ಲೇ ಸಮಾವೇಶ

- ಬಿಎಸ್‌ವೈ, ಬಿವೈವಿ ಪರ ಸಮಾಜವಿದ್ದು, ವಿಜಯೇಂದ್ರಗೆ ಸಿಎಂ ಮಾಡ್ತೀವಿ ಎಂದು ಹೇಳಿಕ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನೀವ್ಯಾರೂ ಲಿಂಗಾಯತ ನಾಯಕರಲ್ಲ, ತಿರಸ್ಕೃತ ನಾಣ್ಯವಾಗಿರುವ ನೀವೆಲ್ಲಾ ಡಮ್ಮಿ ನಾಯಕರು ಎಂದು ಸ್ವಪಕ್ಷದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತಿತರೆ ಲಿಂಗಾಯತ ನಾಯಕರ ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ತಾವೇ ಲಿಂಗಾಯತ ನಾಯಕ, ತಾವೇ ಹಿಂದೂ ನಾಯಕನೆಂದು ಹೇಳಿಕೊಂಡು ಓಡಾಡುತ್ತಾರೆ. ಅಂತಹವರು ಚಲಾವಣೆಯಲ್ಲೇ ಇಲ್ಲದ ನಾಣ್ಯಗಳಂತೆ ಎಂದು ಟೀಕಿಸಿದರು.

ನಾನೂ ಸಾಕಷ್ಟು ಲಿಂಗಾಯತ ಒಳಪಂಗಡಗಳ ಮಠಾಧೀಶರನ್ನು ಸಂಪರ್ಕ ಮಾಡಿದ್ದೇನೆ. ಆದಷ್ಟು ಬೇಗನೆ ವೀರಶೈವ ಲಿಂಗಾಯತ ಸಭೆ ಮಾಡಿ, ವೀರಶೈವ ಲಿಂಗಾಯತ ಮಠಾಧೀಶರೂ, ಎಲ್ಲ ಒಳಪಂಗಡಗಳು ಸೇರಿದಂತೆ ಇಡೀ ಸಮಾಜವೇ ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲುವಂತೆ ಸಮಾವೇಶ ಮಾಡುತ್ತೇವೆ ಎಂದರು.

ವಿಜಯೇಂದ್ರಗೆ ಸಿಎಂ ಮಾಡ್ತೇವೆ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುತ್ತೇವೆ. ಇದಕ್ಕೆ ಪೂರಕವಾಗಿ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡುತ್ತೇವೆ. ಪಕ್ಷದ ಹೈಕಮಾಂಡ್‌ ಯಡಿಯೂರಪ್ಪ ಜನ್ಮದಿನ ಆಚರಿಸುವುದಕ್ಕೇ ನಮಗೇನು ಬೇಡ ಅಂದಿಲ್ಲ. ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಬೇಡ ಅಂತಾ ಹೇಳಿದ್ದಾರೆ. ಸದ್ಯಕ್ಕೆ ಬೇಡ ಅಂದಿದ್ದಕ್ಕೆ, ಆ ಮಾತಿಗೆ ಗೌರವ ಕೊಟ್ಟು ಸುಮ್ಮನಿದ್ದೇವಷ್ಟೇ. ಒಂದುವೇಳೆ ಸಮಾರಂಭ ಮಾಡಿದರೆ ಪಕ್ಷದ ಹೈಕಮಾಂಡ್‌ ನಾಯಕರೂ ಭಾಗವಹಿಸುತ್ತಾರೆ ಎಂದರು.

ಲಿಂಗಾಯತ ಸಮುದಾಯವಷ್ಟೇ ಅಲ್ಲದೇ, ಸಮಾಜದ ಬೇರೆ ಎಲ್ಲ ಸಮುದಾಯದವರಿಗೂ ಬೇಕಾಗಿರುವ ನಾಯಕ ಬಿ.ಎಸ್.ಯಡಿಯೂರಪ್ಪ. ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಮಠಾಧೀಶರು, ನಾಯಕರ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.

ಕೆಲವು ಗೂಂಡಾ ಮುಸಲ್ಮಾನರಿಗೆ ಆಳುವ ಸರ್ಕಾರದಲ್ಲಿರುವ ಕೆಲವರು ಬ್ರದರ್ ಆಗಿದ್ದಾರೆ. ಓಟು ಬ್ಯಾಂಕ್ ರಾಜಕಾರಣಕ್ಕೆ ಹೀಗೆ ಬ್ರದರ್ಸ್ ಅಂತಾ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇಂತಹವರೆಲ್ಲಾ ಆಡಳಿತ ಮಾಡುವುದಕ್ಕೆ ನಾಲಾಯಕ್ ಆಗಿದ್ದಾರೆ. ತಕ್ಷಣ‍ವೇ ಕಾಂಗ್ರೆಸ್ಸಿಗರು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ರಾವ್ ಜಾಧವ್‌, ಪಂಜು ಪೈಲ್ವಾನ್, ವೆಂಕಟೇಶ ಇತರರು ಇದ್ದರು.

- - - ಕೋಟ್ ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರಿಗೆ, ಕೆಎಸ್ಸಾರ್ಟಿಸಿ ನೌಕರರಿಗೆ, ಸರ್ಕಾರಿ ಬಸ್‌ಗಳಿಗೆ ಮಸಿ ಬಳಿಯುವ ಕೆಲಸವಾಗಿದೆ. ಆದರೆ, ಅಂತಹ ಮರಾಠಿ ಭಾಷಿಗರನ್ನು ಮೆಚ್ಚಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಭಾಷಣ ಮಾಡುತ್ತಾರೆ. ರಾಜ್ಯ ಭಾಷೆ ಮೇಲೆ ಅಭಿಮಾನ ಇಲ್ಲದ ಇಂಥವರಿಗೆ ಕುರ್ಚಿ ಮೇಲೆ ಮಾತ್ರ ಎಲ್ಲಿಲ್ಲದ ಅಭಿಮಾನ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - - -25ಕೆಡಿವಿಜಿ4, 5.ಜೆಪಿಜಿ:

ದಾವಣಗೆರೆಯಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.