ಜೋಶಿ ನೆರವು: ಅಜ್ಜ-ಅಜ್ಜಿ ಮಡಿಲು ಸೇರಿದ ಅನಿವಾಸಿ ಭಾರತೀಯ ಮೊಮ್ಮಕ್ಕಳು

| Published : Jul 14 2024, 01:36 AM IST

ಸಾರಾಂಶ

ಅನಿವಾಸಿ ಭಾರತೀಯರಾಗಿದ್ದ, ಆಸ್ಟ್ರೇಲಿಯಾ ಸರ್ಕಾರದ ವಶದಲ್ಲಿದ್ದ ಧಾರವಾಡ ಮೂಲದ ಪ್ರಿಯದರ್ಶಿನಿ ಪಾಟೀಲ ಅವರ ಇಬ್ಬರು ಮಕ್ಕಳನ್ನು ಮರಳಿ ಭಾರತಕ್ಕೆ ತರುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಅನಿವಾಸಿ ಭಾರತೀಯರಾಗಿದ್ದ, ಆಸ್ಟ್ರೇಲಿಯಾ ಸರ್ಕಾರದ ವಶದಲ್ಲಿದ್ದ ಧಾರವಾಡ ಮೂಲದ ಪ್ರಿಯದರ್ಶಿನಿ ಪಾಟೀಲ ಅವರ ಇಬ್ಬರು ಮಕ್ಕಳನ್ನು ಮರಳಿ ಭಾರತಕ್ಕೆ ತರುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರದ ವಶದಲ್ಲಿರುವ ಮಕ್ಕಳನ್ನು ಬಿಡಿಸಿಕೊಳ್ಳಲಾಗದೆ ನೊಂದು ಅಲ್ಲಿಂದ ಮರಳಿ ಭಾರತಕ್ಕೆ ಬಂದು ಮಾನಸಿಕವಾಗಿ ನೊಂದಿದ್ದ ಅನಿವಾಸಿ ಭಾರತೀಯರಾದ ಪ್ರಿಯದರ್ಶಿನಿ ಪಾಟೀಲ 2023ರ ಆ.20ರಂದು ಸವದತ್ತಿಯ ನವಿಲುತೀರ್ಥ ಅಣೆಕಟ್ಟಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸುದ್ದಿ ಸಾಕಷ್ಟು ವೈರಲ್‌ ಆಗಿತ್ತು.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಎಂಜಿನಿಯರ್‌ ಆಗಿ ಪ್ರಿಯದರ್ಶಿನಿ ಪಾಟೀಲ ಪತಿ ಲಿಂಗರಾಜ ಪಾಟೀಲರೊಂದಿಗೆ ವಾಸವಾಗಿದ್ದರು. ಪ್ರಿಯದರ್ಶಿನಿ ಅವರಿಗೆ ಅಮೃತ್ಯ ಹಾಗೂ ಅಪರಾಜಿತಾ ಎಂಬ ಮಕ್ಕಳಿದ್ದು, ಪುತ್ರ ಅಮೃತ್ಯನಿಗೆ ಕರುಳಿಗೆ ಸಂಬಂಧಿಸಿದ ರೋಗವಿತ್ತು. ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಿಂದ ಅಡ್ಡಪರಿಣಾಮ ಆಗಿದ್ದ ಕಾರಣ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಪ್ರಿಯದರ್ಶಿನಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ವೈದ್ಯರು ಈಕೆಯ ವಿರುದ್ಧವೇ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂಬ ಆರೋಪ ಮಾಡಿದ್ದರು. ಆಗ ಅಲ್ಲಿನ ಸರ್ಕಾರ ಇಬ್ಬರೂ ಮಕ್ಕಳನ್ನು ವಶಕ್ಕೆ ಪಡೆದಿತ್ತು. ಸಾಕಷ್ಟು ಕಾನೂನು ಹೋರಾಟ ಮಾಡಿದರೂ ಮಕ್ಕಳನ್ನು ಮರಳಿ ಪಡೆಯಲು ಸಾಧ್ಯವಾಗದಿದ್ದಾಗ ಮಾನಸಿಕವಾಗಿ ನೊಂದಿದ್ದ ಪ್ರಿಯದರ್ಶನಿ ಧಾರವಾಡಕ್ಕೆ ಬಂದು ನವಿಲು ತೀರ್ಥದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಜೊತೆಗೆ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಪತ್ರ ಸಹ ಬರೆದಿದ್ದರು.

ಪುತ್ರಿಯನ್ನು ಕಳೆದುಕೊಂಡಿದ್ದ ಸುಬ್ಬರಾಯ ದೇಸಾಯಿ ಅವರು ಕೊನೆಪಕ್ಷ ಮೊಮ್ಮಕ್ಕಳನ್ನಾದರೂ ಭಾರತಕ್ಕೆ ಕರೆ ತರಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೊರೆ ಹೋಗಿದ್ದರು. ಸತತ ಪ್ರಯತ್ನದ ನಂತರ ಇದೀಗ ಸುಬ್ಬರಾಯ ದೇಸಾಯಿ ಅವರಿಗೆ ಮೊಮ್ಮಕ್ಕಳು ದೊರಕಿದ್ದಾರೆ. ಜೋಶಿಗೆ ಧನ್ಯವಾದ: ದೇಸಾಯಿ ಕುಟುಂಬ ಹಾಗೂ ಅವರ ಮೊಮ್ಮಕ್ಕಳು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಶನಿವಾರ ಭೇಟಿ ಮಾಡಿ ಅವರ ಸಹಾಯಕ್ಕೆ ಧನ್ಯವಾದ ಅರ್ಪಿಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಿಯದರ್ಶಿನಿ ಅವರ ಸಾವು ಆದಾಗ ಅವರ ಮಕ್ಕಳು ಆಸ್ಟ್ರೇಲಿಯಾದಲ್ಲಿ ಇದ್ದರು. ಅವರನ್ನು ಭಾರತಕ್ಕೆ ಕರೆ ತರಲು ಕೆಲ ಕಾನೂನು ತೊಡಕುಗಳು ಇದ್ದವು. ಹೀಗಾಗಿ ವಿದೇಶಾಂಗ ಸಚಿವ ಜೈಶಂಕರ ಜತೆಗೆ ಸುದೀರ್ಘವಾಗಿ ಮಾತುಕತೆ ನಡೆಸಲಾಗಿತ್ತು. ಭಾರತದ ಹೈಕಮಿಶನ್ ಹಾಗೂ ಆಸ್ಟ್ರೇಲಿಯಾದ ಹೈಕಮಿಶನ್‌ ಮಾತುಕತೆ ಮೂಲಕ ಇದೀಗ ದೇಸಾಯಿ ಕುಟುಂಬದಲ್ಲಿ ಸಂತೋಷ ಕಂಡು ಬಂದಿದೆ ಎಂದರು.