ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ‘ನಾನ್ ವೆಜ್’ ತುಳು ಸಿನಿಮಾ ಫೆ.6ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 99 ರು.ಗೆ
ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ‘ನಾನ್ ವೆಜ್’ ತುಳು ಸಿನಿಮಾ ಫೆ.6ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 99 ರು.ಗೆ ನೋಡಬಹುದಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ದುಬಾರಿ ಹಣ ಸಿನಿಮಾ ನೋಡಲು ಸಾಧ್ಯವಾಗದವರು ಇಂಥ ಉತ್ತಮ ಸಿನಿಮಾ ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರು. ಟಿಕೆಟ್ ನಿಗದಿಪಡಿಸಿದ್ದು, ಇದು ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಉಂಟುಮಾಡಿದೆ. ಸಿಂಗಲ್ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್‌ಗಳಲ್ಲಿ ನೋಡುವಂತಹ ಅವಕಾಶ ನೀಡಿದ್ದೇವೆ ಎಂದು ಹೇಳಿದರು.
ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ ನಾನ್‌ವೆಜ್ ಭಿನ್ನ ಕಥಾವಸ್ತುವನ್ನು ಹೊಂದಿದೆ. ‘ಸು ಫ್ರಂ ಸೋ’ ಸಿನಿಮಾದ ಹೆಚ್ಚಿನ ಕಲಾವಿದರು ನಾನ್‌ವೆಜ್ ಸಿನಿಮಾದಲ್ಲೂ ಇದ್ದಾರೆ. ಪ್ರಮುಖ ಪಾತ್ರದಲ್ಲಿ ಪ್ರಕಾಶ್ ತೂಮಿನಾಡು, ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ನಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ. ಜತೆಗೆ ಕುಸೇಲ್ದರಸೆ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎಂದೇ ಗುರುತಿಸಿಕೊಂಡಿರುವ ಅಥರ್ವ ಪ್ರಕಾಶ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂದವರು ಹೇಳಿದರು.ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ಮಾತನಾಡಿ, ಚಿತ್ರದಲ್ಲಿ ಹಾಸ್ಯ, ಮನರಂಜನೆಗೆ ಕೊರತೆ ಇಲ್ಲ. ಕಥೆಯೂ ಅದ್ಭುತವಾಗಿದೆ. ನಾನ್‌ವೆಜ್ ವಿಷಯವೇ ಎಲ್ಲರಿಗೂ ಖುಷಿ ಕೊಡಲಿದೆ ಎಂದು ಹೇಳಿದರು.
ನಾಯಕನಟ ಅಥರ್ವ ಪ್ರಕಾಶ್ ಮಾತಾಡಿ, ನಾನ್‌ವೆಜ್ ಸಿನಿಮಾ ಟೀಸರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾವಂತೂ ಭರ್ಜರಿ ಮನರಂಜನೆ ನೀಡಲಿದೆ ಎಂದರು.ವಿಸ್ಮಯ ವಿನಾಯಕ್, ಬಾಳ ಜಗನ್ನಾಥ ಶೆಟ್ಟಿ ಮತ್ತಿತರರು ಇದ್ದರು.