ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು, ವಿದ್ಯಾರ್ಥಿಗಳು ಅನುತ್ತೀರ್ಣರಾಗದಂತೆ ನೋಡಿಕೊಳ್ಳಲು ಜಿಲ್ಲೆಯಲ್ಲಿ "ರೂಢಿ ಪರೀಕ್ಷೆ " ಎಂಬ ಹೊಸ ಪ್ರಯೋಗ ನಡೆಸುತ್ತಿದೆ. ಇದರಿಂದ ಸಾಕಷ್ಟು ಮಕ್ಕಳು ಸುಧಾರಣೆ ಕಂಡಿದ್ದು, ಫಲಿತಾಂಶ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ವಿಶ್ವಾಸ ಶಿಕ್ಷಣ ಇಲಾಖೆ ಹೊಂದಿದೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರತಿ ವರ್ಷ ಹೆಚ್ಚಳವಾಗಬೇಕು. ಅನುತ್ತೀರ್ಣವಾಗುವವರ ಸಂಖ್ಯೆ ಕಡಿಮೆಯಾಗಬೇಕು ಎಂಬುದು ಎಲ್ಲರ ಅಭಿಲಾಷೆ. ಆದರೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಉತ್ತೀರ್ಣವಾಗುವುದು ಕಷ್ಟಸಾಧ್ಯವಾಗುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಹಿಂದುಳಿದ ಮಕ್ಕಳು ಪಾಸಾಗುವ ಹಂತಕ್ಕೆ ತರುವುದು ಸಮಸ್ಯೆಯಾಗುತ್ತಿದೆ ಎಂಬ ಗೋಳು ಶಿಕ್ಷಕರದ್ದಾಗಿರುತ್ತದೆ. ಅದಕ್ಕಾಗಿ ಅಕ್ಟೋಬರ್‌ನಿಂದ ಜಿಲ್ಲೆಯಲ್ಲಿ ರೂಢಿ ಪರೀಕ್ಷೆ ನಡೆಸಲಾಗುತ್ತಿದೆ.
ಏನಿದು ರೂಢಿ ಪರೀಕ್ಷೆ?ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 29929. ಇದರಲ್ಲಿ ಕಲಿಕೆಯಲ್ಲಿ ತೀರಾ ಹಿಂದುಳಿದ ಮಕ್ಕಳ ಸಂಖ್ಯೆ 7500 ಎಂದು ಇಲಾಖೆ ಗುರುತಿಸಿದೆ. ಈ ಮಕ್ಕಳಿಗೆ ಪ್ರತಿದಿನ ಪರೀಕ್ಷೆ ಬರೆಯಿಸುವುದೇ ರೂಢಿ ಪರೀಕ್ಷೆ.
ರೂಢಿ ಪರೀಕ್ಷೆಗಾಗಿ ವಿಷಯ ತಜ್ಞರಿಂದ ಪ್ರತಿ ವಿಷಯದ ಮೇಲೆ 60 ಅಂಕಗಳ ಸಂಭವನೀಯ ಪ್ರಶ್ನೆಗಳ ಪಟ್ಟಿ ಮಾಡಿ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ.ಈ ಪ್ರಶ್ನೆ ಪತ್ರಿಕೆಗಳನ್ನು ಕಲಿಕೆಯಲ್ಲಿ ಹಿಂದುಳಿದವರು ಎಂದು ಗುರುತಿಸಲಾದ ಮಕ್ಕಳಿಗೆ ನೀಡಲಾಗಿದೆ. ಅದನ್ನು ಪ್ರತಿದಿನ ಈ ಮಕ್ಕಳು ಬರೆದುಕೊಂಡು ಬರಬೇಕು. ನಿರಂತರವಾಗಿ ಅದೇ ಪ್ರಶ್ನೆಗಳಿಗೆ ಉತ್ತರ ಬರೆಯುವುದರಿಂದ ಆ ಮಕ್ಕಳಿಗೆ ಆ ಉತ್ತರಗಳು ನೆನಪಲ್ಲಿ ಉಳಿಯುತ್ತವೆ. ಅವರು ಪುಸ್ತಕ ನೋಡಿ ಬರೆದುಕೊಂಡು ಬರಬಹುದು. ಆ ಮಗುವಿನ ಉತ್ತರ ಪತ್ರಿಕೆಯನ್ನು ಪ್ರತಿದಿನ ಆ ವಿಷಯ ಶಿಕ್ಷಕರು ತಿದ್ದಿ ಮತ್ತೆ ಏನು ತಪ್ಪಾಗಿದೆ ನೋಡಿಕೊಂಡು ಮಕ್ಕಳಿಗೆ ಮತ್ತೆ ಮಾರ್ಗದರ್ಶನ ಮಾಡಬೇಕು. ಹೀಗೆ ಪ್ರತಿದಿನ ಅದೇ ಪ್ರಶ್ನೆ ಪತ್ರಿಕೆಯನ್ನು ಬರೆದುಕೊಂಡು ಬರುವಂತೆ ಸೂಚಿಸಲಾಗಿದೆ.
ಮಕ್ಕಳಲ್ಲಿ ಸುಧಾರಣೆಈ ಕೆಲಸ ಅಕ್ಟೋಬರ್ ರಜೆ ಮುಗಿದ ನಂತರದಿಂದ ಪ್ರಾರಂಭವಾಗಿದೆ. ಇದರಿಂದ ಮಕ್ಕಳು ಸಾಕಷ್ಟು ಸುಧಾರಣೆ ಕಂಡು ಬರುತ್ತಿದೆ. ಕಲಿಕೆಯಲ್ಲಿ ತೀರಾ ಹಿಂದುಳಿದವರ ಸಂಖ್ಯೆ ಇದೀಗ 7500ರಿಂದ 2800ಕ್ಕೆ ಇಳಿದಿದೆ. ಇನ್ನು ಒಂದು ತಿಂಗಳು ಕಳೆದರೆ ಇವರು ಕೂಡ ಪಾಸಾಗುವ ಹಂತಕ್ಕೆ ಬರುತ್ತಾರೆ. ಯಾರೂ ಅನುತ್ತೀರ್ಣರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ರೀತಿ ಪ್ರಯೋಗ ಮಾಡಲಾಗುತ್ತಿದೆ.
ಇದರೊಂದಿಗೆ ಹಿಂದುಳಿದ ವಿದ್ಯಾರ್ಥಿಗಳಿಗಾಗಿಯೇ ಪರೀಕ್ಷೆ ಭಯ ಹೋಗಲಾಡಿಸಲು ಈಗಾಗಲೇ ಎರಡೆರಡು ಕಾರ್ಯಾಗಾರ ನಡೆಸಲಾಗಿದೆ. ಪ್ರಶ್ನೆಗಳು ಯಾವ ರೀತಿ ಬರುತ್ತವೆ. ಎಷ್ಟು ಅಂಕಗಳ ಪ್ರಶ್ನೆ ಎಷ್ಟು ಉತ್ತರ ಬರೆಯಬೇಕು ಎಂಬುದನ್ನು ತಿಳಿಸಲಾಗುತ್ತಿದೆ. ವಿಶೇಷ ವರ್ಗ ನಡೆಸಿ ಮಕ್ಕಳಲ್ಲಿನ ಕಲಿಕಾ ಮಟ್ಟ ಹೆಚ್ಚಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.ವೈಯಕ್ತಿಕ ವೇಳಾಪಟ್ಟಿ
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ರೂಢಿ ಪರೀಕ್ಷೆ ನಡೆಸುವುದರ ಜೊತೆಗೆ ಎಲ್ಲ ಮಕ್ಕಳಿಗೆ ವೈಯಕ್ತಿಕ ವೇಳಾಪಟ್ಟಿ ಸಿದ್ಧಪಡಿಸಿ ನೀಡಲಾಗಿದೆ. ಆ ವೇಳಾ ಪಟ್ಟಿಯಂತೆ ಅಧ್ಯಯನ ಮಾಡುವಂತೆ ಮಕ್ಕಳಿಗೆ ತಿಳಿಸಲಾಗುತ್ತಿದೆ.ಹೀಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಉತ್ತಮಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವಿಭಿನ್ನ ರೀತಿಯ ಪ್ರಯೋಗಗಳನ್ನಂತೂ ಮಾಡುತ್ತಿರುವುದು ಸತ್ಯ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಈ ವರ್ಷ ರೂಢಿ ಪರೀಕ್ಷೆ ಎಂಬ ಕಲ್ಪನೆಯೊಂದಿಗೆ ಹೊಸ ಪ್ರಯೋಗ ಮಾಡಲಾಗಿದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಗುಣಮಟ್ಟ ಸುಧಾರಣೆ ಕಂಡು ಬರುತ್ತಿದೆ. ಇದರೊಂದಿಗೆ ವಿಶೇಷ ತರಗತಿ, ತಾಲೂಕುವಾರು ಕಾರ್ಯಾಗಾರ, ವೈಯಕ್ತಿಕ ವೇಳಾಪಟ್ಟಿ ಹೀಗೆ ಫಲಿತಾಂಶ ಹೆಚ್ಚಿಸಲು ಯೋಜಿಸಲಾಗಿದೆ. ಇದರಲ್ಲಿ ಯಶಸ್ಸು ಕೂಡ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.