ಈಶಾನ್ಯ ಪದವೀಧರ ಕ್ಷೇತ್ರ: 2ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ ಮುನ್ನಡೆ

| Published : Jun 07 2024, 12:15 AM IST

ಈಶಾನ್ಯ ಪದವೀಧರ ಕ್ಷೇತ್ರ: 2ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ ಮುನ್ನಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ಕಾರ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ, ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದಲ್ಲಿ ಬೆ.8ರಿಂದ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ಕಾರ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ, ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದಲ್ಲಿ ಬೆ.8ರಿಂದ ಆರಂಭವಾಗಿದೆ.

ಒಟ್ಟು ಚಲಾವಣೆಯಾದ 1,09,082 ಮತಗಳ ಪೈಕಿ ಒಟ್ಟಾರೆ 27,981 ಮತಗಳ ಎಣಿಕೆ ಮುಕ್ತಾಯವಾಗಿದೆ. ಇದುವರೆಗೂ 2 ಸುತ್ತುಗಳಲ್ಲಿ ನಡೆದ ಮತ ಎಣಿಕೆಯಿಂದ ಹೊರಬಿದ್ದಿರುವ ಫಲಿತಾಂಶದಲ್ಲಿ ಬಿಜೆಪಿ ಉಮೇದುವಾರ ಮರನಾಥ ಪಾಟೀಲ್‌ 309 ಮತಗಳಿಂದ ಮುಂದಿದ್ದಾರೆ.

ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ, ಎರಡನೇ ಸುತ್ತಿನ ಅಂತ್ಯಕ್ಕೆ ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಪಾಟೀಲ ಅವರು 8,732 ಮತಗಳು ಪಡೆದಿದ್ದು, 309 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ 8,423 ಮತ್ತು ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 6,163 ಮತ ಪಡೆದಿದ್ದಾರೆ. 3,429 ಮತಗಳು ತಿರಸ್ಕೃತವಾಗಿದ್ದು ಇದೂವರೆಗೆ ಒಟ್ಟಾರೆ 27,981 ಮತಗಳ ಎಣಿಕೆ ಮುಕ್ತಾಯವಾಗಿದೆ. ಮತ ಎಣಿಕೆ ಮುಂದುವರಿದಿದ್ದು ತಡರಾತ್ರಿ ಅಥವಾ ಬೆಳಗಿನ ಜಾವ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.

ಕಲಬುರಗಿ, ಬೀದರ, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳ 72,691 ಪುರುಷ ಮತದಾರರು, 36,388 ಮಹಿಳಾ ಮತದಾರರು ಸೇರಿ ಒಟ್ಟು 1,09,082 ಮತದಾರರು ಮತ ಚಲಾಯಿಸಿದ್ದಾರೆ.

ಮೊದಲಿಗೆ ಚಲಾವಣೆಯಾದ ಮತಗಳಲ್ಲಿ ಶೇ 50 +1 ಮತ ಪಡೆದವರು ವಿಜೇತರಾಗಲಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಮತ ಎಣಿಕೆಯ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಚುನಾವಣಾ ಅಧಿಕಾರಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಹಾಗೂ ಚುನಾವಣೆ ವೀಕ್ಷಕ ಎಂ ಮಹೇಶ್ವರ ರಾವ ಹಾಗೂ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆಯಲಾಯಿತು.ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಕಲಬುರಗಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಮುಂತಾದವರು ಉಪಸ್ಥಿತರಿದ್ದರು.

ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧಿಸಲಾಗಿದೆ.

ಎಣಿಕೆ ಹೀಗಿರುತ್ತದೆ ನೋಡಿ: ಈಶಾನ್ಯ ಪದವೀಧರ ಮತ ಎಣಿಕೆ ಹಿನ್ನೆಲೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಪೋಸ್ಟಲ್ ಬಾಕ್ಸ್ ಓಪನ್ ಮಾಡಿ ಮತಪತ್ರಗಳ ರ್ಯಾಂಡಮೈಜೇಷನ್ ಮಾಡಿ ತಲಾ 25 ಮತಗಳ ಬಂಡಲ್ ಕಟ್ಟುವ ಕಾರ್ಯ ಆರಂಭಿಸಿ ಅದು ಸಂಜೆ 4 ಗಂಟೆಯವರೆಗೂ ಸಾಗಿ, ಸಂಜೆ 4 ಗಂಟೆಗೆ 14 ಟೇಬಲ್ ಮೂಲಕ ಮತ ಎಣಿಕೆ ಕಾರ್ಯ ಆರಂಭವಾಯ್ತು.

ಚಲಾವಣೆಯಾದ 1,09,082 ಮತಗಳ ಎಣಿಕೆ ಕಾರ್ಯ ಮುಗಿದ ಮೇಲೆ ಪುರಸ್ಕೃತ ಮತ್ತು ತಿರಸ್ಕೃತ ಮತಗಳು ಹಾಗೂ ಅಭ್ಯರ್ಥಿವಾರು ಪ್ರಥಮ ಪ್ರಾಶಸ್ತ್ಯ ಪಡೆದ ಮತಗಳ ಮಾಹಿತಿ ಲಭ್ಯವಾಗಲಿದೆ.

ನಂತರ ವಿನ್ನಿಂಗ್ ಕೋಟಾ ಶೇ.50+1 ಫಿಕ್ಸ್ ಮಾಡಲಾಗುತ್ತದೆ. ತದನಂತರ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ವಿನ್ನಿಂಗ್ ಕೋಟಾ ನಿಯಮದಂತೆ ಶೇ.50+1 ಮತ ಯಾವುದೇ ಅಭ್ಯರ್ಥಿ ಪಡೆದಿದ್ದಲ್ಲಿ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆ.

ಒಂದು ವೇಳೆ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಯಾವುದೇ ಅಭ್ಯರ್ಥಿಗೆ ಶೇ.50+1 ಮತ ಸಿಗದಿದ್ದಲ್ಲಿ ಆಗ ಎಲಿಮಿನೇಟ್ ರೌಂಡ್ ಆರಂಭವಾಗಿ ಅತ್ಯಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಆರಂಭವಾಗಲಿದೆ. ಗೆಲುವಿನ ಟ್ರೆಂಡ್ಸ್ ಮಾಹಿತಿ ತಡರಾತ್ರಿ ಲಭ್ಯವಾಗುವ ನಿರೀಕ್ಷೆ ಹೊಂದಲಾಗಿದೆ.