ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸ್ಫರ್ಧಾ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕ್ಷೇತ್ರದ ಚುನಾವಣಾಧಿಕಾರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಅಭ್ಯರ್ಥಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸ್ಫರ್ಧಾ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕ್ಷೇತ್ರದ ಚುನಾವಣಾಧಿಕಾರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಅಭ್ಯರ್ಥಿಗಳಿಗೆ ಸೂಚಿಸಿದರು.

ಚುನಾವಣೆ ಸಂಬಂಧ ಅಭ್ಯರ್ಥಿಗಳ ಸಭೆ ನಡೆಸಿದ ಅವರು, ಎಂ.ಸಿ.ಸಿ. ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯ್ತಿ ಸಿ.ಇ.ಓ ಅವರನ್ನು ಎಂ.ಸಿ.ಸಿ. ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಅವರ ಕ್ಷೇತ್ರ ವ್ಯಾಪ್ತಿ ಓಡಾಟಕ್ಕೆ ವಾಹನ ಪರವಾನಿಗೆ ಚುನಾವಣಾಧಿಕಾರಿಗಳ ಕಚೇರಿಯಿಂದ ನೀಡಲಾಗುವುದು. ಇನ್ನೂ ಹೆಚ್ಚಿನ ವಾಹನದ ಅವಶ್ಯಕತೆ ಇದ್ದಲ್ಲಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವಂತೆ ತಿಳಿಸಿದರು.

ಕ್ಷೇತ್ರದಾದ್ಯಂತ 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದು, ಮತದಾರರ ಪಟ್ಟಿಯನ್ನು https://www.rcgulbarga.gov.in ನಲ್ಲಿ ಪ್ರಕಟಿಸಿದ್ದು, ಮತದಾರರು ಇದನ್ನು ವೀಕ್ಷಿಸಬಹುದಾಗಿದೆ. ಕಲಬುರಗಿಯಲ್ಲಿ 1 ರಿಂದ 41, ಬೀದರನಲ್ಲಿ 42 ರಿಂದ 64, ಬಳ್ಳಾರಿಯಲ್ಲಿ 65 ರಿಂದ 80, ರಾಯಚೂರಲ್ಲಿ 81 ರಿಂದ 109, ಕೊಪ್ಪಳದಲ್ಲಿ 110 ರಿಂದ 132, ಯಾದಗಿರಿಯಲ್ಲಿ 133 ರಿಂದ 145 ಹಾಗೂ ವಿಜಯ ನಗರ ಜಿಲ್ಲೆಯಲ್ಲಿ 146 ರಿಂದ 160 ಸೇರಿ ಒಟ್ಟಾರೆ 160 ಭಾಗಗಳ ಜೊತೆಗೆ 35 ಹೆಚ್ಚುವರಿ ಮತಗಟ್ಟೆ ಸೇರಿ ಕ್ಷೇತ್ರದಾದ್ಯಂತ 195 ಮತದಾನ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಮೇಲೆ ಕಿಮಿನಲ್ ಮೊಕದಮ್ಮೆ ಕುರಿತು ಪ್ರಚೂರಪಡಿಸಿ ಚುನಾವಣಾಧಿಕಾರಿಗೆ ಮಾಹಿತಿ ನೀಡಬೇಕು. ಇನ್ನು ಪಾಂಪ್ಲೆಟ್ಸ್, ವಾಟ್ಸ್ಯಾಪ್ ಸಂದೇಶ, ಬ್ಯಾನರ್ ವಿವರಗಳನ್ನು ಎಂ.ಸಿ.ಎಂ.ಸಿ. ಸಮಿತಿಯಿಂದ ಅನುಮೋದನೆ ಪಡೆಯಬೇಕು. ಮತದಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕ್ಯೂ.ಆರ್. ಕೋಡ್ ಹೊಂದಿರುವ ವೋಟರ್ ಸ್ಲಿಪ್ ಮತದಾರರಿಗೆ ವಿತರಿಸಲಾಗುವುದು. ವೋಟರ್ ಐ.ಡಿ. ಇಲ್ಲದೆ 14 ಪರ್ಯಾಯ ದಾಖಲೆ ತೋರಿಸಿ ಮತ ಚಲಾಯಿಸಬಹುದಾಗಿದೆ. ಎಲ್ಲಾ ಮತದಾನ ಕೇಂದ್ರಗಳಿಗೆ ಮೈಕ್ರೋ ವೀಕ್ಷರನ್ನು ನೇಮಿಸಲಾಗುತ್ತಿದ್ದು, ಅಗತ್ಯವಿರುವ ಕಡೆ ವೆಬ್‍ಕಾಸ್ಟಿಂಗ್ ಸಹ ಮಾಡಲಾಗುತ್ತದೆ. ಇನ್ನೂ ಪೋಲಿಗ್ ಸಿಬ್ಬಂದಿಗಳಿಗೆ ಈಗಾಗಲೆ ಜಿಲ್ಲಾ ಹಂತದಲ್ಲಿ ತರಬೇತಿ ನೀಡಲು ಸೂಚಿಸಿದೆ ಎಂದು ಕೃಷ್ಣ ಭಾಜಪೇಯಿ ತಿಳಿಸಿದರು.

ಗುಲ್ಬರ್ಗ ವಿ.ವಿ.ಯಲ್ಲಿ ಮತ ಎಣಿಕೆ: ಗುಲಬರ್ಗಾ ವಿ.ವಿ. ಹೇಮರೆಡ್ಡಿ ಮಲ್ಲಮ್ಮ ಸಂಶೋಧನಾ ಕೇಂದ್ರ ಕಟ್ಟದಲ್ಲಿ ಜೂನ್ 6 ರಂದು ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಈಗಾಗಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಭ್ಯರ್ಥಿಗಳಿಗೆ ಆರ್.ಸಿ. ಕೃಷ್ಣ ಭಾಜಪೇಯಿ ತಿಳಿಸಿದರು. ಸಭೆಯಲ್ಲಿ ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಸೇರಿದಂತೆ ಅಭ್ಯರ್ಥಿಗಳ ಇದ್ದರು.