ಸಾರಾಂಶ
ಕಾರವಾರ: ಬಹುಭಾಷೆ, ಬಹು ಸಂಸ್ಕೃತಿಯಿಂದ ಕೂಡಿದ ಕಾರವಾರದಲ್ಲಿ ಕನ್ನಡ, ಪ್ರವಾಸೋದ್ಯಮ, ಅಭಿವೃದ್ಧಿ, ಉದ್ಯೋಗ ಎಲ್ಲದರಲ್ಲೂ ಬೆಳವಣಿಗೆಯಾಗಲಿ ಎಂದು ಸಮ್ಮೇಳನಾಧ್ಯಕ್ಷೆ ಪ್ರೇಮಾ ಟಿ.ಎಂ.ಆರ್. ಆಶಿಸಿದರು.ನಗರದ ದೈವಜ್ಞ ಸಭಾಂಗಣದಲ್ಲಿ ನಡೆದ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕಾನೂನುಬದ್ಧಗೊಳಿಸಿದ್ದರೆ ಆಗ ಎಲ್ಲರೂ ಕನ್ನಡ ಶಾಲೆಗಳಿಗೆ ಹೋಗುವುದು ಅನಿವಾರ್ಯವಾಗುತ್ತದೆ. ಅದು ಬಿಟ್ಟು ನಾವು ಶಹರದವರು ಉಳ್ಳವರು ನಮ್ಮ ಮಕ್ಕಳು ಬೆಚ್ಚಗಿದ್ದಾರೆ, ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಎನ್ನುವುದು ಯಾವ ನ್ಯಾಯ? ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ಇರಬೇಕೆಂದು ದೊಡ್ಡಮಟ್ಟದ ಹೋರಾಟದ ಅವಶ್ಯಕತೆ ಇಂದಿನದ್ದಾಗಿದೆ.
ನಮಗೆ ನಿಜವಾಗಿಯೂ ಕನ್ನಡ ಉಳಿಸುವ ಮನಸ್ಸಿದೆಯೇ? ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಎಂಬುದನ್ನು ಕಡ್ಡಾಯಗೊಳಿಸಬೇಕು. ಪ್ರಾಥಮಿಕ ಶಿಕ್ಷಣ ಏಕರೀತಿ, ಏಕ ಭಾಷೆ ಎಂಬ ನೀತಿ ಕಾನೂನು ಬದ್ಧವಾಗಲಿ ಎಂದರು.ಕಾರವಾರ, ದೇಶಕ್ಕೆ ಮಾದರಿ ಎನಿಸುವಷ್ಟು ಸೌಹಾರ್ದತೆ, ಭಾವೈಕ್ಯತೆಯನ್ನು ಬೆಳೆಸಿಕೊಂಡ ಒಂದು ತಾಲೂಕಾಗಿದೆ. ಇಲ್ಲಿ ಬಹುತೇಕ ಎಲ್ಲ ಮತ ಧರ್ಮ, ಜಾತಿಗಳ ಜನರಿದ್ದಾರೆ. ಎಣಿಸಲಾಗದಷ್ಟು ಉಪಜಾತಿಗಳು ಇಲ್ಲಿವೆ. ಭಾರತಾದ್ಯಂತ ಎಲ್ಲ ರಾಜ್ಯಗಳ ಜನ ಇಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಎಲ್ಲಿಯೂ ಒಡಕಿಲ್ಲ, ಗಲಭೆ ದಂಗೆಗಳ ಹೆಸರಿಲ್ಲ, ಧರ್ಮ ಸಂಘರ್ಷವನ್ನು ನೋಡಿದ್ದಿಲ್ಲ. ಬಹುಶಃ ಈ ಗಾಳಿ, ಈ ನೀರು, ಈ ನೆಲ ಸೌಹಾರ್ದತೆಗೆ ಹೇಳಿ ಮಾಡಿಸಿದ್ದಿರಬಹುದು. ಇದೊಂದು ಪುಟ್ಟ ಭಾರತವಾದರೂ ತನ್ನತನವಾದ ಜಾತ್ಯತೀತ, ಧರ್ಮಾತೀತ ಭಾವನೆಗಳನ್ನು ಈ ನೆಲದ ಸೌಹಾರ್ದತೆಯ ಹುಟ್ಟುಗುಣವನ್ನು ಬಿಟ್ಟುಕೊಡದೆ ಇಂದಿಗೂ ಉಳಿಸಿಕೊಂಡು ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡವೇನಾದರೂ ಕಾರವಾರದಲ್ಲಿ ಉಸಿರಾಡುತ್ತಿದೆ ಅಂದರೆ ಅದು ಶ್ರಮಜೀವಿಗಳಾದ ಮೀನುಗಾರರು, ಹಾಲಕ್ಕಿಗಳು, ಕೋಮಾರಪಂತ, ಗುನಗಿ ಜನಾಂಗ, ಅದರ ಜತೆಗೆ ಉತ್ತರ ಕರ್ನಾಟಕದಿಂದ ವಲಸೆ ಬಂದು ಇಲ್ಲಿ ಬದುಕು ಹಾಸಿಕೊಂಡ ಕಟ್ಟಡದ ಕೆಲಸಗಾರರಿಂದಾಗಿದೆ. ನಮ್ಮ ಭಾಷೆಗೆ ಸರಿಸುಮಾರು ಎರಡೂವರೆ ಸಹಸ್ರ ವರ್ಷಗಳ ಇತಿಹಾಸವಿದೆ. ಕನ್ನಡಕ್ಕೆ ತನ್ನದೇ ಆದ ಘನತೆ ಇದೆ ಸಮೃದ್ಧ ಸಂಸ್ಕೃತಿ ಪರಂಪರೆ ಇದೆ. ಸೊಗಸಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳ ಹೆಗ್ಗಳಿಕೆ ಇದೆ. ಎಲ್ಲಕ್ಕೂ ಮೀರಿ ಸ್ವಾಭಿಮಾನದ ಶಿಖರವಿದೆ. ಕಲಿಯುವುದಕ್ಕೆ ನೂರು ಭಾಷೆ ಇರಬಹುದು. ಆದರೆ ಎದೆಯ ಭಾಷೆ ಕನ್ನಡವಾಗಿರಲಿ ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಎರಡು ವರ್ಷದ ಹಿಂದೆ ನಡೆಸಿದ ಮೂರು ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನ ಹಣ ಬರಬೇಕಿದೆ. ಹಣ ಬರದೇ ಇದ್ದರೂ ಕಳೆದ ವರ್ಷ ಮೂರು ತಾಲೂಕಿನಲ್ಲಿ ಸಮ್ಮೇಳನ ಮಾಡಲಾಗಿದೆ. ಈ ಬಾರಿ ಹಣ ಬರುವ ನಿರೀಕ್ಷೆ ಕಡಿಮೆಯಿದೆ. ಆದರೂ ಎಲ್ಲ ಕಡೆ ಸಮ್ಮೇಳನ ಮಾಡಲು ಜಿಲ್ಲಾ ಸಮಿತಿಯಿಂದ ಕೋರಲಾಗಿದೆ. ಕಾಡಿಬೇಡಿ ಏಕೆ ಸಮ್ಮೇಳನ ಮಾಡಬೇಕು ಎಂದು ಕೇಳುವವರೂ ಇದ್ದಾರೆ. ಕನ್ನಡಮ್ಮನ ಜಾತ್ರೆ, ಕನ್ನಡದ ಹಬ್ಬವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಮಾಡಲಾಗುತ್ತಿದೆ. ಗತಕಾಲದಲ್ಲಿ ಕವಿ- ಕಲಾವಿದರಿಗೆ ರಾಜಾಶ್ರಯವಿತ್ತು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ಆಳುವವರು ಸಹಕಾರ ನೀಡಿದರೆ ಕನ್ನಡದ ಬೆಳವಣಿಗೆ ಆಗುತ್ತದೆ ಎಂದರು.ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ, ಹಿರಿಯ ಸಾಹಿತಿ ಜಮೀರುಲ್ಲಾ ಶರೀಫ್, ಶಿವಾನಂದ ತಾಂಡೇಲ್, ಜಿ.ಡಿ. ಮನೋಜ, ಮಾಧವ ನಾಯಕ ಇದ್ದರು.ಬಹುತ್ವವನ್ನು ಸಂಭ್ರಮಿಸಿದ ಸಮ್ಮೇಳನಇಲ್ಲಿನ ಜನರು ಬಹುತ್ವವನ್ನು ಬಯಸುವವರಾಗಿದ್ದು, ಯಾವುದೇ ಕಾರಣಕ್ಕೂ ಒಂದು ಸಂಸ್ಕೃತಿ, ಸಾಹಿತ್ಯ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ವಿಶೇಷಾಧಿಕಾರಿ ಎಂ.ಜಿ. ಹೆಗಡೆ ತಿಳಿಸಿದರು.೮ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ರವೀಂದ್ರನಾಥ ಟಾಗೋರ್ ಅವರಿಗೆ ಸಂಪೂರ್ಣ ಸಾಹಿತ್ಯದ ವಸ್ತು ಸಿಕ್ಕಿರುವುದು ಕಾರವಾರದ ಮಣ್ಣಿನಲ್ಲೇ ಎಂದು ಅವರು ಹೇಳಿಕೊಂಡಿದ್ದಾರೆ. ಸಣ್ಣ ಕಡಲ ತೀರ ಅನಂತವನ್ನು ಹೇಳಿದೆ. ಈ ಸಾಹಿತ್ಯ ಸಮ್ಮೇಳನವು ಬಹುತ್ವವನ್ನು ಸಂಭ್ರಮಿಸಿದ ಸಮ್ಮೇಳನವಾಗಿದೆ ಎಂದರು.ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಪೂರ್ವ ನಗರದ ಮಿತ್ರಸಮಾಜದಿಂದ ದೈವಜ್ಞ ಸಭಾಭವನದವರೆಗೆ ಸಮ್ಮೇಳನಾಧ್ಯಕ್ಷೆ ಪ್ರೇಮಾ ಟಿ.ಎಂ.ಆರ್. ಅವರ ಮೆರವಣಿಗೆ ನಡೆಯಿತು. ಕಲಾ ತಂಡಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವರು. ಬಳಿಕ ಸೌಹಾರ್ದ ಕಾರವಾರ ಗೋಷ್ಠಿಗೆ ನ್ಯಾಯವಾದಿ ನಾಗರಾಜ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಟಿ.ಬಿ. ಹರಿಕಾಂತ ಆಶಯನುಡಿಯನ್ನಾಡಿದರು. ಬಹುಭಾಷಾ ಕವಿಗೋಷ್ಠಿಗೆ ಕಲಾವಿದ ವಸಂತ ಬಾಂದೇಕರ ಅಧ್ಯಕ್ಷತೆವಹಿಸಿದ್ದರು. ಕವಿಯಿತ್ರಿ ಅಕ್ಷತಾ ಕೃಷ್ಣಮೂರ್ತಿ ಆಶಯನುಡಿಯನ್ನಾಡಿದರು.