ಉತ್ತರ ಕರ್ನಾಟಕದಲ್ಲಿ ಪ್ರತಿ ಚಳಿಗಾಲದ ಅಧಿವೇಶನದಲ್ಲಿ ಕಿತ್ತೂರು, ಕಲ್ಯಾಣ ಕರ್ನಾಟಕದ ಜನರು ತುಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಮ್ಮ ಭಾಗ್ಯದ ಬಾಗಿಲು ತೆರೆಯಲಿದೆ, ಭರವಸೆಯ ಮಹಾಪೂರ ಈಡೇರಿಲಿದೆ. ನಮ್ಮ ಭಾಗದ ಕಷ್ಟ-ನಷ್ಟ ಹಾಗೂ ದುಃಖಗಳು ತೀರಲಿವೆ ಎಂದು ಸಂತೋಷ ಪಡುತ್ತಾರೆ. ಆದರೆ, ಇಲ್ಲಿ ಚರ್ಚೆಯಾಗಿದೆಯೇ ಹೊರತು ಯಾವ ಭರವಸೆ, ಕಾರ್ಯಗಳು ನಡೆಯದೇ ಅಭಿವೃದ್ಧಿಯ ಭಾಗ್ಯ ಕನಸಾಗಿಯೇ ಉಳಿದಿದೆ.

ಧಾರವಾಡ:

ಬೆಳಗಾವಿಯ ಸುವರ್ಣಸೌಧದಲ್ಲಿ ಈ ವರೆಗೆ 13 ಚಳಿಗಾಲದ ಅಧಿವೇಶನಗಳು ನಡೆದಿದ್ದು, ಕಿತ್ತೂರು ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಯಾವ ಆಶಯ, ಬೇಡಿಕೆ ಈಡೇರಿಲ್ಲ. ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಲು ಚಳಿಗಾಲದ ಅಧಿವೇಶನ ಅಕ್ಷರಶಃ ವಿಫಲವಾಗಿದೆ ಎಂದು ವಿಧಾನಸಭೆ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಗುರುವಾರ ನಡೆದ ಉತ್ತರ ಕರ್ನಾಟಕ ಚರ್ಚೆ ವೇಳೆ ಮಾತನಾಡಿರುವ ಅವರು, ಉಕ ವಿಷಯ ಬಂದಾಗ ಇರಬೇಕಾದ 12 ಸಚಿವರ ಪೈಕಿ ಮೂವರು ಮಾತ್ರ ಇದ್ದಾರೆ. ಇನ್ನು, ಅಧಿಕಾರಿಗಳಂತೂ ಇಲ್ಲವೇ ಇಲ್ಲ. ಹೀಗಾದರೆ ನಾವು ಮಾಡಿರುವ ಚರ್ಚೆಗಳು ಹೇಗೆ ತಲುಪಿ ಅವುಗಳಿಗೆ ಪರಿಹಾರ ಸಿಗುತ್ತದೆ ಎಂದು ಬೆಲ್ಲದ ಪ್ರಶ್ನಿಸಿದರು.

ಉತ್ತರ ಕರ್ನಾಟಕದಲ್ಲಿ ಪ್ರತಿ ಚಳಿಗಾಲದ ಅಧಿವೇಶನದಲ್ಲಿ ಕಿತ್ತೂರು, ಕಲ್ಯಾಣ ಕರ್ನಾಟಕದ ಜನರು ತುಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಮ್ಮ ಭಾಗ್ಯದ ಬಾಗಿಲು ತೆರೆಯಲಿದೆ, ಭರವಸೆಯ ಮಹಾಪೂರ ಈಡೇರಿಲಿದೆ. ನಮ್ಮ ಭಾಗದ ಕಷ್ಟ-ನಷ್ಟ ಹಾಗೂ ದುಃಖಗಳು ತೀರಲಿವೆ ಎಂದು ಸಂತೋಷ ಪಡುತ್ತಾರೆ. ಆದರೆ, ಇಲ್ಲಿ ಚರ್ಚೆಯಾಗಿದೆಯೇ ಹೊರತು ಯಾವ ಭರವಸೆ, ಕಾರ್ಯಗಳು ನಡೆಯದೇ ಅಭಿವೃದ್ಧಿಯ ಭಾಗ್ಯ ಕನಸಾಗಿಯೇ ಉಳಿದಿದೆ ಎಂದು ಬೆಲ್ಲದ ಖೇದ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ನಮ್ಮ ನಿರೀಕ್ಷೆ ನೀರು, ನೀರಾವರಿ, ವಿದ್ಯುತ್, ಶಿಕ್ಷಣ, ಕಾಲೇಜು, ಆಸ್ಪತ್ರೆ, ರಸ್ತೆ, ಉದ್ಯೋಗ ಸೇರಿದಂತೆ ಉತ್ತಮ ಕಾನೂನಿನ ಸುವ್ಯವಸ್ಥೆ ಇನ್ನೂ ಹುಸಿಯಾಗಿಯೇ ಇರುವುದು ನಮ್ಮೆಲ್ಲರ ದುರ್ದೈವ. ಮಕ್ಕಳು ಮತ್ತು ಮಹಿಳೆಯರು ಪೌಷ್ಟಿಕ ಆಹಾರಗಳ ಕೊರತೆಯಿಂದ ಬಳಲುತ್ತಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೃಷ್ಣ ನೀರಾವರಿ ಯೋಜನೆಗೆ ₹ 15 ಸಾವಿರ ಕೋಟಿ ವಿನಿಯೋಗ ಮಾಡುತ್ತೇವೆ ಎಂದು ಹೇಳಿದ್ದು ಈ ಸರ್ಕಾರ ಈ ಎರಡುವರೆ ವರ್ಷದಲ್ಲಿ ಕೃಷ್ಣ ನೀರಾವರಿ ಯೋಜನೆಗೆ ಖರ್ಚು ಮಾಡಿದ್ದು ಕೇವಲ ₹ 36 ಸಾವಿರ ಕೋಟಿ ಮಾತ್ರ. ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ 2404 ಹಾಸಿಗೆಗಳಿದ್ದು ರಾಜ್ಯ ಸರ್ಕಾರ ನೀಡಿದ ಅನುದಾನ ಕೇವಲ ₹ 24 ಕೋಟಿ. ಆದರೆ, 2100 ಹಾಸಿಗೆ ಇರುವ ಬೆಂಗಳೂರಿನ ಕಿಮ್ಸ್‌ಗೆ ₹ 76 ಕೋಟಿ ವೆಚ್ಚ ಮಾಡುತ್ತದೆ. ಇದು ಪ್ರಾದೇಶಿಕ ಅಸಾಮಾನತೆಯಲ್ಲವೇ? ಎಂದು ಬೆಲ್ಲದ ಸರ್ಕಾರದ ತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

1847ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ನಿಮಾನ್ಸ್ ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡಿದರೆ 1845ರಲ್ಲಿ ಧಾರವಾಡದಲ್ಲಿ ಸ್ಥಾಪನೆಯಾದ ಡಿಮಾನ್ಸ್‌ಗೆ ಅನುದಾನ ನೀಡದೆ ಇಂದಿಗೂ ಅದು ಹುಚ್ಚರ ಆಸ್ಪತ್ರೆಯಾಗಿಯೇ ಉಳಿದಿರುವುದು ವಿಷಾದನೀಯ. ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ ₹ 5000 ಕೋಟಿ ನೀಡುತ್ತೇವೆಂದು ಹೇಳಿದ್ದ ಕಾಂಗ್ರೆಸ್ ನೀಡಿರುವುದು ಶೂನ್ಯ. ಈ ವರೆಗೆ ರಾಜ್ಯದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಶೇ. 1ರಷ್ಟು ಮಾತ್ರ ಅನುದಾನ ನೀಡಿದ್ದು ಬೇಸರದ ಸಂಗತಿ. ಕಿತ್ತೂರು ಕರ್ನಾಟಕ ಭಾಗದಲ್ಲಿ 100 ಪಿಯುಸಿ ಕಾಲೇಜುಗಳು ಹಾಗೂ 100 ಮಹಿಳಾ ಪದವಿ ಕಾಲೇಜುಗಳನ್ನು ತೆರೆಯುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಹೇಳಿತ್ತು, ಎಷ್ಟು ಕಾಲೇಜು ತೆರೆಯಲಾಗಿದೆ? ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲವನ್ನು ಮುಚ್ಚಲಾಯಿತು ಎಂದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.