ಬಸ್ ನಿಲ್ದಾಣವಲ್ಲ ಅನೈರ್ಮಲ್ಯದ ತಂಗುದಾಣ

| Published : Sep 04 2025, 01:01 AM IST

ಬಸ್ ನಿಲ್ದಾಣವಲ್ಲ ಅನೈರ್ಮಲ್ಯದ ತಂಗುದಾಣ
Share this Article
  • FB
  • TW
  • Linkdin
  • Email

ಸಾರಾಂಶ

ನಿಲ್ದಾಣ ಆವರಣದ ಕಾಂಪೌಂಡ್‌ ಸುತ್ತಮುತ್ತ ಕಸ ತುಂಬಿಕೊಂಡಿದ್ದು, ದುರ್ವಾಸನೆ ಬೀರುತ್ತಿದೆ. ಕಸ ತುಂಬಿಕೊಂಡಿರುವ ಜಾಗದಲ್ಲಿ ಕಲುಷಿತ ನೀರು ನಿಂತುಕೊಂಡು ರೋಗರುಜಿನಗಳಿಗೆ ಕಾರಣವಾಗುವ ಸೊಳ್ಳೆಯಂತಹ ಕೀಟಗಳ ಉಗಮಸ್ಥಾನವಾಗಿದೆ.

ಶಂಕರಗುರು ರಬಕವಿ

ಕಲಘಟಗಿ: ಮಲೆನಾಡ ಸೆರಗಿನ ಅಂಚಿನಲ್ಲಿರುವ ಒಂದು ಪುಟ್ಟ ತಾಲೂಕು ಕಲಘಟಗಿ. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಸದಾ ಹಸಿರಾದ ಪ್ರದೇಶ. ತೊಟ್ಟಿಲು ನಗರಿಯ ಬಸ್ ನಿಲ್ದಾಣ ಅನೈರ್ಮಲ್ಯದಿಂದ ಕೂಡಿದ್ದು, ಈ ಕುರಿತು ಯಾರೂ ಗಮನಹರಿಸದಿರುವುದು ವಿಪರ್ಯಾಸವೇ ಸರಿ.

ಈ ಬಸ್ ನಿಲ್ದಾಣಕ್ಕೆ ಸುತ್ತಮುತ್ತಲಿನ ಗ್ರಾಮಗಳ ಜನರು, ಶಾಲೆಗೆ ಹೋಗುವ ಪುಟ್ಟ ಪುಟ್ಟ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಬಸ್ ನಿಲ್ದಾಣದಲ್ಲಿ ಮೂಗು ಮುಚ್ಚಿಕೊಂಡು ನಿಲ್ಲುವ ಪರಿಸ್ಥಿತಿ ಬಂದಿದೆ. ನಿಲ್ದಾಣ ಆವರಣದ ಕಾಂಪೌಂಡ್‌ ಸುತ್ತಮುತ್ತ ಕಸ ತುಂಬಿಕೊಂಡಿದ್ದು, ದುರ್ವಾಸನೆ ಬೀರುತ್ತಿದೆ. ಕಸ ತುಂಬಿಕೊಂಡಿರುವ ಜಾಗದಲ್ಲಿ ಕಲುಷಿತ ನೀರು ನಿಂತುಕೊಂಡು ರೋಗರುಜಿನಗಳಿಗೆ ಕಾರಣವಾಗುವ ಸೊಳ್ಳೆಯಂತಹ ಕೀಟಗಳ ಉಗಮಸ್ಥಾನವಾಗಿದೆ. ಬಸ್ ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಜನಸಾಮಾನ್ಯರ ಸ್ವಾಸ್ಥ್ಯ ಹಾಳಾಗುವ ಮತ್ತು ಹೊಸ ರೋಗಗಳಿಗೆ ಆಹ್ವಾನ ನೀಡುವ ಪರಿಸ್ಥಿತಿ ಬರುವುದರಲ್ಲಿ ಎರಡು ಮಾತಿಲ್ಲ.

ಆರೋಗ್ಯವೇ ಭಾಗ್ಯ ಎಂದು ಹೇಳುತ್ತೇವೆ. ಆದರೆ, ಉತ್ತಮ ಆರೋಗ್ಯ ಹೊಂದಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿಡುವುದು ಅಷ್ಟೇ ಮುಖ್ಯ. ಇಲ್ಲಿನ ನಿಲ್ದಾಣದಲ್ಲಿನ ಶೌಚಾಲಯದ ಸ್ಥಿತಿಯಂತೂ ಹೇಳತೀರದು. ಅಷ್ಟೊಂದು ಗಲೀಜಾಗಿದೆ. ಎಲ್ಲೆಂದರಲ್ಲಿ ಎಲೆ-ಅಡಿಕೆ, ಗುಟ್ಕಾ ಉಗುಳಿರುವುದು ಮುಖಕ್ಕೆ ರಾಚುವಂತಿದೆ. ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪ್ರಯಾಣಿಕರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸುವಲ್ಲಿ ಸಂಬಂಧಪಟ್ಟವರು ಕಾಳಜಿ ವಹಿಸುತ್ತಿಲ್ಲ.

ತುಂಬಾ ದಿನದಿಂದ ಬಸ್ ನಿಲ್ದಾಣದಲ್ಲಿ ಇದೇ ಸ್ಥಿತಿ ಇದ್ದು, ಯಾರೂ ಕೂಡ ಅದರ ಸ್ವಚ್ಛತೆಗೆ ಕ್ರಮಕೈಗೊಳ್ಳುತ್ತಿಲ್ಲ. ಎಲ್ಲ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ತಾಲೂಕಿನ ಕೇಂದ್ರ ಬಸ್ ನಿಲ್ದಾಣವಾಗಿದ್ದು, ಇಂತಹ ಸ್ಥಳದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಕೂಡಲೇ ಸಂಬಂಧಪಟ್ಟವರು ಸ್ವಚ್ಛತೆಗೆ ಕ್ರಮವಹಿಸಬೇಕು ಎನ್ನುತ್ತಾರೆ ಪ್ರಯಾಣಿಕರು.