Not a drop of water from Bhadra Dam can be released to the upper bank.
-ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಹಿಂಪಡೆಯಲು ಜಿಲ್ಲಾ ರೈತರ ಒಕ್ಕೂಟ ಆಗ್ರಹ
ಕನ್ನಡಪ್ರಭ ವಾರ್ತೆ ದಾವಣಗೆರೆಭದ್ರಾ ಮೇಲ್ದಂಡೆ ಯೋಜನೆಯ ಪ್ರಾಯೋಗಿಕ ಚಾಲನೆಗೆ ಭದ್ರಾ ಡ್ಯಾಂನಿಂದ 3 ಟಿಎಂಸಿ ನೀರು ಬಿಡುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ತಕ್ಷಣ ಹಿಂಪಡೆಯಲೆಂದು ಜಿಲ್ಲಾ ರೈತರ ಒಕ್ಕೂಟ ಒತ್ತಾಯಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ತಾಪಂ ಮಾಜಿ ಉಪಾಧ್ಯಕ್ಷ ಬೇತೂರು ಸಂಗನಗೌಡ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ ರೈತರು, ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯುವಂತೆ ಮನವಿ ಮಾಡಿದರು.ಒಕ್ಕೂಟ ಅಧ್ಯಕ್ಷ ಬಿ.ಎಂ.ಸತೀಶ, ಪ್ರಸ್ತುತ ದಾವಣಗೆರೆ ಜಿಲ್ಲೆಯ ರೈತರು ದಿನ ಬೆಳಗಾದರೆ ಮಳೆ ಕೊರತೆಯಿಂದ ಭದ್ರಾ ಡ್ಯಾಂ ತುಂಬಿಲ್ಲ. ಮುಂದೆ ಏನು ಎಬ ಆತಂಕದಲ್ಲಿ ದಿಕ್ಕು ತೋಚದೆ. ತಲೆ ಮೇಲೆ ಕೈಹೊತ್ತು ಕುಳಿತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡಲು ಆದೇಶಿಸಿರುವುದು ರೈತ ವಿರೋಧಿ ನಿರ್ಧಾರ ಎಂದು ದೂರಿದರು.
ಬೆಕ್ಕಿಗೆ ಚಿನ್ನಾಟ, ಇಲಿಗೆ ಪ್ರಾಣ ಸಂಕಟ ಎಂಬಂತೆ ಕಾಂಗ್ರೆಸ್ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ. ದಾವಣಗೆರೆ ರೈತರು ಪ್ರತಿನಿತ್ಯ ನೀರು ಹರಿಸುವ ವಿಚಾರದಲ್ಲಿ ಸಂಘರ್ಷಕ್ಕಿಳಿದಿದ್ದಾರೆ. ಆಗಸ್ಟ್ ಮುಗಿಯುತ್ತಿದ್ದರೂ ಭದ್ರಾ ಡ್ಯಾಂ ಭರ್ತಿಯಾಗಿಲ್ಲ, ರೈತರ ನಂಬಿಕೆ ಭದ್ರವಾಗಿಲ್ಲ. ಮಂಗಳವಾರ ಒಳ ಹರಿವು 5680 ಕ್ಯೂಸೆಕ್ ಇದ್ದು, ನೀರಿನ ಮಟ್ಟ 175 ಅಡಿ 11 ಇಂಚು ಇದೆ. ಒಟ್ಟು ನೀರಿನ ಸಂಗ್ರಹ 59.42 ಟಿಎಂಸಿ ನೀರು ಇದೆ ಎಂದು ಅವರು ತಿಳಿಸಿದರು.ಡ್ಯಾಂ ತುಂಬಲು ಇನ್ನೂ 12 ಟಿಎಂಸಿ ನೀರು ಬೇಕು. ಮಳೆಗಾಲದ ಹಂಗಾಮಿಗೆ ನೀರು ಕೊಡಬೇಕೋ? ಅಥವಾ ನೀರು ಸಂಗ್ರಹ ರಕ್ಷಣೆ ಮಾಡಿಕೊಂಡು ಮುಂದಿನ ಬೇಸಿಗೆ ಹಂಗಾಮಿಗೆ ಕೊಡಬೇಕೋ ಎಂಬ ವಿಚಾರಕ್ಕೆ ರೈತರು ಪರಸ್ಪರ ಬೀದಿಗಿಳಿದು ಸಂಘರ್ಷಿಸುತ್ತಿರುವಾಗ ಕಾಂಗ್ರೆಸ್ ಸರ್ಕಾರದ ಆದೇಶ ರೈತರಿಗೆ ಬರಸಿಡಿಲು ಬಂದು ಅಪ್ಪಳಿಸಿದಂತಾಗಿದೆ. ಭದ್ರಾ ನಮ್ಮ ಜಿಲ್ಲೆಯ ಜೀವನಾಡಿ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಅವರು ಹೇಳಿದರು.
ತಾಪಂ ಮಾಜಿ ಉಪಾಧ್ಯಕ್ಷ ಸಂಗನಗೌಡ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ನಿಯಮಾನುಸಾರ ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.40 ಟಿಎಂಸಿ ನೀರನ್ನು ಎತ್ತಿ ಹರಿಸುವವರೆಗೂ ಭದ್ರಾ ಡ್ಯಾಂನಿಂದ ಒಂದು ಹನಿ ನೀರು ಮೇಲ್ದಂಡೆಗೆ ಕೊಡುವಂತಿಲ್ಲ, ಕೊಡುವುದೂ ಇಲ್ಲವೆಂದು ಅಚ್ಚುಕಟ್ಟು ರೈತರು ಘೋಷಿಸಿದ್ದಾರೆ. ಅಂತಹದ್ದರಲ್ಲಿ ರಾಜ್ಯದ ಡಿ.ಕೆ.ಶಿವಕುಮಾರ್ ಸರ್ಕಾರ ಭದ್ರಾ ಅಚ್ಚುಕಟ್ಟು ರೈತರನ್ನು ಅಭದ್ರ ಸ್ಥಿತಿಗೆ ನೂಕುತ್ತಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ತಾನು ಹೊರಡಿಸಿರುವ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಬಿಡಬೇಕು ಎಂಬ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ದಾವಣಗೆರೆ ಸೇರಿದಂತೆ ಭದ್ರಾಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳ ಎಲ್ಲಾ ರೈತ ಸಂಘಟನೆಗಳು ರಾಜ್ಯ ಸರ್ಕಾರದ ಆದೇಶದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರೈತ ಮುಖಂಡರಾದ ಬಿ.ವಿರೂಪಾಕ್ಷಪ್ಪ, ಬಿ.ಬಸವರಾಜಯ್ಯ, ಲೋಕಿಕೆರೆ ಶಂಕರಮೂರ್ತಿ, ವಡ್ಡಿನಹಳ್ಳಿ ಲಿಂಗರಾಜ, ವೈ.ಆರ್.ಬಸವರಾಜಪ್ಪ, ಅವರಗೆರೆ ಸಿ.ಈಶ್ವರಪ್ಪ ಇದ್ದರು.ಫೋಟೋ
25ಕೆಡಿವಿಜಿ11ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ರೈತರ ಒಕ್ಕೂಟದಿಂದ ಮನವಿ ಅರ್ಪಿಸಲಾಯಿತು.