ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಯಾವುದೇ ಬಣ ರಾಜಕೀಯ ಕುರಿತು ನನಗೆ ಗೊತ್ತಿಲ್ಲ. ಅದು ಎಂಥ ಬಣ ಎಂಬುವುದು ಗೊತ್ತಿಲ್ಲ. ನಮ್ಮಲ್ಲಿ ಯಾವುದೇ ಬಣಗಳಿಲ್ಲ, ನಾನು ಯಾವುದೇ ಬಣಕ್ಕೂ ಸಂಬಂಧ ಪಟ್ಟ ಮನುಷ್ಯನಲ್ಲ. ನಾನೇ ಸ್ವಂತ, ನಾನೇ ಒಬ್ಬನೇ ಒಂದು ಬಣ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಹರ ಘರ ತಿರಂಗಾ ಅಭಿಯಾನದ ಅಂಗವಾಗಿ ನಗರದ ಚಿದರಂಬರ ನಗರದ ಚಿದಂಬರ ಜೋಶಿ ರೊಳ್ಳಿ ಅವರ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಹರ ಘರ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಬೆಳಗಾವಿಯಲ್ಲಿ ಅತೃಪ್ತ ಬಿಜೆಪಿ ಮುಖಂಡರ ಸಭೆಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚಿಕ್ಕೋಡಿ ಭಾಗದಲ್ಲಿ ಭಿನ್ನಾಭಿಪ್ರಾಯವಿದೆಂದು ನನಗೆ ಅನಿಸಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿರಬಹುದು. ಸೋಲಿಗೆ ಹಲವು ಕಾರಣಗಳು ಇರುತ್ತವೆ. ಪುಕ್ಕಟೆ ಹಂಚುವುದು, ಹೆಣ್ಣು ಮಕ್ಕಳಿಗೆ ಹಣ ಕೊಡುವುದು ಕಾರಣ ಆಗಿರಬಹುದು. 2019ರ ಚುನಾವಣೆಯಲ್ಲಿ 2.50 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಕಂಡಿದ್ದೆ. ಈ ಬಾರಿ ನಾನು 70,000 ಮತಗಳ ಅಂತರದಿಂದ ಗೆದ್ದಿದ್ದೇನೆ. ಈ ಬಾರಿ ಮಹಿಳೆಯರೆಲ್ಲ ನನಗೆ ಓಟು ಹಾಕಿದ್ರಾ?, ಭಾಗ್ಯಲಕ್ಷ್ಮಿ ಯೋಜನೆಯ ಪರಿಣಾಮ ಮಹಿಳಾ ಮತಗಳು ಬೀಳಲಿಲ್ಲ ಎಂದು ತಿಳಿಸಿದರು.ಹರ್‌ಘರ್ ತಿರಂಗಾ ಅಭಿಯಾನದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಈರಣ್ಣ ರಾವೂರ, ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗಡಗಿ, ನಗರ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಸುರೇಶ ಬಿರಾದಾರ, ವಿಜಯ ಜೋಶಿ, ರಾಜೇಶ ತೌಸೆ, ಕಾಂತು ಸಿಂಧೆ, ಪಾಪುಸಿಂಗ ರಜಪೂತ, ಪ್ರವೀಣ ಕೂಡಗಿ, ಸಂಪತ ಕೊವಳ್ಳಿ, ಪ್ರವೀಣ ನಾಟೀಕಾರ, ವಿನೋದ ಮಣೂರ, ಸಂತೋಷ ಕಮತರ, ಕೃಷ್ಣಾ ರಾಠೋಡ, ವೆಂಕಟೇಶ ಜೋಶಿ (ನಂದೊಡಗಿ), ವೆಂಕಟೇಶ ಜೋಶಿ ಉಪಸ್ಥಿತರಿದ್ದರು.ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು (ಆಜಾದಿ ಕಾ ಅಮೃತ ಮಹೋತ್ಸವ) ಸಂಭ್ರಮದಿಂದ ಆಚರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕು. ಮನೆ ಮನೆಯಲ್ಲೂ ತ್ರಿವರ್ಣ ಧ್ವಜದ ಮೂಲಕ ದೇಶಭಕ್ತಿಯನ್ನು ಉಂಟು ಮಾಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
-ರಮೇಶ ಜಿಗಜಿಣಗಿ, ಸಂಸದರು.