ಒತ್ತಡಗಳಿಗೆ ಬಗ್ಗಲ್ಲ; ರಸ್ತೆ ವಿಸ್ತರಣೆ ಶತಸಿದ್ಧ

| Published : Oct 21 2024, 12:44 AM IST

ಒತ್ತಡಗಳಿಗೆ ಬಗ್ಗಲ್ಲ; ರಸ್ತೆ ವಿಸ್ತರಣೆ ಶತಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಟಿಬಿ ವೃತ್ತದಿಂದ ಹುಳಿಯಾರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಯಾವ ಒತ್ತಡಗಳಿಗೂ ಬಗ್ಗುವುದಿಲ್ಲ. ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ರಸ್ತೆ ವಿಸ್ತರಣೆ ಮಾಡುವುದು ಶತಃಸಿದ್ಧ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ರಸ್ತೆ ಅಗಲೀಕರಣ ಕುರಿತಂತೆ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮಧ್ಯ ರಸ್ತೆಯಿಂದ 70 ಅಡಿ ಜಾಗ ಬಿಟ್ಟು ಕಟ್ಟಲು ಮೊದಲಿನಿಂದಲೂ ಆದೇಶವಿದೆ. ರಸ್ತೆ ಅಗಲೀಕರಣ ಸಂಬಂಧ ಕೋರ್ಟ್ ಯಾವುದೇ ತರಹದ ತಡೆಯಾಜ್ಞೆ ಕೊಟ್ಟಿಲ್ಲ. ಕಾನೂನು ರೀತಿಯಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದೆ. ಇಲ್ಲಿ ಯಾರ ಹತ್ತಿರವೂ ಕಟ್ಟಡ ಪರವಾನಗಿ ಇಲ್ಲ. ಕಾನೂನಾತ್ಮಕವಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ರಸ್ತೆ ಅಗಲೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ನಗರಸಭೆ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಸಹಕಾರವಿದೆ. ಜೊತೆಗೆ ವಿವಿಧ ಸಂಘಟನೆಗಳು, ಸಾರ್ವಜನಿಕರು, ವಕೀಲರು ಸಹಮತ ಸೂಚಿಸಿದ್ದಾರೆ. ಕಟ್ಟಡಗಳ ತೆರವು ಸಂಬಂಧ ಅ.30 ರಂದು ನ್ಯಾಯಾಲಯದ ಆದೇಶ ಗಮನಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಕಟ್ಟಡಗಳ ತೆರವಿನ ನಂತರ ಅಲ್ಲಿನ ತ್ಯಾಜ್ಯವನ್ನು ನಾವೇ ಸಾಗಿಸಬೇಕು. ಈಗಾಗಲೇ ಟಿಬಿ ವೃತ್ತದಿಂದ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಕಟ್ಟಡಗಳು ಕಾನೂನು ಪ್ರಕಾರವಾಗಿದ್ದರೆ ಪರಿಹಾರ ಕೊಡಲಾಗುತ್ತದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ಅನುದಾನ ಲಭ್ಯವಿದ್ದು ಕಾಮಗಾರಿ ಸುಸೂತ್ರವಾಗಿ ಮತ್ತು ವೇಗವಾಗಿ ನಡೆಯುತ್ತದೆ ಎಂದು ಅವರು ಹೇಳಿದರು.

ಮೊದಲಿನ ಹಂತದಲ್ಲಿ ಚಾನೆಲ್ ನಿಂದ ವೇದಾವತಿ ಕಾಲೇಜಿನವರೆಗೂ 50 ಅಡಿ ಕಾಮಗಾರಿ ಮಾಡಿದ್ದಾರೆ. ನಾವೀಗ 70 ಅಡಿ ರಸ್ತೆ ವಿಸ್ತರಣೆ ಮಾಡುತ್ತಿದ್ದೇವೆ. ಜನಗಳಿಗೆ ಕಟ್ಟಡ ಮಾಲೀಕರು ತಪ್ಪು ಮಾಹಿತಿ ರವಾನಿಸಬಾರದು. ಈ ಹಿಂದೆ 2014-15 ರಲ್ಲಿ ನಲವತ್ತು ಅಡಿ ರಸ್ತೆ ಕಟ್ಟಡಗಳ ತೆರವಿಗೆ ಗುರುತು ಮಾಡಲಾಗಿತ್ತು. ಆದರೆ ಕೆಲಸ ಶುರುವಾಗಲಿಲ್ಲ. ಈ ಬಾರಿ ರಸ್ತೆ ವಿಸ್ತರಣೆ ನಿಲ್ಲುವುದಿಲ್ಲ ಎಂದು ಖಡಾ ಖಂಡಿತವಾಗಿ ಅಧ್ಯಕ್ಷರು ಪ್ರತಿಕ್ರಿಯಿಸಿದರು.