ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಕಾಂಗ್ರೆಸ್ ಸರ್ಕಾರದ್ದು ಮೂರು ವರ್ಷಗಳ ಸಾಧನೆಯಲ್ಲ. ಅದು 300 ವೈಫಲ್ಯಗಳ ಸಾಧನೆಯಾಗಿದೆ. ಇವರ ಸರ್ಕಾರದಲ್ಲಿನ 300 ವೈಫಲ್ಯಗಳ ಸರಮಾಲೆಯನ್ನೇ ಪೋಣಿಸಿ ನಾನು ಸಿಎಂ ಸಿದ್ರಾಮಣ್ಣನ ಕೊರಳಿಗೆ ಹಾರ ಹಾಕುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ? ಒಂದೆಡೆ ಮಹಿಳೆಯರಿಗೆ ಗ್ಯಾರಂಟಿ ಕೊಟ್ಟು, ಅವರ ಗಂಡಂದಿರ ಜೇಬಿನಿಂದ ಕಿತ್ತುಕೊಂಡಿದ್ದಾರೆ. ನಿಮಗೆ ನಿಭಾಯಿಸುವ ತಾಕತ್ ಇದ್ದರೆ ಗ್ಯಾರಂಟಿ ಕೊಡಬೇಕು. ತಾಕತ್ ಇಲ್ಲದಿದ್ದರೆ ಮಾಡಬಾರದು. ಇವರ ಸರ್ಕಾರದಲ್ಲಿ ಬರಿ ಭ್ರಷ್ಟಾಚಾರವೇ ತುಂಬಿ ತುಳುಕುತ್ತಿದೆ ಎಂದು ದೂರಿದರು. ಜಗತ್ತಿನಲ್ಲಿ ಈಗ ಯುದ್ಧ ಆರಂಭವಾಗಿದ್ದು, ಅದರಿಂದ ಕೆಲ ಸಮಸ್ಯೆಗಳು ಎದುರಾಗಿವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಜನತೆ ಇತಿಹಾಸವನ್ನೇ ನಿರ್ಮಿಸಿದರು, ಇದೆಲ್ಲ ಮೋದಿ ಅವರ ಅಭಿವೃದ್ಧಿಯಿಂದ ಸಾಧ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಈರಣ್ಣ ರಾವೂರ, ವಿಜಯ ಜೋಶಿ ಇದ್ದರು.ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ. ಎಲ್ಲೆಂದರಲ್ಲಿ ಕಳ್ಳತನ, ದರೋಡೆಗಳು ನಡೆದಿವೆ. ಇವರ ಮೂರು ವರ್ಷದ ಸಾಧನೆ ಶೂನ್ಯವಾಗಿದ್ದು, ಶಾಸಕರಿಗೆ ಅನುದಾನವೇ ಕೊಟ್ಟಿಲ್ಲ. ಕೇಂದ್ರದಿಂದ ಮೋದಿಯವರು ಕೊಟ್ಟಿರುವ ರಸ್ತೆಗಳಿಗೆ ಕಾಂಗ್ರೆಸ್‌ನವರು ಭೂಮಿಪೂಜೆ ಮಾಡಿ, ತಮ್ಮ ಸರ್ಕಾರದ ರಸ್ತೆ ಎಂದು ಹೇಳುತ್ತಾರೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಪರವಾಗಿದ್ದೇವೆ ಎಂದು ಹೇಳಿ, ಅವರೆಲ್ಲರಿಗೆ ಮೀಸಲಿದ್ದ ಹಣವನ್ನೇ ಎತ್ತಿಹಾಕಿದ್ದಾರೆ. ಹಣ ನುಂಗಿದ ಕೆಲ ಮಂತ್ರಿಗಳೇ ಜೈಲಿಗೆ ಹೋಗಿದ್ದಾರೆ. ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿಯನ್ನೇ ಮರೆತಿರುವ ಇವರು ತಮ್ಮ ತಮ್ಮ ಶಕ್ತಿ ಪ್ರದರ್ಶನದಲ್ಲೇ ಕಾಲಹರಣ ಮಾಡುತ್ತಿದ್ದಾರೆ.
-ರಮೇಶ ಜಿಗಜಿಣಗಿ ಸಂಸದ, ವಿಜಯಪುರ