ಗಾಂಧೀಜಿ ವಿಚಾರಗಳ ಓದದೆ ಟೀಕೆ ಮಾಡುವುದು ಸಲ್ಲ

| Published : Jan 30 2024, 02:03 AM IST

ಸಾರಾಂಶ

ಇಂದು ಗಾಂಧಿಯ ವ್ಯಕ್ತಿ ದರ್ಶನ ಸಾಧ್ಯವಿಲ್ಲ. ಆದರೆ ಅವರ ವಿಚಾರ ದರ್ಶನ ಇಂದಿಗೂ ಸಾಧ್ಯವಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ವಿಚಾರಕ್ಕಾಗಿ ಬದುಕಬೇಕು, ಆಲೋಚನೆ ಮಾಡಬೇಕು. ಮಹಾತ್ಮಾ ಗಾಂಧಿಯ ವಿಚಾರಗಳನ್ನು ಓದದೇ ಅವರನ್ನು ಟೀಕೆ ಮಾಡುವುದು ಸಲ್ಲವೆಂದು.

ಚಿತ್ರದುರ್ಗ: ಮಹಾತ್ಮಾ ಗಾಂಧಿಯ ವಿಚಾರಗಳನ್ನು ಓದದೇ ಅವರನ್ನು ಟೀಕೆ ಮಾಡುವುದು ಸಲ್ಲವೆಂದು ಬೆಂಗಳೂರಿನ ಗಾಂಧಿ ಭವನದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿದರು.

ಗಾಂಧಿ ಭವನದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಯುವ ಸಬಲೀಕರಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ಮತ್ತು ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನ ರಜತೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ತತ್ವಪ್ರೇರಿತ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಯಾರ ವಿಚಾರಕ್ಕೆ ಬದುಕುತ್ತಾರೋ ಅವರು ನಿರಂತರವಾಗಿ ಉಳಿಯುತ್ತಾರೆ ಎಂದರು.

ಇಂದು ಗಾಂಧಿಯ ವ್ಯಕ್ತಿ ದರ್ಶನ ಸಾಧ್ಯವಿಲ್ಲ. ಆದರೆ ಅವರ ವಿಚಾರ ದರ್ಶನ ಇಂದಿಗೂ ಸಾಧ್ಯವಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ವಿಚಾರಕ್ಕಾಗಿ ಬದುಕಬೇಕು, ಆಲೋಚನೆ ಮಾಡಬೇಕು. ಪದವಿ ಪಡೆದರೆ ಪ್ರಯೋಜನವಿಲ್ಲ, ವಿಷಯವನ್ನು ಜ್ಞಾನಕ್ಕೆ ಬದಲಾಯಿಸಿಕೊಂಡು ಅದಕ್ಕೆ ಶಕ್ತಿ ತುಂಬುವಂತಹ ಕೆಲಸ ಮಾಡಬೇಕು. ಜಾತೀಯತೆ ಮತ್ತು ಮತೀಯ ಬೇಧ ಭಾವಗಳ ವಿರುದ್ಧ ಮಹಾತ್ಮ ಗಾಂಧಿ ಅವರು ಜೀವಮಾನವಿಡೀ ಹೋರಾಡಿದರು. ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು ಎಂದರು.

ಜಾತಿಯ ಪಿಡುಗು ಇಂದು ನಮ್ಮನ್ನು ಕಿತ್ತು ತಿನ್ನುತ್ತಿದೆ. ಭ್ರಷ್ಟಮುಕ್ತ ಸಮಾಜ ನಿರ್ಮಾಣ ಮಾಡಬೇಕಾದರೆ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ರೂಢಿಸಿಕೊಳ್ಳಬೇಕು. ತಾಂತ್ರಿಕತೆ ಭರಾಟೆಯಲ್ಲಿ ಮನುಷ್ಯ ಸಂಬಂಧಗಳು ನಾಶವಾಗುತ್ತಿವೆ. ಪ್ರಕೃತಿಯೊಂದಿಗಿನ ಸಂಬಂಧ ಕಳೆದುಕೊಳ್ಳುತ್ತಿದ್ದೇವೆ. ಆಹಾರ ಸಂಸ್ಕೃತಿ ಕಳೆದುಕೊಂಡರೆ ಸಂಸ್ಕೃತಿಯನ್ನೇ ತ್ಯಜಿಸಿದಂತೆ. ಸಾಮಾಜಿಕ ಜಾಲತಾಣಗಳು ಯುವ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ಮುಳುಗಿದ್ದು, ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದರು.

ಗಾಂಧಿ ಮಾದರಿ ವಕೀಲರಾಗಿದ್ದರು. ಅವರ ಆಟೋಬಯೊಗ್ರಫಿ ಬಗ್ಗೆ ಮುಖ್ಯವಾಗಿ ಕಾನೂನು ವಿದ್ಯಾರ್ಥಿಗಳು ಓದಲೇಬೇಕು. ಈ ಪುಸ್ತಕ ಓದಿದರೆ ಗಾಂಧಿ ಅವರ ಸೂಕ್ಷ್ಮ ಪರಿಚಯವಾಗಲಿದೆ. ಭಾರತ ಸರಕಾರ ಪ್ರಕಟಿಸಿರುವ ದಿ ಕಲೆಕ್ಟೆಡ್ ವಕ್ರ್ಸ್ ಆಫ್ ಮಹಾತ್ಮಗಾಂಧಿ ಪುಸ್ತಕ ಗಾಂಧೀಜಿವರ ಬದುಕನ್ನು ತೆರೆದಿಡುತ್ತದೆ. ಜಗತ್ತಿನಲ್ಲಿ ಈವರೆಗೆ ಯಾವ ವ್ಯಕ್ತಿಯ ಜೀವನದ ಬಗ್ಗೆಯೂ ಇಲ್ಲದಷ್ಟು ವಿಚಾರಗಳು ಗಾಂಧಿಯ ಬಗ್ಗೆ ಈ ಪುಸ್ತಕದಲ್ಲಿವೆ. ಅಂತಹ ಅಭೂತಪೂರ್ವ ವ್ಯಕ್ತಿತ್ವವನ್ನು ಗಾಂಧಿ ಹೊಂದಿದ್ದರು ಎಂದರು.

ಗಾಂಧೀಜಿ ಅವರು ಶಿಕ್ಷಣ ಮಾತೃ ಭಾಷೆಯಲ್ಲಿ ಆಗಬೇಕು ಎಂದಿದ್ದರು. ಒಂದೊಂದು ಗ್ರಾಮ ಗಣರಾಜ್ಯ ಆಗಬೇಕು ಎಂದು ಬಯಸಿದ್ದರು. ದೇಶದ ಕಟ್ಟಕಡೆಯ ಮನುಷ್ಯನ ಜೀವನ ಶೈಲಿ ಗಾಂಧೀಜಿ ಸ್ವೀಕಾರ ಮಾಡುತ್ತಾರೆ. ಗಾಂಧಿಯವರಲ್ಲಿ ಸರಳ ಜೀವನ ಉದಾತ್ತ ಯೋಚನೆ ಇತ್ತು. ಆದರೆ ಈಗಿನ ಪೀಳಿಗೆಯಲ್ಲಿ ಜೀವನ ಐಷಾರಾಮಿದ್ದು, ಚಿಂತನೆ ಸರಳವಾಗಿವೆ. ಹಾಗಾಗಿಯೇ ದುಸ್ಥಿತಿ ಎದುರಾಗಿದೆ. ಈ ಕಾರಣಕ್ಕಾಗಿಯೇ ಗಾಂಧಿಯವರ ಜೀವನ ಓದಬೇಕು. ಅರ್ಥ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕದಲ್ಲಿ ಗಾಂಧಿ ವಿಷಯ ಕುರಿತು ವೇಮಗಲ್ ಸೋಮಶೇಖರ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಅವರ ತತ್ವಗಳನ್ನು ಅನುಸರಿಸೋಣ. ಅವರಂತೆ ಆಲೋಚನೆ ಮಾಡೋಣ, ಸ್ವದೇಶಿ ತತ್ವ ಪಾಲಿಸಿ ಸ್ವಾವಲಂಬಿಗಳಾಗಿ ಬದುಕೋಣ ಎಂದರು.

ರಾಜ್ಯ ಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಸರಸ್ವತಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಫಾತ್ಯರಾಜನ್, ಕಾರ್ಯದರ್ಶಿ ಡಿ.ಕೆ.ಶೀಲಾ, ಪ್ರಾಚಾರ್ಯ ಎಂ.ಎಸ್. ಸುಧಾದೇವಿ, ಆಡಳಿತಾಧಿಕಾರಿ ಪ್ರೊ.ಡಿ.ಎಚ್.ನಟರಾಜ, ಅಬ್ದುಲ್ ರೆಹಮಾನ್, ಮುರುಗೇಶ್ ಇದ್ದರು.