ಸಾರಾಂಶ
- ರಕ್ತದಲ್ಲಿ ಸಹಿ ಮಾಡಿರುವ ಭಕ್ತರ ಪತ್ರ ಸ್ವೀಕರಿಸಿ, ಧೈರ್ಯ ಹೇಳಿದ ಡಾ.ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ - - - ಕನ್ನಡಪ್ರಭ ವಾರ್ತೆ ಜಗಳೂರು
ದೊಡ್ಡ ಗುರುಗಳಾದ ಶಿವಕುಮಾರ ಸ್ವಾಮಿ ಪುಣ್ಯಸ್ಮರಣೆ ಇರುವಾಗ ಬಂಡವಾಳಶಾಹಿಗಳಿಂದ ಮಠದ ಬಗ್ಗೆ ಅಪಪ್ರಚಾರ ಆಗುತ್ತಿದೆ. ಇದು ಬಂಡವಾಳಶಾಹಿಗಳು ಮತ್ತು ನಿಷ್ಟಾವಂತ ಭಕ್ತರ ಮಧ್ಯದ ಸಂಘರ್ಷವೇ ಹೊರುತು, ಗುರುಗಳು ಮತ್ತು ಶಿಷ್ಯರ ನಡುವಿನ ಸಂಘರ್ಷವಲ್ಲ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ ನುಡಿದರು.ಸಿರಿಗೆರೆಯಲ್ಲಿ ದಾವಣಗೆರೆ, ಚಿತ್ರದುರ್ಗ, ಹರಪನಹಳ್ಳಿ, ಜಗಳೂರು ತಾಲೂಕುಗಳ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಸ್ವಯಂ ಪ್ರೇರಿತವಾಗಿ ಆಗಮಿಸಿ, "ಸ್ವಾಮೀಜಿಯವರ ನಿರ್ಧಾರಕ್ಕೆ ಬದ್ಧ, ನಿಮ್ಮ ತೀರ್ಮಾನವೇ ಅಂತಿಮ " ಎಂದು ರಕ್ತದಲ್ಲಿ ಸಹಿ ಮಾಡಿರುವ ಭಕ್ತರ ಸಹಿಗಳ ಪತ್ರವನ್ನು ಸ್ವಾಮೀಜಿ ಅವರಿಗೆ ಅರ್ಪಿಸಿದರು. ಈ ವೇಳೆ ಭಕ್ತರ ಆಶೀರ್ವದಿಸಿ ಸ್ವಾಮೀಜಿ ಮಾತನಾಡಿದರು.
ಸಾಧು ಸದ್ಧರ್ಮ ಸಂಘಕ್ಕೆ ಅಧಿಕಾರ:ಪೀಠ ಖಾಲಿಯಾದರೆ ಸರ್ಕಾರ ಅಡ್ಮಿನಿಸ್ಟ್ರೇಟ್ ಮಾಡುವ ಅಧಿಕಾರಿ ಇಲ್ಲ. ಪೀಠಾಧಿಪತಿಗಳು ಆಗುವವರೆಗೆ ಸಾಧು ಸದ್ಧರ್ಮ ಸಂಘಕ್ಕೆ ಅಧಿಕಾರ ಇರುತ್ತದೆ. 15 ಜನ ಸಮಿತಿ ಮಾಡಿ ಪೀಠಾಧಿಪತಿಗಳನ್ನು ನೇಮಕ ಮಾಡುವ ಅಧಿಕಾರ ಸಂಘದ ಬೈಲಾದಲ್ಲಿ ಇರುತ್ತದೆ. ಸ್ವಾಮೀಜಿಗಳು ಇದ್ದ ಸಂದರ್ಭದಲ್ಲಿ ಸಾಧು ಸದ್ಧರ್ಮ ಸಂಘ ಪೀಠಾಧಿಪತಿಗಳ ನೇಮಕ ಮಾಡಿ, ಗುರುಗಳ ಅನುಮೋದನೆಗೆ ಕಳುಹಿಸಿ, ಅನುಮೋದನೆ ಪಡೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹಿರಿಯ ಗುರುಗಳ ಆದೇಶ ತಿರಸ್ಕರಿಸಲಿಲ್ಲ:ಈ ಹಿಂದೆ ದೊಡ್ಡ ಗುರುಗಳು ನಾನು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಪತ್ರ ಬರೆದು ನಿಮ್ಮನ್ನು ನಾನು ನಮ್ಮ ಮಠಕ್ಕೆ ಸ್ವಾಮೀಜಿ ಮಾಡಲು ತೀರ್ಮಾನಿಸಿದ್ದೇನೆ ಅಂತ ನಾಲ್ಕು ಪುಟದಷ್ಟು ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಆದರೆ ನಾವು ಮೊದಲು ಒಪ್ಪಿರಲಿಲ್ಲ. ಕೊನೆಗೆ ನಾನು ಹಿರಿಯ ಗುರುಗಳ ಆದೇಶವನ್ನು ತಿರಸ್ಕರಿಸಲಿಲ್ಲ. ನಾವು ಸ್ವಾಮೀಜಿಗಳಾಗಲು ಒಪ್ಪಿದೆವು. ಆಗ ಮಠ ಬೆಳೆಯಲು ಇನ್ನು ಹೆಚ್ಚು ಶಿಕ್ಷಣ ಅಗತ್ಯವಿದೆ ಎಂದು ಮನಗಂಡು ನನಗೆ ಉನ್ನತ ವಿದ್ಯಾಭ್ಯಾಸ ಮಾಡಲು ಅಂದು ₹50 ಸಾವಿರ ಕೊಟ್ಟು, ವಿದೇಶಕ್ಕೆ ಕಳುಹಿಸಿಕೊಟ್ಟರು. ಆದರೆ, ನಾನು ಸ್ಕಾಲರ್‌ಶಿಪ್‌ನಲ್ಲೇ ವಿದ್ಯಾಭ್ಯಾಸ ಮಾಡಿಕೊಂಡು ಬಂದೆ. ₹50 ಸಾವಿರ ಹಣ ಹಾಗೆಯೇ ಬ್ಯಾಂಕಿನಲ್ಲಿಟ್ಟು, ಬೆಳೆಯುತ್ತ ಹೋಯಿತು. ಆಗಲೂ ಸಹ ಈಗಿನಂತೆ ಅಂದು ಸಹ ಹಿರಿಯ ಗುರುಗಳ ವಿರುದ್ಧ ಕೆಲವರು ಪೀಠಾಧಿಪತಿ ನೇಮಕದ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ಸ್ಮರಿಸಿದರು.
- - - ಬಾಕ್ಸ್ * ಪೀಠಾಧಿಪತಿ ನೇಮಕ ಸ್ವಾಮೀಜಿಗಳಾದ ನೀವೇ ಮಾಡಿಮಠದ ಹೆಸರಿನಲ್ಲಿ, ಹಿಂದಿನ ಗುರುಗಳ ಹೆಸರಿನಲ್ಲಿ, ನನ್ನ ಹೆಸರಿನಲ್ಲಿ ಹಾಗೂ ಕೆಲವು ಮಠದ ಭಕ್ತರ ಹೆಸರಿನಲ್ಲೂ ಆಸ್ತಿ ಇದೆ. ಇದು ಹಿಂದಿನಂತೆ ನಡೆದು ಬಂದಿದೆ. ಸ್ವಾಮೀಜಿ ಬಗ್ಗೆ, ಮಠದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಭಕ್ತರಾದ ನಮಗೆ ಬಹಳ ಮನಸ್ಸಿಗೆ ನೋವಾಗಿದೆ ಎಂದು ಭಕ್ತರು ಸ್ವಾಮೀಜಿ ಸಮ್ಮುಖ ನೋವು ತೋಡಿಕೊಂಡರು. ಹಿಂದಿನ ಹಿರಿಯ ಗುರುಗಳು ನೇಮಕ ಮಾಡಿದ ಹಾಗೆ ಪೀಠಾಧಿಪತಿ ನೇಮಕವನ್ನು ಸ್ವಾಮೀಜಿಗಳಾದ ನೀವೇ ಮಾಡಿ, ನಿಮ್ಮ ತೀರ್ಮಾನಕ್ಕೆ ಬದ್ಧರಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಸಾಧು ಸಮಾಜದ ಮುಖಂಡ ಮಹಾಬಿಲೇಷಗೌಡ, ಸಾಧು ಸದ್ಧರ್ಮ ಸಮಾಜದ ಗುಂಡಗತ್ತಿ ಮಂಜಣ್ಣ, ಅನಿತ್ ಕುಮಾರ್ ಇತರರು ಉಪಸ್ಥಿತರಿದ್ದರು. ದಾವಣಗೆರೆ, ಹರಪನಹಳ್ಳಿ, ಚಿತ್ರದುರ್ಗ, ಜಗಳೂರು ತಾಲೂಕುಗಳು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಆಗಮಿಸಿದ್ದರು.
- - -ಟಾಪ್ ಕೋಟ್ ರಾಜಕೀಯಕ್ಕೂ, ಧರ್ಮಪೀಠಕ್ಕೂ ವ್ಯತ್ಯಾಸ ಇರುತ್ತದೆ. ಶಾಮನೂರು ಶಿವಶಂಕರಪ್ಪ ಹಿರಿಯ ವ್ಯಕ್ತಿಗಳು. ಅವರೂ ಅಪಪ್ರಚಾರ ಮಾಡುವ ಅಣಬೇರು ರಾಜಣ್ಣರಂಥ ಬಂಡವಾಳಶಾಹಿ ಜೊತೆ ಇರುವುದು ಸರಿಯಲ್ಲ. ಗುರುಗಳು ಎಂದೂ ರಾಜಕಾರಣಿಗಳಂತೆ ಮಾಜಿ ಆಗಲ್ಲ. ಪೀಠಕ್ಕೆ ಸ್ವಾಮೀಜಿ ಮಾಡಿದ ನಂತರ ದೊಡ್ಡ ಗುರುಗಳು ಆಗುತ್ತಾರೆ. ಗುರುಭಕ್ತಿ ನಿರಂತರವಾಗಿ ಪ್ರವಾಹೋಪಾದಿಯಲ್ಲಿ ಇರುತ್ತದೆ
- ಡಾ.ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ, - - - -30ಜೆ.ಎಲ್.ಆರ್.1:ಭಕ್ತರು ರಕ್ತದಲ್ಲಿ ಬರೆದ ಪತ್ರವನ್ನು ಸಿರಿಗೆರೆ ಶ್ರೀಗಳಿಗೆ ಸಮರ್ಪಿಸಲಾಯಿತು.