ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಯುತ್ತದೆ. ಇದಕ್ಕಾಗಿಯೇ ಒಂದು ಟೀಮ್ ಕೆಲಸ ಮಾಡುತ್ತಿದ್ದು, ನಾನು ನೇರವಾಗಿ ಈ ಚುನಾವಣೆ ತಂತ್ರಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಲಿಂಗಾಯತ ಮುಖಂಡರು ಪ್ರತ್ಯೇಕ ಗುಪ್ತಸಭೆ ನಡೆಸಿರುವುದು ನನ್ನ ಗಮನಕ್ಕೆ ಬಂದಿದೆ. ಅವರು ಪ್ರತ್ಯೇಕ ಸಭೆ ನಡೆಸಿದಂತೆ ನಮ್ಮ ಬೆಂಬಲಿಗರು ಕೂಡಾ ನಡೆಸಲಿದ್ದಾರೆ. ಚುನಾವಣೆ ಎಂದ ಮೇಲೆ ಇಂತಹ ಸಭೆಗಳು ಸಾಮಾನ್ಯ, ಇದರಲ್ಲಿ ವಿಶೇಷವೇನೂ ಇಲ್ಲ ಎಂದರು.ಸುಪ್ರಿಂ ಕೋರ್ಟ್ ಇಡಿ ದಾಳಿಯ ಕುರಿತು ತನ್ನದೇ ಆದ ಅಭಿಪ್ರಾಯ ವ್ಯಕ್ತ ಪಡಿಸಿದೆ. ಜೊತೆಗೆ ಮೂಡಾ ಹಗರಣದ ಕುರಿತು ಸ್ಪಷ್ಟತೆ ನೀಡಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಇಡೀ ದೇಶದಲ್ಲಿ ಇಡಿ ನಡೆಸುತ್ತಿರುವ ದಾಳಿಗಳೆಲ್ಲವೂ ಕೂಡ ರಾಜಕೀಯ ಪ್ರೇರಿತವಾಗಿವೆ. ಬೆಳಗಾವಿ ಜಿಲ್ಲೆಯ ವಿಭಜನೆಗೆ ಸಂಬಂಧಿಸಿದಂತೆ ಅನೇಕ ಬಾರಿ ನಾನು ನನ್ನ ಅಭಿಪ್ರಾಯ ವ್ಯಕ್ತ ಪಡಿಸಿರುವೆ. ಶೀಘ್ರದಲ್ಲಿಯೇ ಜಿಲ್ಲಾ ವಿಭಜನೆಯ ಬಗ್ಗೆ ನಿರ್ಣಯ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಅಮ್ಮಾಜೇಶ್ವರಿ ಕೊಟ್ಟಲಗಿ ಯಾತ ನೀರಾವರಿ ಯೋಜನೆಯಲ್ಲಿ ಕಳಪೆ ಕಾಮಗಾರಿಯಾಗುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆಸಿದವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಯ ಬಗ್ಗೆ ಪರಿಶೀಲಿಸಲಾಗುವುದು ಎಂದರು.ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಚುನಾವಣೆ ವೇಳಾಪಟ್ಟಿ ವಿಳಂಬವಾಗಿದೆ. ವಿಚಾರಣೆ ಮುಗಿದ ನಂತರ ಸರ್ಕಾರ ವೇಳಾಪಟ್ಟಿ ಪ್ರಕಟಿಸಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ ಎನ್ನುವ ಆರೋಪದ ಬಗ್ಗೆ ಇದು ಇಂದಿನ ಸಮಸ್ಯೆಯಲ್ಲ. ಇದು ಖಾಯಂ ಇರುವಂತದ್ದು, ಪಕ್ಷದ ವರಿಷ್ಠರು, ಹಿರಿಯ ನಾಯಕರ ಸಮ್ಮುಖದಲ್ಲಿ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.ಅಥಣಿ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಚಿವ ಸತೀಶ ಜಾರಕಿಹೊಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳಿ, ದಿಗ್ವಿಜಯಸಿಂಗ ಪವಾರ ದೇಸಾಯಿ, ರಾವಸಾಹೇಬ ಐಹೊಳೆ, ರಮೇಶ ಶಿಂದಗಿ, ಸಿದ್ಧಾರ್ಥ ಸಿಂಗೆ, ಶ್ಯಾಮರಾವ ಪೂಜಾರಿ, ಸಂಜೀವ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಗಲಿದ ಹಿರಿಯ ಪತ್ರಕರ್ತ ಇಟ್ನಾಳಮಠ ಮನೆಗೆ ಭೇಟಿ, ಸಾಂತ್ವಾನ
ಅಥಣಿ: ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಣದ ಕನ್ನಡಪ್ರಭದ ಹಿರಿಯ ಪತ್ರಕರ್ತ ಚನ್ನಬಸವ ಇಟ್ನಾಳಮಠ ಇತ್ತೀಚಿಗೆ ನಿಧನ ಹೊಂದದ ಹಿನ್ನೆಲೆ ಲೋಕೋಪಯೋಗಿ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಗಜಾನನ ಮಂಗಸುಳಿ, ಸದಾಶಿವ ಬೂಟಾಳಿ, ಬಸವರಾಜ ಬೂಟಾಳಿ, ರಮೇಶ ಸಿಂದಗಿ, ಸುನಿಲ ಸಂಕ, ಅಸ್ಲo ನಾಲಬಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಹಿರಿಯ ಪತ್ರಕರ್ತ ಸಿ.ಎ.ಇಟ್ನಾಳಮಠ ಓರ್ವ ಒಳ್ಳೆಯ ವಸ್ತುನಿಷ್ಠ ಬರಹಗಾರರಾಗಿದ್ದರು. ಜಿಲ್ಲೆಯ ಪ್ರಚಲಿತ ಸಮಸ್ಯೆ ಹಾಗೂ ಜಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಲೇಖನಗಳನ್ನು ನೀಡುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ನನಗೆ ನೇರವಾಗಿ ಫೋನ್ ಮೂಲಕ ಮಾಹಿತಿ ಪಡೆದುಕೊಂಡು ಸುದ್ದಿ ಮಾಡುತ್ತಿದ್ದರು. ಅವರ ಅಗಲಿಕೆಯಿಂದ ಪತ್ರಿಕಾ ರಂಗಕ್ಕೆ ನಷ್ಟವಾಗಿದೆ.
-ಸತೀಶ ಜಾರಕಿಹೊಳಿ, ಸಚಿವರು.