ಎಸ್ಎಟಿಎಸ್ ಸರ್ವರ್‌ ಸಮಸ್ಯೆಯಿಂದ ಸಿಗುತ್ತಿಲ್ಲ ಟಿಸಿ

| Published : Jun 18 2025, 02:30 AM IST

ಎಸ್ಎಟಿಎಸ್ ಸರ್ವರ್‌ ಸಮಸ್ಯೆಯಿಂದ ಸಿಗುತ್ತಿಲ್ಲ ಟಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹಾಗೂ ಪಾಲಕರ ಸಮಗ್ರ ಮಾಹಿತಿ, ಪಠ್ಯಪುಸ್ತಕ ವಿತರಣೆ, ಬಿಸಿಯೂಟ ಹಾಜರಾತಿ, ವಿದ್ಯಾರ್ಥಿ ವೇತನ, ಶೂ-ಸಾಕ್ಸ್ ವಿತರಣೆ, ಜಾತಿ-ಆದಾಯ ಪ್ರಮಾಣ ಪತ್ರ ವಿವರ, ಅಂಗವೈಕಲ್ಯದ ವಿವರ, ಬ್ಯಾಂಕ್ ಖಾತೆ ವಿವರವನ್ನು ಸ್ಯಾಟ್ಸ್‌ನಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರ ಹಾಗೂ ದಾಖಲಾತಿ ಮಾಡಿಕೊಳ್ಳಲು ಎಸ್ಎಟಿಎಸ್ (ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ) ಸರ್ವರ್ ಸಮಸ್ಯೆ ಎದುರಾಗಿದ್ದು, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವರ್ಗಾವಣೆ ಪ್ರಮಾಪತ್ರ (ಟಿಸಿ), ಅಂಕಪಟ್ಟಿ ಸಕಾಲಕ್ಕೆ ಲಭಿಸದೆ ವಿದ್ಯಾರ್ಥಿಗಳು, ಪೋಷಕರು ಶಾಲೆಗೆ ಅಲೆದಾಡುತ್ತಿದ್ದಾರೆ.

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹಾಗೂ ಪಾಲಕರ ಸಮಗ್ರ ಮಾಹಿತಿ, ಪಠ್ಯಪುಸ್ತಕ ವಿತರಣೆ, ಬಿಸಿಯೂಟ ಹಾಜರಾತಿ, ವಿದ್ಯಾರ್ಥಿ ವೇತನ, ಶೂ-ಸಾಕ್ಸ್ ವಿತರಣೆ, ಜಾತಿ-ಆದಾಯ ಪ್ರಮಾಣ ಪತ್ರ ವಿವರ, ಅಂಗವೈಕಲ್ಯದ ವಿವರ, ಬ್ಯಾಂಕ್ ಖಾತೆ ವಿವರವನ್ನು ಸ್ಯಾಟ್ಸ್‌ನಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ.

ಶಾಲೆಯ ಹಾಗೂ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಪಡೆಯಲು ಅನುಕೂಲವಾಗುವ ದೃಷ್ಟಿಯಿಂದ ಎಸ್ಎಟಿಎಸ್‌ಯನ್ನು ಜಾರಿಗೆ ತರಲಾಗಿದೆ. ಆದರೆ, 15 ದಿನಗಳಿಂದ ಎದುರಾಗಿರುವ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಸಂಕಷ್ಟ ಉಂಟು ಮಾಡಿದೆ.

ಈ ಮೊದಲು ಶಾಲೆಯ ಯಾವುದೇ ಶಿಕ್ಷಕರು, ಸಿಬ್ಬಂದಿ ಸ್ಯಾಟ್ಸ್ ವ್ಯವಸ್ಥೆಯಲ್ಲಿ ಸುಲಭವಾಗಿ ಲಾಗಿನ್ ಆಗಬಹುದಿತ್ತು. ಇದು ದುರ್ಬಳಕೆಯಾಗುವ ಸಾಧ್ಯತೆಯಿರುವ ಕಾರಣಕ್ಕೆ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೇವಲ ಮುಖ್ಯಶಿಕ್ಷಕರು ಮಾತ್ರ ಲಾಗಿನ್ ಆಗುವಂತೆ ನಿರ್ಬಂಧ ವಿಧಿಸಲಾಗಿದೆ. ಅವರು ಮಾತ್ರ ಲಾಗಿನ್ ಆಗಿ ಕೆಲಸ ಮಾಡಬೇಕಿದೆ.

ಕೆಲಸ ವಿಳಂಬ:

ಎಸ್ಎಟಿಎಸ್ ಲಾಗಿನ್ ಆಗಬೇಕಾದರೆ ಮುಖ್ಯ ಶಿಕ್ಷಕರ ಮೊಬೈಲ್ ಫೋನ್‌ಗೆ ಒಟಿಪಿ ಬರುತ್ತದೆ. ಆ ಒಟಿಪಿ ಬಳಸಿ ಲಾಗಿನ್ ಆಗಬೇಕು. ಇದು ಮುಖ್ಯ ಶಿಕ್ಷಕರಿಗೆ ಕೆಲಸ ಒತ್ತಡ ಹೆಚ್ಚಿಸಿದೆ. ಕಿರಿಕಿರಿ ಉಂಟು ಮಾಡುತ್ತಿದ್ದು ಒಟಿಪಿ ಹಾಕಿದರು ಲಾಗಿನ್ ಆಗದೇ ವಿಳಂಬವಾಗುತ್ತಿದೆ. ಇದರ ಪರಿಣಾಮ ಸರಿಯಾಗಿ ವಿದ್ಯಾರ್ಥಿಗಳಿಗೂ ವರ್ಗಾವಣೆ ಪತ್ರ ನೀಡಲು ಆಗುತ್ತಿಲ್ಲ ಇದರಿಂದ ಕೆಲಸಗಳು ವಿಳಂಬವಾಗುತ್ತಿವೆ ಎನ್ನುತ್ತಾರೆ ಶಿಕ್ಷಕರು.ಎಸ್ಎಟಿಎಸ್‌ನಲ್ಲಿ ಕೆಲಸ ಮಾಡಲು ಎಲ್ಲದಕ್ಕೂ ಒಟಿಪಿ ಕೇಳುತ್ತಿರುವ ಕಾರಣ ಹಾಗೂ ಶೈಕ್ಷಣಿಕ ವರ್ಷ ಆರಂಭದ ಹಂತದಲ್ಲಿ ಸರ್ವರ್ ಸ್ವಲ್ಪ ತೊಂದರೆಯಾಗಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.ಶಾಲಾ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಹಾಗೂ ವರ್ಗಾವಣೆ ಪ್ರಮಾಣಪತ್ರ ನೀಡಲು ಸರ್ವರ್ ಸಮಸ್ಯೆಯಿಂದ ಕೆಲಸಗಳು ಬೇಗನೆ ಆಗುತ್ತಿಲ್ಲ. ರಾತ್ರಿಯ ಸಮಯದಲ್ಲಿ ಕೆಲಸ ಮಾಡಬೇಕಿರುವ ಸ್ಥಿತಿ ಬಂದಿದೆ. ಅನಿವಾರ್ಯವಾಗಿ ಸಾಧ್ಯವಾದಷ್ಟು ಆನ್‌ಲೈನ್ ಕೆಲಸ ಮಾಡಲಾಗುತ್ತಿದೆ ಎಂದು ಶಾಲಾ ಮುಖ್ಯಶಿಕ್ಷಕರು ತಿಳಿಸಿದ್ದಾರೆ.