ನರಗುಂದ- ನವಲಗುಂದ ರೈತ ಬಂಡಾಯ ವೇದಿಕೆ
ಹುಬ್ಬಳ್ಳಿ: ಕಾವ್ಯ, ಸಾಹಿತ್ಯಕ್ಕೆ ಕೇವಲ ಭಾಷೆ ಮಾತ್ರ ಮುಖ್ಯವಲ್ಲ. ಅದು ರಾಜಕೀಯ ಪ್ರಜ್ಞೆ, ಗ್ರಹಿಕೆ ಒಳಗೊಳ್ಳದೇ ಹೋದರೆ ಅದು ವಿಚಾರಗಳನ್ನು ಹುಟ್ಟಿಸಲಾರದು. ಫ್ಯಾಸಿಸಂನ ಕರಾಳತೆ, ಆಕ್ರಮಣಶೀಲತೆಯ ಆಯಾಮಗಳನ್ನು ಹಿಡಿದಿಡುವ ಪಟ್ಟುಗಳನ್ನು ನಮ್ಮ ಕವಿಗಳು ಇನ್ನೂ ಕರಾರುವಾಕ್ಕಾಗಿ ರೂಢಿಸಿಕೊಳ್ಳಬೇಕಾಗಿದೆ ಎಂದು ಸಾಹಿತಿ, ಪ್ರಾಧ್ಯಾಪಕ ರಂಗನಾಥ ಕಂಟನಕುಂಟೆ ಅಭಿಪ್ರಾಯ ಪಟ್ಟರು.ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮೇ ಸಾಹಿತ್ಯ ಮೇಳದ "ಪ್ರಜಾಸತ್ತೆಯ ಮೇಲಿನ ದಾಳಿ: ಸೃಜನಶೀಲ ಸ್ಪಂದನೆ " ಗೋಷ್ಠಿಯಲ್ಲಿ ಅವರು ಸಾಹಿತ್ಯ ಸೃಜನೆ ಕುರಿತು ಮಾತನಾಡಿದರು. ಕನ್ನಡದ ಸಾಹಿತ್ಯ ಜಗತ್ತು ವರ್ತಮಾನದ ಬಿಕ್ಕಟ್ಟಿನಂತಹ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿಯಾಗಿ ಸರ್ವಾಧಿಕಾರಿ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇಂತಹ ಸಮಯದಲ್ಲಿ ಸಾಹಿತ್ಯ ಜಗತ್ತು ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಿದೆ ಎಂಬುದು ಮುಖ್ಯ ಎಂದರು.
ಚಿಂತಕ ಶಿವಸುಂದರ್ ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಮನುಷ್ಯ, ಮನುಷ್ಯ ನಡುವಿನ ಸಂಬಂಧ. ಪ್ರಜಾಸತ್ತೆಯ ಮೇಲೆ ದಾಳಿ ಎಂದರೆ ಅದು ಮನುಷ್ಯ ಸಂಬಂಧಗಳ ಮೇಲಿನ ದಾಳಿಯೇ ಆಗಿದೆ. ಜನರ ಮನದಲ್ಲಿ ಇದ್ದ ಬುದ್ಧ, ಅಂಬೇಡ್ಕರ್, ಗಾಂಧೀಜಿ ವಿಚಾರಗಳ ಮೇಲೆ ದಾಳಿ ಮಾಡಿ ಅಲ್ಲಿ ಸಾವರ್ಕರ್, ಗೋಳ್ವಾಲ್ಕರ್ ವಿಚಾರಗಳನ್ನು ತುಂಬುವ ಮೂಲಕ ತಾಂತ್ರಿಕವಾಗಿ ಚುನಾವಣೆಗಳಲ್ಲಿ ಜಯ ಸಾಧಿಸುವ ಪರಿಪಾಠ ಪ್ರಾರಂಭವಾಗಿದೆ ಎಂದರು.ಫ್ಯಾಸಿಸಂ ಎಂದರೆ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯಾಗಿದೆ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬಹಳ ಹಿಂದೆಯೇ ಹೇಳಿದ್ದಾರೆ. ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ ಮನಸ್ಸು ಫ್ಯಾಸಿಸ್ಟರಲ್ಲಿ ಮಾತ್ರವಲ್ಲ, ಅದರ ಬೀಜಾಂಶ ನಮ್ಮೆಲ್ಲರಲ್ಲಿಯೂ ಇರುತ್ತದೆ. ನಮ್ಮಲ್ಲಿರುವ ಈ ದುಷ್ಟತನದ ಅಂಶವನ್ನು ವ್ಯವಸ್ಥಿತವಾಗಿ ಕಳೆದ ನೂರು ವರ್ಷಗಳಿಂದ ಪೋಷಿಸಿಕೊಂಡು ಬರಲಾಗುತ್ತಿದೆ. ಅನೇಕ ಸೋಲು, ಏಳು-ಬೀಳುಗಳನ್ನು ಕಂಡು ಇಂದು ಜನತೆಯ ಸಹಮತಿಯನ್ನು ಪಡೆಯುವ ಹಂತಕ್ಕೆ, ಜನರ ಮನೋಭಾವದ ಬೆಂಬಲ ಪಡೆಯುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಇಂತಹ ಫ್ಯಾಸಿಸಂ ವಿಚಾರಗಳನ್ನು ಪೋಷಿಸುವ 25ಕ್ಕೂ ಹೆಚ್ಚು ಸಿನಿಮಾಗಳು ಬಾಲಿವುಡ್‌ನಲ್ಲಿ ನಿರ್ಮಾಣವಾಗಿ ತೆರೆ ಕಂಡಿವೆ. ಅವರಿಗೆ ಬಾಕ್ಸ್ ಆಫೀಸ್ ಸೋಲು, ಗೆಲುವು ಮುಖ್ಯವಲ್ಲ, ಜನರ ಕಿವಿಗಳಿಗೆ ವಿಚಾರಗಳನ್ನು ದಾಟಿಸುವುದೇ ಆಗಿದೆ. ಐದು ವರ್ಷದ ಚುನಾವಣೆ-ಅಧಿಕಾರ ಅವರ ಗುರಿ ಅಲ್ಲವೇ ಅಲ್ಲ. ಸಮಾಜವನ್ನು ಶಾಶ್ವತವಾಗಿ ಆಳಲು ಬೇಕಾದ ಕಾಲಾಳುಗಳನ್ನು ಎಲ್ಲೆಡೆ ಸೃಷ್ಟಿಸಿದ್ದಾರೆ ಎಂದರು.
ಎಂ.ಎಂ. ಹೆಬ್ಬಾಳ, ಡಿ.ಎಂ. ಬಡಿಗೇರ, ಸಿಕಂದರ್ ಮೀರಾನಾಯಕ್ ಇದ್ದರು. ಡಾ. ರಾಮಚಂದ್ರ ಹಂಸನೂರ ಕಾರ್ಯಕ್ರಮ ಸಂಯೋಜಿಸಿದರು.